ಆಶ್ವಲಾಯನರು ಋಗ್ರೇದಕಾಲದ ಮಹರ್ಷಿಗಳು. ಈ ವೇದದ ಒಂದು ಶಾಖೆಯು ಆಶ್ವಲಾಯನ ಶಾಖೆಯೆಂದೇ ಹೆಸರು ಪಡೆದಿದೆ. ಆಶ್ವಲಾಯನರು ಶೌನಕಮುನಿಗಳ ಶಿಷ್ಯರು. ಪ್ರಶೋಪನಿಷತ್ತಿನಲ್ಲಿ ಪರಬ್ರಹ್ಮವನ್ನು ಅನ್ವೇಷಿಸುತ್ತಿರುವ ಬ್ರಾಹ್ಮಣರೂ ಬ್ರಹ್ಮನಿಷ್ಠರೂ ಆದ ಆರುಜನ ಶಿಷ್ಯರು ಪಿಪ್ಪಲಾದ ಮಹರ್ಷಿಗಳ ಬಳಿಗೆ ಬಂದರೆಂದು ಹೇಳಲಾಗಿದೆ. ಈ ಆರು ಜನರಲ್ಲಿ ಕೌಸಲ್ಯ ಎನ್ನುವವರೂ ಸೇರಿದ್ದರು. ಅವರು ಅಶ್ವಲರ ಪುತ್ರರಾದುದರಿಂದ ಅವರಿಗೆ ಆಶ್ವಲಾಯನರೆಂಬ ಹೆಸರೂ ಇತ್ತೆಂದು ಶಾಂಕರಭಾಷ್ಯವು ವಿವರಿಸಿದೆ. ಇವರು ‘ಪ್ರಾಣವು ಎಲ್ಲಿಂದ ಹುಟ್ಟುತ್ತದೆ? ಹೇಗೆ ಶರೀರವನ್ನು ಪ್ರವೇಶಿಸುತ್ತದೆ? ಹೇಗೆ ಬೇರೆ ಬೇರೆ ಸ್ಥಾನಗಳು ಮತ್ತು ಕೆಲಸಗಳಲ್ಲಿ ವಿಭಕ್ತವಾಗುತ್ತದೆ? ಹೇಗೆ ಶರೀರದಿಂದ ಹೊರಗೆ ಹೋಗುತ್ತದೆ?’ ಎಂದು ಪ್ರಾಣವಿಜ್ಞಾನದ ಎಲ್ಲ ರಹಸ್ಯಗಳನ್ನೂ ಗುರುಗಳಿಂದ ತಿಳಿಯಲು ಬಯಸಿ ಪ್ರಶ್ನಿಸಿದರು. ಹೀಗೆ ಆಶ್ವಲಾಯನರು ವೇದದ ಪೂರ್ವೋತ್ತರ ಭಾಗಗಳೆರಡರಲ್ಲೂ ಪ್ರಖ್ಯಾತರಾಗಿದ್ದವರು. ಆಶ್ವಲಾಯನರು ಬ್ರಹ್ಮನಿಷ್ಠರಾದ ಮಹರ್ಷಿಗಳೇ ಆಗಿದ್ದರೆಂಬುದಕ್ಕೆ ನಮಗೆ ಬೃಹದಾರಣ್ಯಕೋಪನಿಷತ್ತಿನಲ್ಲಿ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಜನಕನು ಯಜ್ಞವೊಂದನ್ನು ಮಾಡಿ, ಯಾಜಕರಿಗೆಲ್ಲರಿಗೂ ಯಥೇಚ್ಛ ದಕ್ಷಿಣೆ ನೀಡಿದನು. ಅಲ್ಲಿ ಬ್ರಹ್ಮವಿಷಯಕವಾದ ಚರ್ಚೆಗೆ ಅವಕಾಶವಾಗುವಂತೆ, ‘ಬ್ರಹ್ಮಜ್ಞಾನಿಯಾದವನಿಗೆ ಸಾವಿರ ಗೋವುಗಳನ್ನು ಕೊಡುವುದಾಗಿ’ ಘೋಷಿಸಿದನು. ಸಭೆಯಲ್ಲಿ ದೇಶದ ವಿವಿಧ ಭಾಗಗಳಿಂದ ವಿದ್ವಾಂಸರು ಬಂದು ನೆರೆದಿದ್ದರೂ ಗೋವುಗಳನ್ನು ಸ್ವೀಕರಿಸಲು ಯಾರೂ ಮುಂದೆ ಬರಲಿಲ್ಲ. ಆಗ ಯಾಜ್ಞವಲ್ಕರು ಈ ಪಣವನ್ನು ಧೈರ್ಯವಾಗಿ ಸ್ವೀಕರಿಸಿ, ಹಸುಗಳನ್ನು ಹೊಡೆದುಕೊಂಡು ಹೋಗುವಂತೆ ಶಿಷ್ಯನಾದ ಸಾಮಶ್ರವನಿಗೆ ಹೇಳಿದರು. ಆಗ ಉಳಿದ ಬ್ರಾಹ್ಮಣರು ಕ್ರುದ್ಧರಾಗಿ ಅವರನ್ನು ಪರೀಕ್ಷಿಸಲು ಪ್ರಶ್ನೆಗಳ ಮಳೆಯನ್ನೇ ಸುರಿಸಿದರು. ಹೀಗೆ ಪ್ರಶ್ನೆಗಳನ್ನು ಕೇಳಿದವರಲ್ಲಿ ಅಶ್ವಲರೇ ಮೊದಲಿಗರು. ಅಶ್ವಲರು ಜನಕನು ಮಾಡಿದ ಯಜ್ಞದಲ್ಲಿ ಹೋತೃವಾಗಿದ್ದರು. ಅಶ್ವಲರು ತಾವೇ ಬ್ರಹ್ಮಷ್ಠರೆಂಬ ಅಭಿಮಾನವುಳ್ಳವರಾಗಿದ್ದರೆಂದು ಶಂಕರರು ಭಾಷ್ಯದಲ್ಲಿ ಹೇಳಿರುತ್ತಾರೆ. ಮಹಾಭಾರತದ ಅನುಶಾಸನಪರ್ವದಲ್ಲಿ ಶರತಲ್ಪದಲ್ಲಿದ್ದ ಭೀಷ್ಮರನ್ನು ನೋಡಲು ಬಂದ ಮುನಿಗಳಲ್ಲಿ ಆಶ್ವಲಾಯನರ ಹೆಸರೂ ಬರುತ್ತದೆ. ಅಲ್ಲಿ ಅವರನ್ನು ವಿಶ್ವಾಮಿತ್ರರ ವಂಶದವರೆಂದು ಉಲ್ಲೇಖಿಸಿದೆ. ವಿಶ್ವಾಮಿತ್ರರ ಪುತ್ರರಲ್ಲಿ ಒಬ್ಬರೆಂದೂ ಕೆಲವರು ಹೇಳುತ್ತಾರೆ. ನಾಲ್ಕು ವೇದಗಳಿಗೂ ಅನೇಕ ಶಾಖೆಗಳು ಇವೆ. ವೇದವನ್ನು ನಾಲ್ಕು ಭಾಗವಾಗಿ ವಿಂಗಡಿಸಿದ ವ್ಯಾಸರು ತಮ್ಮ ನಾಲ್ಕು ಶಿಷ್ಯರಿಗೆ ಅವುಗಳನ್ನು ಕಲಿಸಿದರು. ಆ ನಾಲ್ಕು ಜನ ಶಿಷ್ಯರು ಮುಂದೆ ತಮ್ಮ ಶಿಷ್ಯರಿಗೆ ಹೇಳಿಕೊಡುತ್ತ ಹೋದರು. ಈ ಶಿಷ್ಯರು ಕೆಲವು ಸಲ ತಾವು ಮಾಡುತ್ತಿರುವ ಯಜ್ಞಗಳಿಗೆ ತಕ್ಕಂತೆ ಕೆಲವು ಮಂತ್ರಗಳನ್ನು ಹೊಂದಿಸಿಕೊಳ್ಳುವುದೋ ಬಿಡುವುದೋ ಮಾಡಿರಬಹುದು. ಅವರ ಮುಂದಿನ ಶಿಷ್ಯರು ಅವರನ್ನೇ ಅನುಸರಿಸಿದರು. ಹೀಗಾಗಿ ಆಶ್ವಲಾಯನರ ಶಿಷ್ಯರು ಅನುಸರಿಸಿದ ಶಾಖೆಗೆ ಅವರ ಹೆಸರೇ ಉಳಿಯಿತು. ಆಶ್ವಲಾಯನರು ತಮ್ಮ ಶಾಖೆಯು ಉಳಿಯುವಂತೆ ಸೂತ್ರಗಳನ್ನು ರಚಿಸಿದುದೂ ಇದಕ್ಕೆ ಕಾರಣವಿರಬಹುದು. ಇವರ ಶಾಖೆಯು ಋಗ್ವದಕ್ಕೆ ಸಂಬಂಧಿಸಿದುದು. ಆಶ್ವಲಾಯನರು ನಾಲ್ಕು ಕೃತಿಗಳನ್ನು ರಚಿಸಿರುವುದಾಗಿ ಉಲ್ಲೇಖಗಳು ದೊರೆಯುತ್ತವೆಯಾದರೂ ಈಗ ಪ್ರಚಾರದಲ್ಲಿರುವುದು ಆಶ್ವಲಾಯನ ಶೌತಸೂತ್ರ ಮತ್ತು ಗೃಹ್ಯಸೂತ್ರಗಳು ಮಾತ್ರ. ಶೌತಸೂತ್ರಗಳು ಐತರೇಯ ಬ್ರಾಹ್ಮಣವನ್ನು ಆಧರಿಸಿವೆ. ಇದರಲ್ಲಿ ಹನ್ನೆರಡು ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯದಲ್ಲಿಯೂ ಕಾಂಡಗಳೆಂಬ ಉಪವಿಭಾಗಗಳಿವೆ. ಇಂತಹ ಒಟ್ಟು 144 ಕಾಂಡ ಗಳಿವೆ. ಈ ಕಾಂಡಗಳು ದೀರ್ಘವಾದ ಗದ್ಯವಾಕ್ಯಗಳ ರೂಪದಲ್ಲಿವೆ. ಈ ಕೃತಿಯು ಹೋತೃವಿನ ಕರ್ತವ್ಯಗಳನ್ನು ವಿಸ್ತಾರವಾಗಿ ನಿರೂಪಿಸುತ್ತದೆ. ಹೋತೃವು ಯಜ್ಞದಲ್ಲಿ ಋಗ್ರೇದಮಂತ್ರಗಳನ್ನು ಪಠಿಸುವುದರಿಂದ ಮತ್ತು ಆಶ್ವಲಾಯನರ ಸೂತ್ರಗಳು ಋಗ್ರೇದಕ್ಕೆ ಅಗ್ನಾಧಾನ, ಪಿತೃಯಜ್ಞ, ಆಗಯಣಿ, ಚಾತುರ್ಮಾಸ್ಯ, ಸೌತ್ರಾಮಣಿ ಮತ್ತು ಮೀಸಲಾಗಿರುವುದರಿಂದ ಇದು ಸಹಜವೇ ಆಗಿದೆ. ದರ್ಶಪೂರ್ಣಮಾಸಗಳು, ಸೋಮಯಾಗಗಳು ಇದರಲ್ಲಿ ಪ್ರಧಾನವಾಗಿ ಚರ್ಚಿಸಲ್ಪಟ್ಟಿವೆ. ಗೃಹ್ಯಸೂತ್ರದಲ್ಲಿ ನಾಲ್ಕು ಅಧ್ಯಾಯಗಳಿದ್ದು, ಅವು ನಲವತ್ತೆಂಟು ಖಂಡಿಕೆಗಳಾಗಿ ವಿಭಾಗಿಸಲ್ಪಟ್ಟಿವೆ. ಇದರಲ್ಲಿ ಪಾಕಯಜ್ಞ, ಬಲಿಹರಣ, ಷೋಡಶ ಸಂಸ್ಕಾರಗಳು ವಿಶೇಷವಾಗಿ ವಿವರಿಸಲ್ಪಟ್ಟಿವೆ. ವೇದಮಂತ್ರಗಳನ್ನು ಉಚ್ಚರಿಸಲು ನಿಯಮಗಳನ್ನು ವಿಧಿಸಿರುವುದು ಮತ್ತು ಅದನ್ನೇ ಒಂದು ಅಧ್ಯಾಯವಾಗಿ ವರ್ಣಿಸಿರುವುದು ಈ ಕೃತಿಯ ವಿಶೇಷ. ಈ ಕೃತಿಯಲ್ಲಿ ಅನೇಕ ಪುರಾತನ ಮಹರ್ಷಿಗಳ ಉಲ್ಲೇಖವೂ ದೊರೆಯುತ್ತದೆ. ಈ ಹೆಸರುಗಳು ಬೇರೆ ಕಡೆಗಳಲ್ಲಿ ಲಭ್ಯವಿಲ್ಲದಿರುವುದರಿಂದ ಅವರ ದರ್ಶಕತ್ವಗಳಿಗೆ ಈ ಕೃತಿಗಳೇ ಸಾಕ್ಷಿಯಾಗಿವೆ. ಆಶ್ವಲಾಯನರ ಗುರುಗಳಾದ ಶೌನಕರು ಸಾವಿರ ಭಾಗಗಳುಳ್ಳ ಸೂತ್ರಗ್ರಂಥ ವನ್ನು ಬರೆದಿದ್ದರೆಂದೂ ಅದಕ್ಕಿಂತ ಸಮರ್ಪಕವಾದ, ಸುಲಭವಾದ, ಅನುಸರಿಸಲು ಯೋಗ್ಯವಾದ ಸೂತ್ರಗಳನ್ನು ಆಶ್ವಲಾಯನರು ರಚಿಸಿದರೆಂದೂ ಹೇಳುತ್ತಾರೆ. ಋಗ್ವದದಲ್ಲಿ ಆಶ್ವಲಾಯನ ಶಾಖೆಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಪ್ರಸಿದ್ಧರಾಗಿರುತ್ತಾರೆ. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಛಾಂದೋಗೋಪನಿಷತ್ತಿನ ಈ ಮಂತ್ರ ಜಪಿಸಿ 116 ವರ್ಷ ಬದುಕಿದ್ದ ಐತರೇಯ ಮಹರ್ಷಿ ತ್ರಿಮೂರ್ತಿಗಳ ಅಂಶಾವತಾರ ಶ್ರೀ ದತ್ತಾತ್ರೇಯ ಮಹರ್ಷಿಗಳು