ಐತರೇಯರ ಪೂರ್ಣಹೆಸರು ಮಹಿದಾಸ ಐತರೇಯರು. ಇವರು ಋಗ್ವೇದದಲ್ಲಿ ಬರುವ ಐತರೇಯ ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತುಗಳ ದ್ರಷ್ಟಾರರು. ಇವೆಲ್ಲವೂ ಮಹರ್ಷಿಗಳ ಹೆಸರಿನಿಂದಲೇ ಪ್ರಸಿದ್ಧವಾಗಿವೆ. ಛಾಂದೋಗೋಪನಿಷತ್ತಿನ ಮೂರನೆಯ ಅಧ್ಯಾಯದ 16ನೇಯ ಖಂಡವು ದೀರ್ಘಜೀವನಕ್ಕಾಗಿ ಉಪಾಸನೆ ಮಾಡುವ ಪುರುಷವಿದ್ಯೆಯನ್ನು ಬೋಧಿಸುತ್ತದೆ. ಇದರ ಉಪಾಸನೆಯನ್ನು ಮಾಡಿದವನು ರೋಗವಿಲ್ಲದವನಾಗುತ್ತಾನೆ. ಇವರಲ್ಲಿ ಪ್ರಾಣಿಗಳನ್ನೆಲ್ಲ ರುದ್ರರು ಮತ್ತು ಆದಿತ್ಯರು ಎಂದು ಉಪಾಸನೆ ಮಾಡುತ್ತಾರೆ. ಈ ಯಜ್ಞದರ್ಶನವನ್ನು ಅರಿತುಕೊಂಡವರು ಐತರೇಯ ಮಹರ್ಷಿಗಳೆಂದು ಅದರಲ್ಲಿ ಹೇಳಿದೆ. ಅವರು, ಅಂದರೆ ಮಹಿದಾಸರು ಇದನ್ನು ಅರಿತುಕೊಂಡು ನಿಯಮಪೂರ್ವಕವಾಗಿ ತಾವೇ ಉಪಾಸನೆಮಾಡಿ, ಈ ಮಂತ್ರದ ಪ್ರಭಾವವನ್ನು ತೋರಿಸಿಕೊಟ್ಟರು. ಅವರು 116 ವರ್ಷಗಳ ಕಾಲ ಆರೋಗ್ಯವಾಗಿ ಬದುಕಿದ್ದರೆಂದೂ ಈ ಉಪಾಸನೆಯನ್ನು ಮಾಡಿದವರೆಲ್ಲರೂ ಹಾಗೆಯೇ ದೀರ್ಘಾಯುಷ್ಯವನ್ನು ಪಡೆಯುವರೆಂದೂ ಉಪನಿಷತ್ತು ಹೇಳುತ್ತದೆ. ಮುಂದಕ್ಕೆ ಈ ಪುರುಷಯಜ್ಞದ ದೀಕ್ಷೆಗಳು, ಹೋಮಗಳು, ದಕ್ಷಿಣೆಗಳು ಮುಂತಾದ ವಿವರಗಳನ್ನು ಉಪನಿಷತ್ತು ಒದಗಿಸುತ್ತದೆ. ನಾವು ಮಾಡುವ ಪ್ರತಿಯೊಂದನ್ನೂ ಪರಮಾತ್ಮನ ಉಪಾಸನೆಯಂತೆ ವಿಧಿವತ್ತಾಗಿ ನಿಷ್ಠೆಯಿಂದ ಮಾಡಿದರೆ, ಯುಕ್ತಾಹಾರವಿಹಾರನಾಗಿದ್ದರೆ ಆರೋಗ್ಯವಾಗಿ ಬಾಳಲು ಸಾಧ್ಯ ಎಂದೂ ಬಾಹ್ಯಶುದ್ಧಿಯನ್ನು ಹೊಂದಿ ತಪಸ್ಸು, ದಾನ, ಆರ್ಜವ, ಅಹಿಂಸೆ, ಸತ್ಯವಚನಗಳನ್ನು ಈ ಯಜ್ಞದಲ್ಲಿ ದಕ್ಷಿಣೆಯಾಗಿ ಬಳಸಬೇಕೆಂದೂ ಮಹರ್ಷಿಗಳು ಹೇಳಿರುತ್ತಾರೆ. ಇಂತಹ ಶುದ್ಧವಾದ ಜೀವನವನ್ನು ನಡೆಸುವುದೇ ಒಂದು ಯಜ್ಞವೆಂದೂ ಅದರ ಫಲವೇ ದೀರ್ಘಾಯುಷ್ಯವೆಂದೂ ಈ ಉಪನಿಷತ್ತಿನ ಮೂಲಕ ಜಗತ್ತಿಗೆ ಸಂದೇಶವನ್ನು ಕೊಟ್ಟವರು, ಸ್ವತಃ ತಾವೂ ಹಾಗೆಯೇ ಬದುಕಿದವರು ಐತರೇಯ ಮಹರ್ಷಿಗಳು, ಪುರಾಣಗಳ ಪ್ರಕಾರ, ಐತರೇಯರು ‘ಇತರಾ’ ಎಂಬುವವಳ ಮಗ. ಆದ್ದರಿಂದಲೇ ಅವರಿಗೆ ಐತರೇಯ ಎಂಬ ಹೆಸರು ಬಂದಿರುವುದು. ಇವರ ತಂದೆಯ ಹೆಸರು ಮಾಂಡೂಕಿ, ಐತರೇಯರಿಗೆ ಬಹಳ ವರ್ಷಗಳವರೆಗೆ ಮಾತನಾಡಲು ಬರುತ್ತಿರಲಿಲ್ಲವೆಂದು ಹೇಳುತ್ತಾರೆ. ತಾಯಿಗೆ ತನ್ನ ಮಗನು ಮೂಕನಾಗಿರಬಹುದೆಂದು ಭಯವಾಯಿತು. ಅವಳು ಭೂದೇವಿ(ಮಹೀ)ಯನ್ನು ಪ್ರಾರ್ಥಿಸಿ, ಹಲವು ವ್ರತಗಳನ್ನು ಮಾಡಿದಳು ಮತ್ತು ಅದ್ವಿತೀಯ ಮೇಧಾಶಕ್ತಿಯನ್ನು ಕರುಣಿಸಿದಳು. ಅದರಿಂದಾಗಿ ಮಗುವು ಮಹೀದಾಸನೆಂದು ಕರೆಯಲಡತೊಡಗಿತು. ಈ ರೀತಿ ದೈವೀಕೃಪೆಗೆ ಪಾತ್ರರಾದ ಅವರು ಅಪಾರ ವೈದಿಕಸಾಹಿತ್ಯವನ್ನು ಸೃಷ್ಟಿಸುವುದರಲ್ಲಿ ಶಕ್ತರಾದರು. ಐತರೇಯರು ವಾಸುದೇವನ ಪರಮಭಕ್ತರಾಗಿದ್ದರೆಂದು ಹೇಳುತ್ತಾರೆ. ಇವರು ತಮ್ಮ ಜೀವನಪೂರ್ತಿ, ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ದ್ವಾದಶಾಕ್ಷರಿ: ಮಂತ್ರವನ್ನು ಜಪಿಸುತ್ತಿದ್ದರಂತೆ. ಇವರ ಪತ್ನಿ ಹರಿಮೇಧನೆಂಬ ಬ್ರಾಹ್ಮಣನ ಪುತ್ರಿ ಸಾಕ್ಷಾತ್ ವಾಸುದೇವನ ಮೂರ್ತಿಯೇ ಇವರ ಕನಸಿನಲ್ಲಿ ಕಾಣಿಸಿಕೊಂಡು, ಜೀವನದ ಎರಡನೆಯ ಆಶ್ರಮವಾದ ಗೃಹಸ್ಥಧರ್ಮವನ್ನು ಸ್ವೀಕರಿಸಬೇಕೆಂದೂ ಮಾತಾಪಿತೃಗಳನ್ನು ಉದ್ಧಾರ ಮಾಡಬೇಕೆಂದೂ ಆಜ್ಞೆ ಮಾಡಿತಂತೆ) ಅದರಂತೆ ಐತರೇಯರು ಹರಿಮೇಧನ ಬಳಿಗೆ ಹೋದರು. ಇವರು ಅಲ್ಲಿಗೆ ಹೋದಾಗ ಹರಿಮೇಧನು ಯಜ್ಞವೊಂದನ್ನು ಮಾಡುತ್ತಿದ್ದನು. ಐತರೇಯರು ತಮ್ಮ ದಿವ್ಯಜ್ಞಾನದಿಂದ ಹರಿಮೇಧನನ್ನು ಮೆಚ್ಚಿಸಿ, ಅವನ ಪುತ್ರಿಯನ್ನು ವಿವಾಹವಾಗಿ, ಗೃಹಸ್ಥಧರ್ಮವನ್ನು ಸ್ವೀಕರಿಸಿದರು. ಮುಂದೆ ಸಾಕಷ್ಟು ಯಜ್ಞಯಾಗಾದಿಗಳಲ್ಲಿ ಭಾಗವಹಿಸಿದರು. ಅವರು ದರ್ಶಿಸಿರುವ ಮಂತ್ರಗಳೆಲ್ಲ ಯಜ್ಞಶಾಲೆಗಳಲ್ಲಿಯೇ ಅವರಿಗೆ ಸ್ಪುರಿಸಲ್ಪಟ್ಟವು. ಪ್ರತಿಯೊಂದು ವೇದದಲ್ಲಿಯೂ ಸಂಹಿತೆ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತುಗಳೆಂಬ ನಾಲ್ಕು ಭಾಗಗಳಿವೆ. ಋಗ್ವದಕ್ಕೆ ಐತರೇಯ ಮತ್ತು ಸಾಂಖ್ಯಾಯನಗಳೆಂಬ ಎರಡು ಆರಣ್ಯಕಗಳಿವೆ. ಐತರೇಯ ಆರಣ್ಯಕವು ಇದೇ ಹೆಸರಿನ ಮುನಿಪ್ರಣೀತವಾದುದು. ಇದರಲ್ಲಿ ಪ್ರಥಮ, ದ್ವಿತೀಯ ಮುಂತಾಗಿ ಐದು ಉಪವಿಭಾಗಗಳಿವೆ. ಇವುಗಳಲ್ಲಿ ಒಟ್ಟು ಹದಿನೆಂಟು ಅಧ್ಯಾಯಗಳಿವೆ. ಇವುಗಳನ್ನು ಮತ್ತೆ ಖಂಡಗಳಾಗಿ ವಿಭಾಗಿಸಲಾಗಿದೆ. ಸತ್ರಯಾಗದ ಭಾಗವಾದ ಮಹಾವ್ರತ, ನಿಷೇವಲ್ಯಶಾಸ್ತ್ರ, ಪ್ರಾಣೋಪಾಸನೆ, ಸೋಮರಸವನ್ನು ಹಿಂಡುವ ವಿಧಾನಗಳು ಈ ಆರಣ್ಯಕದ ಪ್ರಮುಖ ಅಂಶಗಳು. ಕೆಲವು ಉಪಾಸನೆಗಳು ಮತ್ತು ಅವುಗಳ ಫಲ, ಸಂಹಿತಾ ಮುಂತಾದ ವೇದಪಾಠಗಳ ಕ್ರಮ, ಅರಿಷ್ಟಗಳು ಮತ್ತು ಶಕುನಗಳು ಇಲ್ಲಿ ವಿವರವಾಗಿ ಹೇಳಲ್ಪಟ್ಟಿವೆ. ಶಾಕಲ್ಯ, ಮಾಂಡೂಕೇಯ, ಪಾಂಚಾಲಚಂಡ ಮತ್ತು ತಾಕ್ಷರು ಈ ಉಪಾಸನೆಗಳನ್ನು ಪ್ರಚುರಪಡಿಸಿದವರೆಂದು ಇಲ್ಲಿ ಹೇಳಿದೆ. ನಾಲ್ಕನೆಯ ಆರಣ್ಯಕದಲ್ಲಿ ಮಾಹಾನಾಮ್ಮಿ ಮಂತ್ರಗಳನ್ನೂ ಐದನೆಯ ಆರಣ್ಯಕದಲ್ಲಿ ಮಹಾವ್ರತದ ವಿವರಗಳನ್ನೂ ಕಾಣಬಹುದು. ಕೆಲವರ ಪ್ರಕಾರ ಆ ಆರಣ್ಯಕದ ಮೊದಲ ಮೂರು ಅಧ್ಯಾಯಗಳು ಮಾತ್ರ ಐತರೇಯರದೆಂದೂ, ನಾಲ್ಕು ಮತ್ತು ಐದನೆಯ ಅಧ್ಯಾಯಗಳು ಆಶ್ವಲಾಯನ ಮತ್ತು ಅವರ ಗುರು ಶೌನಕರದ್ದೆಂದೂ ಅಭಿಪ್ರಾಯವಿದೆ. ಋಗ್ವದದಲ್ಲಿ ಎರಡು ಬ್ರಾಹ್ಮಣಗಳಿವೆ. ಐತರೇಯ ಬ್ರಾಹ್ಮಣವು ಗದ್ಯರೂಪದಲ್ಲಿದ್ದು ಯಜ್ಞಗಳ ವಿವರಣೆಗಳನ್ನು ಒಳಗೊಂಡಿದೆ. ಇನ್ನೊಂದನ್ನು ಕೌಶೀತಕೀ ಬ್ರಾಹ್ಮಣವೆಂದು ಕರೆಯುತ್ತಾರೆ. ಐತರೇಯವು ಕೌಶೀತಕೀಗಿಂತ ಗಾತ್ರದಲ್ಲಿ ದೊಡ್ಡದು. ಇದು ಈಗ ಲಭ್ಯವಿರುವುದಕ್ಕಿಂತಲೂ ವಿಸ್ತ್ರತವಾಗಿದ್ದಿದ್ದಿರಬಹುದು ಎಂಬ ಅಭಿಪ್ರಾಯವೂ ಇದೆ. ಈಗಿರುವುದರಲ್ಲಿಯೇ ಎಂಟು ಪಂಚಿಕೆಗಳಿದ್ದು, ಪ್ರತಿಯೊಂದರಲ್ಲಿಯೂ ಐದೈದು ಅಧ್ಯಾಯಗಳಿವೆ. ಇವುಗಳಲ್ಲಿ ಒಟ್ಟು ಇನ್ನೂರೆಂಬತ್ತೈದು ಸಣ್ಣ ಭಾಗಗಳಿವೆ. ಇವುಗಳನ್ನು ಖಂಡಿಕೆಗಳೆಂದು ಕರೆಯುತ್ತಾರೆ. ಇದರ ಭಾಷೆ ಬಹಳ ಪ್ರಾಚೀನವಾದುದಾಗಿದ್ದು, ಸಂಹಿತೆಯ ಭಾಷೆಯನ್ನೇ ಹೋಲುತ್ತದೆ. ಇದರಿಂದ ಐತರೇಯರು ಬಹಳ ಪ್ರಾಚೀನ ಕಾಲದವರೆಂಬುದು ಸ್ಪಷ್ಟವಾಗುತ್ತದೆ. ಇದರಲ್ಲಿ ಉಚ್ಛ, ಅತಿರಾತ್ರ, ಷೋಡಶಿ, ಸತ್ರಯಾಗಗಳು ಮುಂತಾದ ಅನೇಕ ಯಜ್ಞಗಳ ಪ್ರಯೋಗವಿವರಣೆಗಳಿವೆ. ಈ ಬ್ರಾಹ್ಮಣದಲ್ಲಿ ವಿಷ್ಣುವಿಗೆ ವಿಶೇಷ ಸ್ಥಾನದ ಕಲ್ಪನೆ ಪ್ರಾರಂಭವಾದುದನ್ನು ಕಾಣುತ್ತೇವೆ. ಐತರೇಯರು ಸ್ವತಃ ವಿಷ್ಣುಭಕ್ತರೆಂದು ಹಿಂದೆಯೇ ನೋಡಿದ್ದೇವೆ. ಈಗ ಲಭ್ಯವಿಲ್ಲದಿರುವ ಅನೇಕ ಶಾಖೆಗಳ ಹೆಸರುಗಳನ್ನೂ ಇದರಲ್ಲಿ ಕಾಣುತ್ತೇವೆ. ಋಗ್ವದದಲ್ಲಿ ಕಾಣದ ಕೆಲವು ಋಕ್ಕುಗಳೂ ಇದರಲ್ಲಿ ಇರುವುದು, ಅಂದು ಇದ್ದ ಬೇರೆಬೇರೆ ಶಾಖೆಗಳ ಅಸ್ತಿತ್ವವನ್ನು ದೃಢೀಕರಿಸುತ್ತದೆ. ಇದರಲ್ಲಿ ಹೇಳಲಾಗಿರುವ ಯಜ್ಞಗಳನ್ನು ಆಚರಿಸಿ ಕೀರ್ತಿಯನ್ನು ಪಡೆದ ರಾಜರ ಹೆಸರುಗಳೂ ಉಲ್ಲೇಖಿಸಲ್ಪಟ್ಟಿವೆ. ಐತರೇಯ ಉಪನಿಷತ್ತು ಪ್ರಸಿದ್ಧವಾದ ದಶೋಪನಿಷತ್ತುಗಳಲ್ಲಿ ಒಂದೆನಿಸಿದೆ. ಐತರೇಯ ಆರಣ್ಯಕದ ಎರಡನೆಯ ಭಾಗದ ನಾಲ್ಕು, ಐದು ಮತ್ತು ಆರನೆಯ ಅಧ್ಯಾಯಗಳು ಇದರಲ್ಲಿ ಅಡಕವಾಗಿವೆ. ಸೃಷ್ಟಿವರ್ಣನೆಯಿಂದ ಆರಂಭವಾಗುವ ಈ ಉಪನಿಷತ್ತು ಉತ್ಪತ್ತಿ, ಅವುಗಳ ಆಹಾರಗಳು ಮುಂತಾದವುಗಳನ್ನು ವರ್ಣಿಸುತ್ತ, ಮಹಾವಾಕ್ಯವಾದ ‘ಪ್ರಜ್ಞಾನಂ ಬ್ರಹ್ಮ’ ಎಂಬ ಜ್ಞಾನದ ವಿವರಣೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಇಂತಹ ಪ್ರಮುಖ ವೇದಸಾಹಿತ್ಯಕ್ಕೆ ಕಾರಣರು ಐತರೇಯರು. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಸಮುದ್ರವನ್ನೇ ಬಂಜರು ಮಾಡಿದ್ದ ಉತಥ್ಯ ಮಹರ್ಷಿ ಅಶ್ವಲರ ಪುತ್ರ, ಬ್ರಹ್ಮನಿಷ್ಠ ಆಶ್ವಲಾಯನ ಮಹರ್ಷಿ