ಒಂದಾನೊಂದು ಕಾಲದಲ್ಲಿ ಮಹಾವೃಷ ಎಂಬ ಸಂಸ್ಥಾನವನ್ನು ಜಾನಶ್ರುತಿ ಎಂಬ ರಾಜನು ಆಳುತ್ತಿದ್ದನು. ಸಮಸ್ತ ಜನರಿಗೆ ಉಪಯೋಗವಾಗಲಿ ಎಂದು ಅನ್ನಛತ್ರಗಳನ್ನು, ಭಾವಿ ಕೊಳವೆಗಳನ್ನು ಆಸ್ಪತ್ರೆಗಳನ್ನು ನಿರ್ಮಿಸಿ, ಸರ್ವವಿಧಗಳಲ್ಲು ಸೇವಾ ಕಾರ್ಯಕ್ಕಾಗಿ ತನ್ನನ್ನು ತಾನು ಮುಡುಪಾಗಿಟ್ಟಿದ್ದನು. ಅವನಲ್ಲಿ ದೈವ ಶ್ರದ್ಧೆ, ಶಾಸ್ತ್ರ ಶ್ರದ್ಧೆ ಮತ್ತು ಕರ್ಮ ನಿಷ್ಠುರತೆಯೂ ನೆಲೆಸಿತ್ತು. ದಾನ ಧರ್ಮಗಳಿಂದ, ಮತ್ತು ಅವನ ಜನಪರ ಕಾರ್ಯಗಳಿಂದ ಜನಪ್ರಿಯ ರಾಜನಾಗಿದ್ದನು. ಅವನ ಜನಪ್ರಿಯತೆ ಮತ್ತು ಕೀರ್ತಿ ತನ್ನ ರಾಜ್ಯದಲ್ಲಷ್ಟೇ ಅಲ್ಲದೆ, ದೂರದೂರದ ರಾಜ್ಯಗಳಲ್ಲಿಯೂ ಕೂಡ ಹಬ್ಬಿತ್ತು. ಈ ಕಾರಣದಿಂದ ಅವನಲ್ಲಿಯೂ ಕೂಡ ಕೊಂಚ ಗರ್ವದ ಮನೋಭಾವವು ತುಂಬಿತ್ತು. ಒಂದು ದಿನ ತನ್ನ ಕೆಲಸಗಳನ್ನು ಮುಗಿಸಿ ರಾತ್ರಿ ಅರಮನೆಯ ಮೇಲ್ಛಾವಣಿಯ ಮೇಲೆ ಮಲಗಿದ್ದು, ಆ ದಿನದ ತನ್ನ ಕಾರ್ಯಗಳ ಬಗ್ಗೆ ಮೆಲಕುಹಾಕುತ್ತಿದ್ದನು. ಆ ಸಮಯದಲ್ಲಿ ಎರಡು ಪಕ್ಷಿಗಳು ಆ ಅರಮನೆಯ ಮೇಲೆ ಹಾರುತ್ತಿದ್ದವು. ಅದರಲ್ಲಿ ಹಿಂದಿನ ಪಕ್ಷಿ ಮುಂದಿನ ಪಕ್ಷಿಯನ್ನುದೇಶಿಸಿ ಹೇ ಮೂರ್ಖ ಭಲಾಕ್ಷ! ಆತುರ ಪಡಬೇಡ. ನಿನ್ನ ಕೆಳಗೆ ಜಾನಶ್ರುತಿಯ ಕೀರ್ತಿಯ ಪ್ರಭೆಯನ್ನು ಕಾಣಲಾರೆಯೇ? ಆ ಕೀರ್ತಿಯ ಪ್ರಭೆಯು ಆಕಾಶವನ್ನೆಲ್ಲಾ ವ್ಯಾಪಿಸಿದೆ ಮತ್ತು ಅದರಿಂದ ನೀನು ಸುಟ್ಟುಭಸ್ಮವಾದರೂ ಆಶ್ಚರ್ಯವೇನಿಲ್ಲ ಜಾಗ್ರತೆ ಎಂದು ನುಡಿಯಿತು. ಪಕ್ಷಿಗಳ ಭಾಷೆಯನ್ನು ಅರಿತಿದ್ದ ಜಾನಶ್ರುತಿ ರಾಜನು ತನ್ನ ಉತ್ಕೃಷ್ಟತೆಯು ಆಕಾಶವನ್ನು ವ್ಯಾಪಿಸುತ್ತಿರುವುದನ್ನು ತಿಳಿದು ಇನ್ನಷ್ಟು ಹಿಗ್ಗುತ್ತಾನೆ. ಅದೇ ವೇಳೆಗೆ ಮುಂದಿದ್ದ ಪಕ್ಷಿಯು ಹಿಂತಿರುಗಿ, ನೀನು ಯಾರ ಕೀರ್ತಿಯ ಬಗ್ಗೆ ಇಷ್ಟು ಹೊಗಳುತ್ತಿರುವೆ? ನೀನು ಹೇಳುವುದನ್ನು ಕೇಳಿದರೆ ಏನೋ ತಳ್ಳುವಗಾಡಿಯ “ರೈಕ್ಷನ ಕೀರ್ತಿ” ಎಂಬಂತೆ ಮಾತನಾಡುತ್ತಿರುವೆ. ರೈಕ್ಷನ ಕೀರ್ತಿಯಾದರೋ ಮೂರು ಲೋಕವನ್ನೂ ವ್ಯಾಪಿಸಿ ಸಮಸ್ತ ಆನಂದವನ್ನು ಪಡೆದಿದ್ದಾನೆ. ಈ ವಾಕ್ಯಗಳನ್ನು ಕೇಳಿ ರಾಜನು ಮಂತ್ರಮುಗ್ಧನಾಗಿ, ತನಗಿಂತ ಕೀರ್ತಿವಂತನಾದ ರೈಕ್ಷನಾರಿರಬಹುದು ಎಂದು ಕುತೂಹಲದಿಂದ ರಾಜಭಟರನ್ನು ರೈಕ್ಷನ ಹುಡುಕಾಟಕ್ಕಾಗಿ ಸರ್ವದಿಕ್ಕುಗಳಲ್ಲು ನಿಯೋಜಿಸುತ್ತಾನೆ. ರಾಜಧಾನಿ ನಗರಗಳಲ್ಲಿ ಹುಡುಕಿ ಸೋತುಬಂದ ರಾಜಭಟರಿಗೆ ರಾಜನು ಹಳ್ಳಿಗಳಲ್ಲೋ, ನದೀ ತೀರದಲ್ಲೋ, ದೇವಸ್ಥಾನದ ಬಳಿಯಲ್ಲೋ ಹುಡುಕಲು ಆದೇಶಿಸುತ್ತಾನೆ. ರಾಜನ ಆದೇಶದಂತೆ ಹುಡುಕುತ್ತಾ ಹೋದ ರಾಜಭಟರ ಕಣ್ಣಿಗೆ ಒಂದು ಹಳ್ಳಿಯಲ್ಲಿ ಒಂದು ಗಾಡಿಯಡಿಯಲ್ಲಿ ನೋಡಲು ಅಷ್ಟೇನು ಸುಂದರವಲ್ಲದ ವ್ಯಕ್ತಿಯನ್ನು ಕಂಡು ಅವನೇ ರೈಕ್ಷನೆಂದು ಖಾತರಿಪಡಿಸಿಕೊಂಡು ರಾಜನಿಗೆ ವಿಚಾರವನ್ನು ಮುಟ್ಟಿಸುತ್ತಾರೆ. ಆನಂದಭರಿತನಾದ ರಾಜ ತನ್ನ ಪರಿವಾರದೊಂದಿಗೆ, ಗೋವುಗಳನ್ನು ಮತ್ತು ಧನಕನಕಾದಿಗಳನ್ನು ದಾನಕ್ಕೆಂದು ಕೊಂಡೊಯ್ಯುತ್ತಾನೆ. ರೈಕ್ಷನ ಮುಂದೆ ತಾನು ತಂದಿರುವ ಸಂಪತ್ತನ್ನೆಲ್ಲಾ ತೋರಿಸಿ, ‘ಹೇ ಮಹಾತ್ಮ! ಇವೆಲ್ಲವೂ ನಿನ್ನವೇ ಎಂದು ತಿಳಿ. ನಿನ್ನ ಅಪಾರಕೀರ್ತಿಗೆ ಕಾರಣವಾಗಿರುವ ವಿದ್ಯೆಯನ್ನು ನನಗೂ ತಿಳಿಸಿಕೊಡಿ ಎನ್ನುತ್ತಾನೆ. ಕೋಪಗೊಂಡ ರೈಕ್ಷ “ಎಲೈ ಮೂರ್ಖ! ಹಣದಿಂದ ವಿದ್ಯೆಯನ್ನು ಕೊಳ್ಳಲು ಸಾಧ್ಯವೇ! ನಿನ್ನ ಗೋವುಗಳು, ಧನಸಂಪತ್ತು ನಿನಗೇ ಇರಲಿ. ಇಂಥ ಗುಣಹೊಂದಿರುವವನಾದ ನೀನು ಗುಣ ಶೂದ್ರನೇ ಸರಿ. ತೊಲಗು ಇಲ್ಲಿಂದ ಎಂದು ನುಡಿದನು. ರಾಜನಿಗೆ ಅವಮಾನವಾದರೂ ರೈಕ್ಷನ ಮಾತಿನ ಹಿಂದಿನ ಉದ್ದೇಶವನ್ನರಿತು, ಹಿಂದಿರುಗಿ ರೈಕ್ಷನ ಬಗ್ಗೆ ಅವನ ವ್ಯಕ್ತಿತ್ವದ ಬಗ್ಗೆ ವಿದ್ಯೆಯ ಬಗ್ಗೆ ವ್ಯಾಕುಲನಾಗಿ ಯೋಚಿಸುತ್ತಿದ್ದನು. ಕೆಲವು ದಿನಗಳ ಬಳಿಕ ಇನ್ನಷ್ಟು ಸಂಪತ್ತು ಮತ್ತು ಪ್ರಾಣ ಸದೃಶಳಾದ ಮಗಳನ್ನೂ ಕರೆದೊಯ್ದು ರೈಕ್ಷನಿಗೆ, ‘ಸಮಸ್ತವೂ ನಿಮ್ಮದೇ. ಎಲ್ಲವನ್ನೂ ನಿಮಗೆ ಅರ್ಪಿಸುತ್ತಿದ್ದೇನೆ. ಮಗಳನ್ನೂ ನಿಮಗೆ ಕನ್ಯಾದಾನ ಮಾಡಲು ಸಿದ್ಧನಿದ್ದೇನೆ. ದಯಮಾಡಿ ನನಗೆ ಉಪದೇಶ ನೀಡಿ ಎಂದಾಗ ಅವನಲ್ಲಿದ್ದ ವಿನಯ, ಸಮರ್ಪಣಾಭಾವ, ವಿದ್ಯೆಯ ಮೇಲಿರುವ ಹಂಬಲವನ್ನು ಗಮನಿಸಿ ರೈಕ್ಷ ಸಂವರ್ಗವಿದ್ಯೆಯನ್ನು ಜಾನಶ್ರುತಿಗೆ ಉಪದೇಶಿಸುತ್ತಾನೆ. ಈ ಕಥೆಯಿಂದ ನಾವು ಕಲಿಯಬಹುದಾದ ಕೆಲವು ಅಂಶಗಳು 1) ದಾನದ ಶ್ರೇಷ್ಠತೆ ಮತ್ತು ಅದರಿಂದ ಆಗುವ ಚಿತ್ತಶುದ್ಧಿ 2) ದಾನ ಮಾಡುವಾಗ ಯಾವುದೇ ಗರ್ವವಿರಬಾರದು 3) ಗುರುವಿನ ಅವಶ್ಯಕತೆ ಮತ್ತು ಹುಡುಕಾಟ ನಿಜವಾದ ಸಂತರು ಹೊರಗಿನಿಂದ ಸಾಮಾನ್ಯರಂತಿದ್ದರೂ ಆಂತರಿಕವಾಗಿ ವಿಶಿಷ್ಟವಾಗಿರುತ್ತಾರೆ.4) ಶಿರವನ್ನೇ ಗುರುವಿಗೆ ಅರ್ಪಿಸಿದರೂ ಅದು ಕೇವಲ ತೃಣವೇ ಎಂಬಂತೆ ನಮ್ಮಲ್ಲಿ ಸರ್ವಸಮರ್ಪಣಾಭಾವ ಜಾಗೃತಿ 5) ಉಪನಿಷತ್ತಿನಲ್ಲಿ ಪ್ರತಿಪಾದ್ಯವಾದ ಆಧ್ಯಾತ್ಮಿಕ ವಿದ್ಯೆಯಿಂದ ಮಾತ್ರವೇ ನಿಜವಾದ ಆನಂದ, ಕೀರ್ತಿ ಲಭಿಸುವುದು. ಈ ಎಲ್ಲಾ ಪಾಠಗಳು ನಮ್ಮ ಜೀವನದಲ್ಲಿ ದಾನ-ಧರ್ಮವನ್ನು ಮಾಡುವುದರ ಮೂಲಕ ಚಿತ್ತಶುದ್ಧಿಯನ್ನು ಸಂಪಾದಿಸಿ, ಗುರುವನ್ನಾಶ್ರಯಿಸಿ ವಿದ್ಯೆಯನ್ನು ಗಳಿಸಲು ದಾರಿದೀಪವಾಗಲಿ ಎಂದು ಹಾರೈಸುತ್ತೇವೆ. (ಛಾಂದೋಗ್ಯ ಉಪನಿಷತ್ತು) ಲೇಖಕರು: ಶ್ರೀ. ಪ್ರಮೋದ್ ನಟರಾಜ್ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಉಪನಿಷತ್ ಕಥಾಮಾಲ: ದ..ದ..ದ..ಉಪನಿಷತ್ತಿನ ಕಥೆಗಳು ಸಾರ್ಥಕ ಜೀವನಕ್ಕೆ ದಾರಿದೀಪಗಳು -2 ಉಪನಿಷತ್ತಿನ ಕಥೆಗಳು: ದೇವತೆಗಳ ಅಹಂ ಮುರಿದ ಭಗವತಿ ಹೈಮವತಿ ಉಮೆ