Tanu Maharishi, whose body was the size of a human little fingerAI ಚಿತ್ರ

ಬದರೀಕ್ಷೇತ್ರದಲ್ಲಿ ನರ-ನಾರಾಯಣ ಮಹರ್ಷಿಗಳ ಆಶ್ರಮವು ಪ್ರಸಿದ್ಧವಾದುದು. ಅಲ್ಲಿ ರಮಣೀಯವಾದ ಬದರೀವೃಕ್ಷವಿದೆ. ಅಲ್ಲಿರುವ ಆಕಾಶಗಂಗೆಯ ಕುಂಡವು ಪವಿತ್ರವಾದುದಾಗಿದೆ. ಅದು ಅನೇಕ ಮಹರ್ಷಿಗಳಿಗೆ ಮೊದಲಿನಿಂದಲೂ ಆಶ್ರಯಧಾಮವಾಗಿದೆ. ಇಂತಹ ಪರಿಸರದಲ್ಲಿ ನರ-ನಾರಾಯಣರ ಆಶ್ರಮದ ಸಮೀಪದಲ್ಲಿಯೇ ಮತ್ತೊಂದು ಆಶ್ರಮವಿದ್ದಿತು. ಅದರಲ್ಲಿ ಕೃಷ್ಣಾಜಿನದ ಮೇಲೆ ಕುಳಿತು ನಾರುಮಡಿಯನ್ನು ಧರಿಸಿ ತಪೋಮಗ್ನರಾಗಿದ್ದ ಮಹರ್ಷಿಯೊಬ್ಬರಿದ್ದರು.

ಅವರು ಅತ್ಯಂತ ಕೃಶರಾಗಿಯೂ, ಬಹಳ ಎತ್ತರವಾಗಿಯೂ ಇದ್ದರು. ಅವರ ಶರೀರವು ಸಾಮಾನ್ಯ ಮನುಷ್ಯರ ಎತ್ತರಕ್ಕಿಂತ ಸುಮಾರು ಎಂಟುಪಟ್ಟು ಹೆಚ್ಚಾಗಿದ್ದಿತು. ಶರೀರದ ಗಾತ್ರವು ಮನುಷ್ಯನ ಕಿರುಬೆರಳಿನಷ್ಟು ಸಣ್ಣದಾಗಿದ್ದಿತು. ಅವರನ್ನು ಎಲ್ಲರೂ ತನು ಮಹರ್ಷಿಯೆಂದು ಕರೆಯುತ್ತಿದ್ದರು. ಮಹರ್ಷಿಯ ಉಳಿದ ಎಲ್ಲ ಅಂಗಾಂಗಗಳೂ ಈ ಪ್ರಮಾಣದಲ್ಲಿಯೇ ಇದ್ದವು.

ಮುಖ, ಕುತ್ತಿಗೆ, ತೋಳುಗಳು, ಕಾಲುಗಳು, ಸ್ಪಷ್ಟವಾಗಿ ಪರಮಾದ್ಭುತವಾಗಿ ಕಾಣುತ್ತಿದ್ದವು. ಅವರ ಮಾತು ಮತ್ತು ಕೃತಿಗಳು ಉಳಿದೆಲ್ಲ ಮನುಷ್ಯರಂತೆ ಸಾಧಾರಣವಾಗಿಯೇ ಇದ್ದವು. ಆದರೆ ಅವರ ಆಕಾರವು ಮಾತ್ರ ಜನಸಾಮಾನ್ಯರಿಗೆ ಭಯವನ್ನುಂಟುಮಾಡುವುದಾಗಿತ್ತು. ಮಹರ್ಷಿಗಳೆಲ್ಲ ಅವರ ತಪಃಪ್ರಭಾವವನ್ನು ಗುರುತಿಸಿ ಅವರನ್ನು ಗೌರವಿಸುತ್ತಿದ್ದರು.

ತಮ್ಮ ಆಶ್ರಮಕ್ಕೆ ಬಂದವರನ್ನು ಮಹರ್ಷಿಯು ಆದರ ಪೂರ್ವಕ ಸತ್ಕರಿಸಿ, ಧರ್ಮಾರ್ಥಯುಕ್ತ ಉಪದೇಶಗಳನ್ನು ನೀಡುತ್ತಿದ್ದರು. ಋಷಭಯೋಗಿಗಳಂತಹ ಮಹಾತ್ಮರೂ ಕೂಡಾ ಅವರನ್ನು ಸಂದರ್ಶಿಸಲು ನಿಯತವಾಗಿ ಬರುತ್ತಿದ್ದರು.

ಮಹರ್ಷಿಯ ದೇಹವು ಹೀಗೆ ಕೃಶವಾಗಿರುವುದಕ್ಕೆ ಒಂದು ಕಥೆಯನ್ನು ಮಹರ್ಷಿಗಳೇ ಋಷಭರೊಂದಿಗೆ ಹೇಳಿದ್ದರು :

ಅವರು ಬಹಳ ಪೂರ್ವದಲ್ಲಿ ಒಂದು ಬಾರಿ, ಒಬ್ಬ ರಾಜಕುಮಾರನ ಬಳಿಗೆ ಹೋಗಿ ಸುವರ್ಣಕಲಶವನ್ನೂ ನಾರುಮಡಿಗಳನ್ನೂ ಕೊಡುವಂತೆ ಪ್ರಾರ್ಥಿಸಿದರು. ಆ ರಾಜಕುಮಾರನ ಹೆಸರು ಭೂರಿದ್ಯುಮ್ನ, ಅವನು ಧನಮದದಿಂದ ಉನ್ಮತ್ತನಾಗಿದ್ದನು. ಆವಶ್ಯಕವಸ್ತುಗಳಿಗಾಗಿ ಬೇಡಿದ ಬ್ರಾಹ್ಮಣನನ್ನು ಅವಹೇಳನ ಮಾಡಿದುದಲ್ಲದೆ, ಅವನ ಪ್ರಾರ್ಥನೆಯನ್ನೂ ಅಂಗೀಕರಿಸಲಿಲ್ಲ.

ಅವನ ತಂದೆಯಾದ ವೀರದ್ಯುಮ್ನ ಮಹಾರಾಜನೂ ಬ್ರಾಹ್ಮಣನಿಗೆ ವಿಶೇಷವಾದ ಮರ್ಯಾದೆಯನ್ನು ತೋರಿಸದೆ, ಅವನ ಆಶೆಯನ್ನು ಭಂಗಗೊಳಿಸಿದನು. ಅದರಿಂದ ಖಿನ್ನನಾದ ಬ್ರಾಹ್ಮಣನು ಯಾವುದೇ ಕಾರಣದಿಂದಲೂ ರಾಜರಿಂದಾಗಲೀ ಇತರ ವರ್ಣದವರಿಂದಾಗಲೀ ಕೊಡಲ್ಪಡುವ ಯಾವುದೇ ದಾನವನ್ನು ಸ್ವೀಕರಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿ, ದೀರ್ಘವಾದ ತಪಸ್ಸಿನಲ್ಲಿ ಮಗ್ನನಾದನು. ಬಹಳ ಕಾಲದವರೆಗೂ ಸ್ಥಿರವಾಗಿ ಉಳಿಯುವ ಆಸೆಯು ಮೂರ್ಖನಾದ ಮನುಷ್ಯನನ್ನು ಉದ್ಯಮಶೀಲನನ್ನಾಗಿ ಮಾಡುತ್ತದೆ.

ಸಾಧಾರಣ ಜನರಾದರೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಪದೇಪದೇ ಪ್ರಯತ್ನ ಮಾಡುತ್ತಾರೆ. ಒಬ್ಬ ಧನಿಕನು ಕೊಡದಿದ್ದರೆ ಮತ್ತೊಬ್ಬನನ್ನು ಆಶ್ರಯಿಸುತ್ತಾರೆ. ಹಲವು ರೀತಿಯ ರತ್ನಗಳಿಂದ ಹೇಗಾದರೂ ತಮ್ಮ ಅಪೇಕ್ಷೆಗಳನ್ನು ಪೂರೈಸಿಕೊಂಡು ತೃಪ್ತರಾಗುತ್ತಾರೆ. ಆದರೆ ಬ್ರಾಹ್ಮಣನು ಮಾತ್ರ ಅವಮಾನಕ್ಕೆ ಕಾರಣವಾದ ಆಸೆಯನ್ನೇ ಮನಸ್ಸಿನಿಂದ ಕಿತ್ತೊಗೆಯಲು ನಿರ್ಧರಿಸಿ ತಪಸ್ಸಿನಲ್ಲಿ ನಿರತನಾದನು.

ಹೀಗೆ ತಪಸ್ಸು ಮಾಡುತ್ತ ತನ್ನ ದೇಹವನ್ನೂ ಕೃಶಗೊಳಿಸಿದನು. ಅವನ ಆಶೆಗಳೂ ಕೃಶವಾದವು. ತಪಸ್ಸಿನ ಮಹತ್ತ್ವ ಮಾತ್ರ ಆಕಾಶಕ್ಕೆ ಏರಿತು. ಅಂತೆಯೇ ಅವನ ದೇಹವೂ ಎತ್ತರವಾಗಿ ಬೆಳೆಯಿತು. ಹೀಗೆ ಋಷಿಯು ತನ್ನ ತಪಸ್ಸಿನಿಂದ ವಿಲಕ್ಷಣ ದೇಹವನ್ನೂ ವಿಶಾಲವಾದ ಕೀರ್ತಿಯನ್ನೂ ಸಂಪಾದಿಸಿದರು.

ತನು ಮಹರ್ಷಿಗಳನ್ನು ಅವಮಾನಿಸಿದ ರಾಜಕುಮಾರನು ಒಮ್ಮೆ ಬೇಟೆಯಾಡಲು ಅರಣ್ಯಕ್ಕೆ ಹೋದನು. ಅಲ್ಲಿ ಅವನು ಪ್ರಾಣಿಗಳನ್ನು ಕೊಲ್ಲುವುದರಲ್ಲಿಯೇ ಆಸಕ್ತನಾಗಿ ಅರಣ್ಯದಲ್ಲಿ ಬಹುದೂರ ಹೊರಟುಹೋದನು. ಗಹನವಾದ ಅರಣ್ಯದಲ್ಲಿ ದಾರಿತಪ್ಪಿದ ಅವನು ತನ್ನ ಊರಿಗೆ ಹಿಂದಿರುಗಲು ಅಸಮರ್ಥನಾಗಿ, ಹಸಿವು ನೀರಡಿಕೆಗಳಿಂದ ಬಹಳ ಕಷ್ಟಕ್ಕೆ ಈಡಾದನು. ಬಹಳ ದಿನಗಳು ಕಳೆದರೂ ಅವನಿಗೆ ಆ ಕಾಡಿನಿಂದ ತಪ್ಪಿಸಿಕೊಂಡು ಹೊರಬರಲು ಆಗಲಿಲ್ಲ. ಭೂರಿದ್ಯುಮ್ನನ ತಂದೆಯಾದ ವೀರದ್ಯುಮ್ನ ಮಹಾರಾಜನೂ ಮಗನನ್ನು ಹುಡುಕುತ್ತ ಕಾಡಿಗೆ ಬಂದನು. ಅವನು ಮಗನನ್ನೇ ಸ್ಮರಿಸುತ್ತ ಬಹಳ ದುಃಖಿಸುತ್ತಿದ್ದನು.

‘ನನ್ನ ಮಗನನ್ನು ಈಗ ಕಾಣುವೆನು; ಇಲ್ಲಿಯೇ ಈಗ ಸಿಕ್ಕಿಬಿಡುತ್ತಾನೆ’ ಎಂಬ ಆಶಾಭಾವನೆಯಿಂದ ಕಾಡಿನಲ್ಲಿ ಸೈನ್ಯಸಮೇತನಾಗಿ ಅಲೆಯುತ್ತಿದ್ದನು. ಒಮ್ಮೊಮ್ಮೆ, ‘ತನ್ನ ಮಗನು ಯಾವುದಾದರೂ ಕ್ರೂರಪ್ರಾಣಿಗೆ ತುತ್ತಾಗಿರಬಹುದೆ? ಯಾರಾದರೂ ದರೋಡೆಕೋರರು ಕೊಂದುಬಿಟ್ಟಿರಬಹುದೇ?’ ಎಂದು ಚಿಂತಿಸುವನು. ಮರುಕ್ಷಣದಲ್ಲಿಯೇ ತನ್ನ ಮಗನು ಪರಮಧಾರ್ಮಿಕನೆಂದೂ, ಅವನಿಗೆ ಏನೂ ಕೆಡುಕಾಗಿಲ್ಲವೆಂದೂ ಭರವಸೆ ತಾಳುವನು. ತನ್ನ ಮಗನಲ್ಲಿ ಇಲ್ಲದ ಗುಣಗಳನ್ನೆಲ್ಲ ಆರೋಪಿಸಿ, ಇಂತಹ ತನ್ನ ಒಬ್ಬನೇ ಮಗನು ಹೀಗೆ ಅರಣ್ಯದಲ್ಲಿ ಕಳೆದುಹೋದನಲ್ಲಾ! ಎಂದು ಪುನಃ ಪುನಃ ಹೇಳಿಕೊಳ್ಳುತ್ತಿದ್ದನು.

ಈ ರಾಜನು ಪುಣ್ಯವಶದಿಂದ ತನುಮಹರ್ಷಿಗಳ ಆಶ್ರಮಕ್ಕೆ ಬಂದನು. ಮುನಿಗಳಿಗೆ ನಮಸ್ಕರಿಸಿ ತನ್ನ ಕಷ್ಟವನ್ನು ತೋಡಿಕೊಂಡನು. “ನನ್ನ ಮಗನ ದರ್ಶನವು ದುರ್ಲಭವಾಗಿದ್ದರೂ ಅವನನ್ನು ನೋಡಿಯೇ ತೀರಬೇಕೆಂಬ ಆಸೆಯು ನನಗೆ ಬಹಳವಾಗಿದೆ. ಅವನನ್ನು ಕಾಣದಿದ್ದರೆ ನಾನು ಮೃತ್ಯುವಶನಾಗುತ್ತೇನೆ. ಇದರಲ್ಲಿ ಸಂಶಯವೇ ಇಲ್ಲ” ಎಂದು ದುಃಖಿಸಿದನು. ಮುನಿಶ್ರೇಷ್ಠರಾದ ತನುಮಹರ್ಷಿ ಮುಹೂರ್ತಕಾಲ ತಲೆಯನ್ನು ತಗ್ಗಿಸಿಕೊಂಡು ಧ್ಯಾನಾಸಕ್ತರಾಗಿ ಕುಳಿತಿದ್ದರು. ಅನಂತರ ರಾಜನನ್ನು ಕುರಿತು, “ವೀರದ್ಯುಮ್ನ! ಈ ಹಿಂದೆ ನಿನ್ನ ಮಗನು ಮೂರ್ಖಬುದ್ಧಿ ಯನ್ನಾಶ್ರಯಿಸಿ ಪೂಜ್ಯರಾದ ಬ್ರಾಹ್ಮಣರೊಬ್ಬರನ್ನು ಅವಮಾನಗೊಳಿಸಿದ್ದಾನೆ.

ಹಿಂದೊಮ್ಮೆ ಆ ಬ್ರಾಹ್ಮಣ ನಿನ್ನ ಮಗನ ಬಳಿಗೆ ಹೋಗಿ ಸುವರ್ಣಕಲಶವನ್ನೂ ನಾರುಮಡಿಯನ್ನೂ ಪ್ರಾರ್ಥಿಸಿದನು. ನಿನ್ನ ಮಗನು ಅವನ ಪ್ರಾರ್ಥನೆಯನ್ನು ನಡೆಸಿಕೊಡಲಿಲ್ಲ. ಅದರಿಂದ ಆ ವಿಪ್ರನು ಖಿನ್ನನೂ ದುಃಖಿತನೂ ಹತಾಶನೂ ಆದನು. ಅದರ ಫಲವನ್ನು ರಾಜಕುಮಾರನು ಈಗ ಅನುಭವಿಸುತ್ತಿದ್ದಾನೆ” ಎಂದು ಹೇಳಿದರು. ಆದರೆ ಆ ಬ್ರಾಹ್ಮಣನು ತಾನೇ ಆಗಿದ್ದೆನೆಂದು ಹೇಳಲಿಲ್ಲ.

ಮಹರ್ಷಿಯ ಮಾತನ್ನು ಕೇಳಿ ವೀರದ್ಯುಮ್ನನು ದುಃಖಿತನಾದನು. ಹೇಗಾದರೂ ಕರುಣೆ ತೋರಬೇಕೆಂದು ಬೇಡಿಕೊಳ್ಳಹತ್ತಿದನು. ಮಹರ್ಷಿಗಳು ರಾಜನಿಗೆ ತಪೋವನದಲ್ಲಿ ಸಿಗುವ ವಸ್ತುಗಳಿಂದ ಅರ್ಥ್ಯಪಾದ್ಯಾದಿಗಳನ್ನು ಸಮರ್ಪಿಸಿ ಕಂದಮೂಲಗಳಿಂದ ಸತ್ಕರಿಸಿದರು, ವೀರದ್ಯುಮ್ನನು ಋಷಿಗಳನ್ನು ಕುರಿತು, “ನೀವು ಧರ್ಮರಹಸ್ಯಗಳನ್ನು ತಿಳಿದವರಾಗಿದ್ದೀರಿ, ಆಶೆಗಿಂತಲೂ ದೊಡ್ಡ ದೌರ್ಬಲ್ಯವು ಯಾವುದಿದೆ, ಹೇಳಿ” ಎಂದು ಕೇಳಿದನು.

ಆಗ ಋಷಿಯು “ಮಹಾರಾಜ! ಆಶೆಗೆ ಸಮಾನವಾದ ದೌರ್ಬಲ್ಯವು ಬೇರೆ ಯಾವುದೂ ಇರುವುದಿಲ್ಲ. ಯಾರು ಆಶೆಯನ್ನು ಜಯಿಸಿರುವರೋ ಅವರು ಪುಷ್ಪರು” ಎಂದು ಹೇಳಿದರು. ರಾಜನು ಮತ್ತೆ, “ಮುನಿಶ್ರೇಷ್ಠರೇ! ನಿಮಗಿಂತಲೂ ಕೃಶವಾದ ವಸ್ತುವು ಬೇರೆ ಯಾವುದಿದೆ?” ಎಂದು ಪ್ರಶ್ನಿಸಿದನು.

ಆಗ ಋಷಿಯು “ಯಾರು ಒಂದು ವಸ್ತುವು ಅತ್ಯಂತ ಅವಶ್ಯವಾಗಿದ್ದರೂ ಅದನ್ನು ಯಾಚಿಸುವುದಿಲ್ಲವೋ ಅಂತಹವನು ದುರ್ಲಭನು, ಅದೇ ರೀತಿ ಯಾಚಕರ ಇಚ್ಛೆಯನ್ನು ಪೂರ್ಣಗೊಳಿಸುವ ಧನಿಯೂ ದುರ್ಲಭನು, ಶ್ರೀಮಂತರು ಯಾಚಕರನ್ನು ಮೊದಲು ಆಸೆಗೆ ಈಡುಮಾಡಿ, ಅವನ ಆಸೆಯು ಪೂರ್ಣವಾಗುವುದೆಂಬ ನಂಬಿಕೆಯನ್ನು ಹುಟ್ಟಿಸಿ, ಅನಂತರ ಅವನಿಗೆ ನಿರಾಶೆಯನ್ನುಂಟುಮಾಡುತ್ತಾರೆ.

ಅಂತಹ ಯಾಚಕನ ಮನಸ್ಸಿನಲ್ಲಿ ಹುಟ್ಟಿದ ಆಸೆಯು ನನಗಿಂತಲೂ ಕೃಶವಾಗಿರುವುದು. ನಿನ್ನ ಹಾಗೆ ಒಬ್ಬನೇ ಮಗನನ್ನು ಪಡೆದಿರುವ ತಂದೆಗೆ, ಆ ಪುತ್ರನು ನಷ್ಟವಾಗಿ ಹೋಗಿ, ಅವನ ಸಮಾಚಾರವೂ ತಿಳಿಯದೆ ಇದ್ದಾಗ, ಅವನನ್ನು ಕಾಣಬೇಕೆಂಬ ಆಸೆಯು ನನಗಿಂತಲೂ ಕೃಶವಾಗಿರುತ್ತದೆ. ಮಕ್ಕಳಿಲ್ಲದ ಸ್ತ್ರೀಯರಿಗೆ ವೃದ್ಧಾಪ್ಯದಲ್ಲಿ ಮಕ್ಕಳನ್ನು ಪಡೆಯಬೇಕೆಂಬ ಆಸೆ, ವಯಸ್ಸಿಗೆ ಬಂದ ಕನೈಯರಿಗೆ ಮನೆಯಲ್ಲಿ ವಿವಾಹಸಂಬಂಧವಾದ ಮಾತುಕತೆಗಳು ವಿಫಲವಾಗುತ್ತಲೇ ಇದ್ದಾಗ ಉಳಿಯುವ ಆಸೆಗಳು ನನಗಿಂತ ಕೃಶವಾಗಿರುತ್ತವೆ” ಎಂದರು. ರಾಜನಿಗೆ ಮಹರ್ಷಿಯು ಹೇಳಿದ ಮಾತಿನ ಅಂತರಾರ್ಥವೂ ಹೊಳೆಯಿತು.

ತಾನೇ ತನ್ನ ಮಗನೊಡನೆ ಕೂಡಿಕೊಂಡು ಹಿಂದೆ ಆ ಬ್ರಾಹ್ಮಣನಿಗೆ ಮಾಡಿದ್ದ ಅವಮಾನವು ನೆನಪಾಯಿತು. ಋಷಿಗೆ ತಲೆಬಾಗಿ ಕಾಲುಮುಟ್ಟಿ ನಮಸ್ಕರಿಸಿ “ಭಗವನ್ ನಾನು ನಿಮ್ಮನ್ನು ಪ್ರಸನ್ನರಾಗುವಂತೆ ಪ್ರಾರ್ಥಿಸುತ್ತೇನೆ. ನಾನು ನನ್ನ ಮಗನೊಡನೆ ಸೇರ ಬಯಸುತ್ತೇನೆ” ಎಂದು ಬೇಡಿಕೊಂಡನು. ರಾಜನ ಮಾತನ್ನು ಕೇಳಿದ ಋಷಿಯು ನಸುನಗುತ್ತ, ಕೃಪಣರಾದ ಈ ರಾಜ-ರಾಜಕುಮಾರರಿಂದ ತಮಗೆ ಲಾಭವೇ ಆಗಿರುವುದೆಂಬುದನ್ನು ಮನಗಂಡು, ತಮ್ಮ ತಪಃಪ್ರಭಾವದಿಂದಲೂ, ಶಾಸ್ತ್ರಜ್ಞಾನದ ಪ್ರಭಾವದಿಂದಲೂ ರಾಜಕುಮಾರನು ಅಲ್ಲಿಗೇ ಬರುವಂತೆ ಮಾಡಿ, ತಾವು ಅರಣ್ಯದ ಕಡೆಗೆ ಹೊರಟುಹೋದರು.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-1

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *