Valakhilya Maharishi had a body the size of a thumb in Kannadaಕಥಾ ಪ್ರಸಂಗದ ಭಾವಚಿತ್ರ

ವಾಲಖಿಲ್ಯರೆಂಬವರು ಅಂಗುಷ್ಠಮಾತ್ರಪ್ರಮಾಣದ ದೇಹವನ್ನು ಹೊಂದಿದ್ದ ಋಷಿಗಳು. ಇವರು ಒಟ್ಟು ಅರವತ್ತು ಸಾವಿರ ಮಂದಿ. ಇವರ ತಂದೆ ಕ್ರತುಮಹರ್ಷಿಗಳೆಂದೂ ತಾಯಿ ಕ್ರಿಯಾದೇವಿಯೆಂದೂ ಹೇಳುತ್ತಾರೆ.

ಯಜುರ್ವೇದದ ಅರುಣ ಪ್ರಶ್ನದಲ್ಲಿ, ಭಗವಂತನು ಸೃಷ್ಟಿಗಾಗಿ ತಪಸ್ಸು ಮಾಡಿದನೆಂದೂ ಅನಂತರ ತನ್ನ ದೇಹವನ್ನು ಒದರಿದಾಗ ಅವನ ಉಗುರಿನಿಂದ (ನಖ) ವೈಖಾನಸರು ಜನಿಸಿದರೆಂದೂ ಕೂದಲಿನಿಂದ (ವಾಲಾಃ) ವಾಲಖಿಲ್ಯರ ಜನನವಾಯಿತೆಂದೂ ಹೇಳಿದೆ. ವಾಲಖಿಲ್ಯರು ಎಲ್ಲರೂ ಒಟ್ಟಿಗೇ ಇರತಕ್ಕವರು. ಅವರು ಯಾವ ಕೆಲಸವನ್ನಾದರೂ ಇರುವೆಗಳಂತೆ ಶ್ರದ್ಧೆಯಿಂದ ಒಟ್ಟಿಗೇ ಮಾಡುವವರು.

ಒಮ್ಮೆ ಕಶ್ಯಪರು ಒಂದು ಮಹಾಯಾಗವನ್ನು ಆರಂಭಿಸಿದ್ದರು. ಅದಕ್ಕೆ ಎಲ್ಲ ಋಷಿಗಳೂ ತಮ್ಮಿಂದಾದ ಸಹಾಯವನ್ನು ಮಾಡುತ್ತಿದ್ದರು. ವಾಲಖಿಲ್ಯರಿಗೆ ತಾವೂ ಯಾಗಕ್ಕೆ ಸಹಾಯಮಾಡಬೇಕೆಂದು ಮನಸ್ಸಾಯಿತು. ಅವರೆಲ್ಲ ಸೇರಿ ಒಂದು ಸಮಿತ್ತಿನ ಸಣ್ಣ ಹೊರೆಯನ್ನು ಬಹಳ ಕಷ್ಟದಿಂದ ಎತ್ತಿಕೊಂಡು ಬರುತ್ತಿದ್ದರು. ಇದರಿಂದ ಬಹಳ ಆಯಾಸಗೊಂಡ ಅವರೆಲ್ಲ ಏದುಸಿರುಬಿಡುತ್ತಿದ್ದರು.

ಅವರ ಈ ಕಾರ್ಯವನ್ನು ನೋಡಿ ಇಂದ್ರನಿಗೆ ನಗುಬಂದಿತು. ಅವನು ಅವರೆಲ್ಲರನ್ನೂ ಅಪಹಾಸ್ಯ ಮಾಡುತ್ತ ಜೋರಾಗಿ ನಕ್ಕುಬಿಟ್ಟನು. ಅವನ ಈ ದುಷ್ಕರ್ಮದಿಂದ ವಾಲಖಿಲ್ಯರುಗಳಿಗೆ ಕೋಪ ಬಂದಿತು. ಇಂದ್ರನ ಗರ್ವಭಂಗಕ್ಕಾಗಿ ಎಲ್ಲರೂ ಒಟ್ಟಿಗೆ ತಪಸ್ಸು ಮಾಡಲು ನಿರ್ಧರಿಸಿದರು. ತಮ್ಮ ತಪಸ್ಸಿನ ಪ್ರಭಾವದಿಂದ ಕಶ್ಯಪರ ಸುತನಾಗಿ ಜನಿಸುವ ಗರುಡನು ಅತ್ಯಂತ ಬಲಶಾಲಿಯಾಗಿರಬೇಕೆಂದೂ ಅವನು ಇಂದ್ರನ ಈ ಅಹಂಕಾರಕ್ಕೆ ತಕ್ಕ ಪ್ರತೀಕಾರವನ್ನು ಮಾಡಿ, ತಮಗಾದ ಅವಮಾನವನ್ನು ಹೋಗಲಾಡಿಸಬೇಕೆಂದೂ ಇಚ್ಛಿಸಿದರು. ಅಂತೆಯೇ ಇಂದ್ರನಿಗೆ ಶೀಘ್ರದಲ್ಲಿಯೇ ಗರ್ವಭಂಗವಾಗಲೆಂದು ಶಾಪವನ್ನಿತ್ತು ತಪಸ್ಸಿಗೆ ಆರಂಭಿಸಿದರು.

ಅವರೆಲ್ಲರ ತಪೋಪಬಲದ ಪ್ರಭಾವದಿಂದ ಕಶ್ಯಪ-ವಿನತೆಯರ ಸುತನಾದ ಗರುಡನು ಅತ್ಯಂತ ವೀರ್ಯವಂತನಾದನು. ಅವನು ಜನಿಸಿದ ಸಮಯದಲ್ಲಿ, ತಾಯಿ ವಿನತೆಯು ಸವತಿಯಾದ ಕದ್ರುವಿನೊಡನೆ ಪಂದ್ಯವೊಂದರಲ್ಲಿ ಸೋತು, ಅವನ ದಾಸಿಯಾಗಿದ್ದಳು. ತಾಯಿಯನ್ನು ದಾಸ್ಯದಿಂದ ವಿಮೋಚನಗೊಳಿಸಲು ಗರುಡನು ಕದ್ರುವಿನ ಮಕ್ಕಳಾದ ಸರ್ಪಗಳಿಗೆ ಅಮೃತವನ್ನು ತಂದುಕೊಡಲು ಒಪ್ಪಿದನು.

ಅದರಂತೆ ಅಮೃತವನ್ನು ತರಲು ಸ್ವರ್ಗಲೋಕದ ಕಡೆಗೆ ಹಾರತೊಡಗಿದನು. ಹಾಗೆ ಹಾರುತ್ತಿರುವಾಗ ಆಯಾಸಪರಿಹಾರಕ್ಕಾಗಿ ಒಂದು ದೊಡ್ಡ ಆಲದಮರದ ಕೊಂಬೆಯ ಮೇಲೆ ಕುಳಿತುಕೊಂಡನು. ಅವನು ಕುಳಿತೊಡನೆಯೇ ಪುಷ್ಪಪಲ್ಲವಗಳಿಂದ ಸುಶೋಭಿತವಾಗಿದ್ದ ಶತಯೋಜನ ವಿಸ್ತಾರವಿದ್ದ ಆ ಕೊಂಬೆಯು ಮುರಿದೇಹೋಯಿತು.

ಬೀಳುತ್ತಿದ್ದ ಆ ಕೊಂಬೆಯನ್ನು ಗರುಡನು ಕೆಳಗೆ ಬೀಳದಂತೆ ತನ್ನ ಕೊಕ್ಕಿನಿಂದ ಕಚ್ಚಿಕೊಂಡನು. ಅದರಲ್ಲಿದ್ದ ಪ್ರಾಣಿಪಕ್ಷಿಗಳಿಗೆ ತೊಂದರೆಯಾಗಬಾರದೆಂಬುದು ಅವನ ಉದ್ದೇಶವಾಗಿತ್ತು. ಅವನು ಆ ಕೊಂಬೆಯನ್ನು ಕೊಕ್ಕಿನಲ್ಲಿ ಹಿಡಿದು ಅದನ್ನು ಒಮ್ಮೆ ಗಮನಿಸಿ ನೋಡಿದನು. ಅದರ ಸುತ್ತಲೂ ಅಧೋಮುಖರಾಗಿ ನೇತಾಡುತ್ತ ವಾಲಖಿಲ್ಯ ಮಹರ್ಷಿಗಳೆಲ್ಲ ತಪಸ್ಸು ಮಾಡುತ್ತಿದ್ದರು. ಅವರನ್ನು ನೋಡಿ ಗರುಡನು ‘ಈ ಬ್ರಹ್ಮರ್ಷಿಗಳೆಲ್ಲ ಕೊಂಬೆಯು ಮುರಿದುಹೋದುದುನ್ನೂ ಗಮನಿಸದೆ ತಪಸ್ಸಿನಲ್ಲಿ ನಿರತರಾಗಿದ್ದಾರೆ. ನಾನೇನಾದರೂ ಈ ಕೊಂಬೆಯನ್ನು ಬಿಟ್ಟುಬಿಟ್ಟರೆ ಅದು ಕೆಳಗೆ ಬೀಳುವ ರಭಸಕ್ಕೆ ಈ ಋಷಿಗಳೆಲ್ಲರೂ ಅದರ ಕೆಳಗೆ ಸಿಲುಕಿ ಜಜ್ಜಿ ಹೋಗುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕು’ ಎಂದು ಯೋಚಿಸಿದನು.

ಅದರಂತೆ ತನಗೆ ಆಹಾರವಾಗಬೇಕಾಗಿದ್ದ ಆನೆ-ಆಮೆಗಳೆರಡನ್ನೂ ಎರಡು ಕಾಲಿನ ಉಗುರುಗಳಿಂದಲೂ ಕೊಂಬೆಯನ್ನು ಕೊಕ್ಕಿನಿಂದಲೂ ಹಿಡಿದು ಆಕಾಶದಲ್ಲಿ ಹಾರತೊಡಗಿದನು. ಆದ್ದರಿಂದಲೇ ಅವನಿಗೆ ಗರುಡ (ಭಾರವಾದ ವಸ್ತು ಗಳನ್ನು ಹಿಡಿದು ಹಾರಬಲ್ಲವನು) ಎಂದು ಹೆಸರಾಯಿತು.

ವಾಲಖಿಲ್ಯರ ವಿಷಯದಲ್ಲಿ ದಯಾಪರನಾಗಿದ್ದ ಗರುಡನು ಅವರನ್ನು ಎಲ್ಲಿ ಮತ್ತು ಹೇಗೆ ಇಳಿಸಬೇಕೆಂದು ತಿಳಿಯದೇ ಹಾರುತ್ತಲೇ ಇದ್ದು, ಕೊನೆಗೆ ತನ್ನ ತಂದೆಯು ತಪಸ್ಸು ಮಾಡುತ್ತಿದ್ದ ಗಂಧಮಾದನ ಪರ್ವತಕ್ಕೆ ಹೋದನು. ಕಶ್ಯಪರು ಮಗನ ಸಾಹಸವನ್ನು ಕಂಡು ಬೆರಗಾದರು. ಅವರಿಗೆ ವಾಲಖಿಲ್ಯ ಮಹರ್ಷಿಗಳ ಮಹಿಮೆಯ ಅರಿವಿತ್ತು. ಕೇವಲ ಸೂರ್ಯನ ಕಿರಣಗಳನ್ನೇ ಭಕ್ಷಿಸಿ ವಾಲಖಿಲ್ಯರು ತಪಸ್ಸು ಮಾಡುತ್ತಿದ್ದರು. ಅವರೇನಾದರೂ ಕೋಪಗೊಂಡರೆ ತಮ್ಮ ಮಗನನ್ನು ಭಸ್ಮಮಾಡಿಬಿಡಬಹುದೆಂದು ಅವರಿಗೆ ತಿಳಿದಿತ್ತು.

ಪುತ್ರನ ಶ್ರೇಯಸ್ಸಿಗಾಗಿ, ಸಕಲಪಾಪಗಳನ್ನೂ ಕಳೆದುಕೊಂಡಿರುವ ವಾಲಖಿಲ್ಯರನ್ನು ಕುರಿತು “ತಪೋಧನರೇ! ಗರುಡನು ಮಾಡಲು ಹೊರಟಿರುವ, ಅಮೃತವನ್ನು ತರುವ ಮಹಾಕಾರ್ಯವು ಜಗತ್ತಿನ ಹಿತಕ್ಕಾಗಿಯೇ ಇದೆ. ಇದಕ್ಕೆ ತಾವು ಅನುಮತಿಯನ್ನು ನೀಡಬೇಕು” ಎಂದು ಪ್ರಾರ್ಥಿಸಿದರು. ಆಗ ವಾಲಖಿಲ್ಯರೆಲ್ಲರೂ ಪ್ರಸನ್ನರಾಗಿ ತಾವು ಹಿಡಿದ ಕೊಂಬೆಯನ್ನು ಪರಿತ್ಯಜಿಸಿ ಪುಣ್ಯತಮವಾದ ಹಿಮವತ್‌ ಪರ್ವತಕ್ಕೆ ತಪಸ್ಸು ಮಾಡಲು ಹೊರಟುಹೋದರು. ಅವರೆಲ್ಲರಿಂದ ಪರಿತ್ಯಕ್ತವಾದ ಮರದ ಕೊಂಬೆಯನ್ನು ಗರುಡನು ತಂದೆಯ ಆಜ್ಞೆಯಂತೆ ನಿರ್ಜನವಾಗಿದ್ದ ಹಿಮಾಲಯದ ಶಿಖರದಲ್ಲಿ ಬೀಳಿಸಿ ತನ್ನ ಕೆಲಸದ ಮೇಲೆ ಹೊರಟುಹೋದನು.’

ಹೀಗೆ ವಾಲಖಿಲ್ಯ ಮಹರ್ಷಿಗಳು ಆಕಾರದಲ್ಲಿ ಚಿಕ್ಕವರಾಗಿದ್ದರೂ ಮಹರ್ಷಿಗಳ ಸಾಲಿನಲ್ಲಿ ಅತ್ಯಂತ ಪ್ರಮುಖವಾದ ಸ್ಥಾನವನ್ನು ಗಳಿಸಿಕೊಂಡಿದ್ದವರು. ಅವರನ್ನು ಮಹಾಭಾರತದಲ್ಲಿ ಬ್ರಹ್ಮರ್ಷಿಗಳೆಂದು ಸಂಬೋಧಿಸಿದೆ. ಅವರು ಕೇವಲ ಲೋಕಹಿತಕ್ಕಾಗಿ ತಪಸ್ಸಿನಲ್ಲಿ ನಿರತರಾಗಿದ್ದು ಜಗತ್ತಿನ ಆಗುಹೋಗುಗಳಿಗೆ ಕಾರಣರಾಗಿದ್ದವರು; ಖ್ಯಾತಿ ಮತ್ತು ಹಿರಿಮೆಗಳೆರಡೂ ತಮ್ಮ ಕಾರ್ಯಗಳಿಂದ ಬರಬೇಕೆ ವಿನಾ ದೈಹಿಕ ರೂಪ, ಆಕಾರಗಳಿಂದ ಅಲ್ಲ ಎಂಬುದಕ್ಕೆ ನಿದರ್ಶನರಾಗಿದ್ದವರು.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-೧

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *