ವಾಲ್ಮೀಕಿ ಮಹರ್ಷಿ ರಾಮಾಯಣ ಮಹಾಕಾವ್ಯದ ಮೂಲಕ ಇಡೀ ವಿಶ್ವಕ್ಕೆ ಚಿರಪರಿಚಿತರಾದವರು. ಉಳಿದ ಬಹುತೇಕ ಮಹರ್ಷಿಗಳು ಶಾಸ್ತ್ರಕಾರರಾಗಿದ್ದರೆ, ವಾಲ್ಮೀಕಿಗಳು ಮಾತ್ರ ‘ರಸಋಷಿ’ ಎನಿಸಿ ಕಾವ್ಯಪ್ರಪಂಚವನ್ನು ಶ್ರೀಮಂತಗೊಳಿಸಿದವರು. ವಾಲ್ಮೀಕಿಗಳು ಪ್ರಚೇತಸರೆಂಬ ಮಹರ್ಷಿಗಳ ಪುತ್ರರೋ ವಂಶದವರೋ ಆಗಿದ್ದಿರಬಹುದು. ಅವರಿಗೆ ಪ್ರಾಚೇತಸರೆಂಬ ಹೆಸರಿದ್ದಿತು. ಭೋಜನ ಚಂಪೂ ರಾಮಾಯಣದಲ್ಲಿ ಅವರನ್ನು ಪ್ರಾಚೇತಸರೆಂದೂ, ಪ್ರಥಮ ಕವಿಗಳೆಂದೂ ಹೇಳಿದೆ. ಪ್ರಚೇತಸರೆಂಬ ಮುನಿಗಳು ಹತ್ತು ಪ್ರಜಾಪತಿಗಳಲ್ಲಿ ಒಬ್ಬರಾಗಿದ್ದರು. ಪ್ರಜಾಪತಿಗಳೆಂದರೆ ಪ್ರಜೆಗಳ ಸೃಷ್ಟಿಗಾಗಿ ಬಹ್ಮನಿಂದ ನಿಯಮಿಸಲ್ಪಟ್ಟ ಮಹರ್ಷಿಗಳು: ಮರೀಚಿ, ಅತ್ರಿ, ಅಂಗಿರಸ, ಪುಲಸ್ಯ, ಪುಲ, ಕ್ರತು, ಪ್ರಚೇತಸ, ವಸಿಷ್ಠ, ಭ್ರಗು ಮತ್ತು ನಾರದರು ಇಂತಹ ಪ್ರಜಾಪತಿಗಳು. ಹೀಗೆಂದು ಮನುಸ್ಮೃತಿಯಲ್ಲಿ ಹೇಳಿದೆ. ಪ್ರಚೇತಸರೆಂದರೆ ಉತ್ತಮವಾದ ಚೇತನವುಳ್ಳವರು. ಅಂತಹ ಮಹರ್ಷಿಗಳ ವಂಶಜರಾಗಿ ವಾಲ್ಮೀಕಿಗಳು ಅಜರಾಮರವಾದ ಕಾವ್ಯರಚಯಿತೃಗಳಾದರು. ವಾಲ್ಮೀಕಿಗಳ ಬಗ್ಗೆ ನಮಗೆ ರಾಮಾಯಣದಲ್ಲಿಯೇ ಮಾಹಿತಿ ದೊರೆಯುತ್ತದೆ. ವ್ಯಾಸರು ಮಹಾಭಾರತದ ಪಾತ್ರವೂ ರಚನಾಕಾರರೂ ಆದಂತೆ ವಾಲ್ಮೀಕಿಗಳೂ ರಾಮಾಯಣದ ಪಾತ್ರವೇ ಆಗಿದ್ದಾರೆ. ರಾಮಾಯಣ ಕಾವ್ಯದ ರಚನೆಯ ಬಗ್ಗೆ ಆರಂಭದಲ್ಲಿಯೇ ಒಂದು ಕಥೆ ಬರುತ್ತದೆ. ತಪಸ್ವಿಗಳೂ ವೇದಾಧ್ಯಯನನಿರತರೂ ಆದ ನಾರದ ಮಹರ್ಷಿಗಳು ಒಂದು ದಿನ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಬಂದರು. ಅವರನ್ನು ಮಹರ್ಷಿಗಳು ಆದರದಿಂದ ಬರಮಾಡಿಕೊಂಡರು. “ಈ ಲೋಕದಲ್ಲಿ ಯಾವ ಪುರುಷನು ಧರ್ಮಜ್ಞನೂ, ಗುಣವಂತನೂ, ವೀರನೂ, ಕೃತಜ್ಞನೂ, ಸತ್ಯವಾದಿಯೂ, ದೃಢಸಂಕಲ್ಪನೂ ಆಗಿದ್ದಾನೆ? ಯಾರು ಸದಾಚಾರದಿಂದ ಕೂಡಿದ್ದು, ಸಕಲಪ್ರಾಣಿಗಳಿಗೂ ಹಿತವನ್ನು ಬಯಸುತ್ತಾನೆ? ವಿದ್ವಾಂಸನೂ, ಕಾರ್ಯದಕ್ಷನೂ, ಸುಂದರನೂ, ಕ್ರೋಧವನ್ನು ಜಯಿಸಿದವನೂ ಅಸೂಯಾರಹಿತನೂ ಆಗಿರುತ್ತಾನೆ? ಯಾರು ಯುದ್ಧದಲ್ಲಿ ಮುನಿದುನಿಂತರೆ ತಿಳಿಸಿಕೊಡಲು ನೀವು ಮಾತ್ರ ಸಮರ್ಥರು” ಎಂದು ಕೇಳಿದರು. ಆಗ, ನಾರದರು, ವಾಲ್ಮೀಕಿಗಳೇ ದೇವತೆಗಳು ಕೂಡಾ ಅವನಿಗೆ ಹೆದರುತ್ತಾರೆ? ಅಂತಹ ಪುರುಷನ ವಿಷಯವಾಗಿ ಮಾತನ್ನು ಕೇಳಿ ತ್ರಿಲೋಕಜ್ಞರಾದ ನಾರದರಿಗೆ ಬಹಳ ಸಂತೋಷವಾಯಿತು. ಅವರು, “ವಾಲ್ಮೀಕಿ ಮುನಿಗಳೇ! ನೀವು ಹೇಳಿದ ಎಲ್ಲ ಗುಣಗಳೂ ಒಬ್ಬನಲ್ಲಿಯೇ ಇರುವುದು ದುರ್ಲಭವು. ಆದರೂ ಅಂತಹ ಒಬ್ಬ ವ್ಯಕ್ತಿಯು ಇದ್ದಾನೆ. ಅವನ ವಿಷಯವನ್ನು ಹೇಳುತ್ತೇನೆ. ಕೇಳೋಣವಾಗಲಿ” ಎಂದರು. “ಇಕ್ಷಾಕು ವಂಶದಲ್ಲಿ ಒಬ್ಬ ಪ್ರಸಿದ್ಧ ರಾಜನಿದ್ದಾನೆ. ಅವನ ಹೆಸರು ಶ್ರೀರಾಮ, ಅವನು ಮಹಾಪರಾಕ್ರಮಿಯೂ, ಶಾಂತಿಯುಕ್ತನೂ, ಧೀರನೂ, ಜಿತೇಂದ್ರಿಯನೂ ಆಗಿದ್ದು, ನೀವು ಹೇಳುವ ಎಲ್ಲ ಗುಣಗಳನ್ನೂ ಪಡೆದುಕೊಂಡಿದ್ದಾನೆ” – ಹೀಗೆ ಹೇಳುತ್ತ ನಾರದರು ಶ್ರೀರಾಮನ ವರ್ಣನೆಯಲ್ಲಿಯೇ ಮೈಮರೆತರು. ಅವನ ಎಲ್ಲ ವೈಶಿಷ್ಟ್ಯಗಳನ್ನೂ ವಿಸ್ತಾರವಾಗಿ ತಿಳಿಸಿದರು. “ಅವನು ದಶರಥ ಮಹಾರಾಜನ ಜೇಷ್ಠಪುತ್ರನು, ಅವನ ಪಟ್ಟಾಭಿಷೇಕವನ್ನು ಚಿಕ್ಕಮ್ಮನಾದ ಕೈಕೇಯಿಯು ತಡೆದದ್ದರಿಂದ ಹದಿನಾಲ್ಕು ವರ್ಷ ಕಾಡಿಗೆ ಹೋಗಿ, ಅಲ್ಲಿದ್ದ ಋಷಿಗಳಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸರನ್ನು ನಿರ್ನಾಮಮಾಡಿದನು, ಹಾಗೂ ಲಂಕಾಧಿಪತಿಯಾದ ರಾವಣನನ್ನು ಕೊಂದು ಲೋಕಕ್ಕೂ ದೇವತೆಗಳಿಗೂ ಉಪಕಾರಮಾಡಿದನು” ಎಂಬುದಾಗಿ ರಾಮಾಯಣದ ಕಥೆಯನ್ನು ವಾಲ್ಮೀಕಿಗಳಿಗೆ ತಿಳಿಸಿದರು. ನಾರದರು ಈ ರೀತಿ ಹೇಳಿ, ವಾಲ್ಮೀಕಿಗಳ ಅನುಜ್ಞೆಯನ್ನು ಪಡೆದು ದೇವಲೋಕಕ್ಕೆ ಹೊರಟುಹೋದರು. ಅನಂತರ ಮಹರ್ಷಿಗಳು ಆಶ್ರಮದ ಬಳಿ ಹರಿಯುತ್ತಿದ್ದ ತಮಸಾನದಿಗೆ ಸ್ನಾನಾಕ್ಷೀಕಗಳನ್ನು ಮಾಡಲು ಹೊರಟರು. ತಮಸಾನದಿಯ ನೀರು ಸ್ವಚ್ಛವಾಗಿ ಪರಿಶುದ್ಧವಾಗಿತ್ತು. ಅದನ್ನು ನೋಡಿ ಸಹಜ ಕವಿಗಳಾದ ವಾಲ್ಮೀಕಿಗಳ ಮನಸ್ಸು ಮುದಗೊಂಡಿತು. ಅದರ ನೀರನ್ನು ಅವರು ಸತ್ಪುರಷರ ಮನಸ್ಸಿಗೆ ಹೋಲಿಸುತ್ತಾರೆ. ಜೊತೆಯಲ್ಲಿ ಬಂದಿದ್ದ ಶಿಷ್ಯ ಭರದ್ವಾಜನು ಕಲಶ ಮತ್ತು ನಾರುಮಡಿಗಳನ್ನು ಅವರಿಗೆ ಕೊಡುತ್ತಾನೆ. ಸುತ್ತಲಿನ ವನರಾಜಿಯ ಸೌಂದರ್ಯ ಅವರನ್ನು ಆಕರ್ಷಿಸುತ್ತದೆ. ಸ್ವಲ್ಪ ಹೊತ್ತು ಅದನ್ನು ನೋಡುತ್ತ ನದೀತೀರದಲ್ಲಿ ಓಡಾಡುತ್ತಾರೆ. ಕವಿಹೃದಯಕ್ಕೂ ಖಲಹೃದಯಕ್ಕೂ ಇರುವ ವ್ಯತ್ಯಾಸವನ್ನು ಮುಂದಿನ ಭಾಗದಲ್ಲಿ ಕಾಣುತ್ತೇವೆ. ಮುನಿಗಳು ಅಲ್ಲಿನ ಪ್ರಶಾಂತ ಸೌಂದರ್ಯದಲ್ಲಿ ಒಂದಾಗಿ ಅದನ್ನು ಸವಿಯುತ್ತಿದ್ದರು. ಒಂದು ಮರದ ಮೇಲೆ ಇಂಪಾಗಿ ಧ್ವನಿಗೈಯುತ್ತ, ಒಂದನ್ನೊಂದು ಬಿಡದೆ ನಲಿಯುತ್ತಿದ್ದ ಕ್ರೌಂಚಪಕ್ಷಿಗಳನ್ನು ಮುನಿಗಳು ಕಂಡರು. ಅವುಗಳ ಪ್ರೇಮಸಲ್ಲಾಪದ ಸೊಬಗನ್ನು ಸವಿಯುತ್ತಿರುವಾಗಲೇ ಬೇಡನೊಬ್ಬನು ಅದರಲ್ಲಿ ಗಂಡು ಹಕ್ಕಿಯನ್ನು ಹೊಡೆದನು. ಮುನಿಗಳಿಗೆ ಸಂಪೂರ್ಣ ವಿರುದ್ಧನಾದ ಬೇಡನು ಪಾಪನಿಶ್ಚಯಿ, ವೈರನಿಲಯನಾಗಿದ್ದನು. ಋಷಿಗಳು ನೋಡುತ್ತಿರುವಂತೆಯೇ ಗಂಡುಹಕ್ಕಿ ರಕ್ತಸಿಕ್ತವಾಗಿ ನೆಲದ ಮೇಲೆ ಬಿದ್ದು ಹೊರಳಾಡಿ ಪ್ರಾಣಬಿಟ್ಟಿತು. * ಹೆಣ್ಣುಹಕ್ಕಿಯು ಕರುಣಸ್ವರದಿಂದ ಆಕ್ರಂದನ ಮಾಡತೊಡಗಿತು. ಕ್ಷಣದಲ್ಲಿ ಬದಲಾದ ಈ ದೃಶ್ಯ ಮುನಿಗಳ ಮನಸ್ಸನ್ನು ಕದಡಿತು. ಹೆಣ್ಣುಹಕ್ಕಿಯು ಅರಚಿಕೊಳ್ಳುವುದನ್ನು ಕೇಳಿ ಶೋಕಾಕುಲರಾದ ಮಹರ್ಷಿಗಳು, “ಎಲೈ ವ್ಯಾಧನೇ! ಕಾಮಮೋಹಿತವಾಗಿದ್ದ ಕ್ರೌಂಚಜೋಡಿಗಳಲ್ಲಿ ಒಂದನ್ನು ನೀನು ಹೊಡೆದ ಕಾರಣ ನಿನಗೆ ಶಾಶ್ವತವಾದ ಸ್ಥಾನಗಳು ಸಿಗದಿರಲಿ” ಎಂದು ಶಾಪವಿತ್ತರು. ಹೀಗೆ ಹೇಳಿದ ನಂತರ ಅವರ ಮನಸ್ಸಿನಲ್ಲಿ ಅದೇ ವಿಷಯವಾಗಿ ಮಥನ ನಡೆಯಿತು. ಈ ಚಿಂತೆಯಲ್ಲಿಯೇ ಶಿಷ್ಯನನ್ನು ಕುರಿತು “ಪಾದಬದ್ಧವೂ, ಸಮವಾದ ಅಕ್ಷರಗಳಿಂದ ಕೂಡಿದುದೂ, ವೀಣೆಯಂತಹ ವಾದ್ಯಗಳಿಗೆ ಲಯದಲ್ಲಿ ಹೊಂದು ವಂತಹುದೂ ಆದಂತಹ ಶಾಪವಾಕ್ಯವು ನನ್ನ ಮುಖದಿಂದ ಹೊರಟಿತು. ಶೋಕದಿಂದ ಕೂಡಿದ ನನ್ನಿಂದ ಹೇಳಲ್ಪಟ್ಟ ಈ ಛಂದೋಬದ್ಧ ರಚನೆಯು ಶ್ಲೋಕವೆಂದೇ ಪ್ರಸಿದ್ಧವಾಗಲಿ” ಎಂದು ಹೇಳಿದರು. ಆಗ ಭರದ್ವಾಜನು ಗುರುಗಳು ಹೇಳಿದ ಆ ಉತ್ತಮವಾದ ಶ್ಲೋಕವನ್ನು ಮನಸ್ಸಿನಲ್ಲಿ ಧರಿಸಿದನು. ಆಮೇಲೆ ವಾಲ್ಮೀಕಿಗಳು ತಮಸಾ ತೀರ್ಥದಲ್ಲಿ ವಿಧಿವತ್ತಾಗಿ ಸ್ನಾನ ಆಕಗಳನ್ನು ಮುಗಿಸಿ, ಅಂದಿನ ಘಟನೆಯನ್ನೇ ಮೆಲುಕುಹಾಕುತ್ತಾ ಆಶ್ರಮಕ್ಕೆ ಹಿಂದಿರುಗಿದರು. ಶಿಷ್ಯನು ಅವರನ್ನು ಹಿಂಬಾಲಿಸಿದನು. ಆಶ್ರಮದಲ್ಲಿ ಅವರು ಎಂದಿನಂತೆ ಧ್ಯಾನ, ಪುರಾಣಶ್ರವಣಗಳಲ್ಲಿ ಮಗ್ನರಾದರು. ಆ ಸಮಯದಲ್ಲಿ ಸಾಕ್ಷಾತ್ ಬ್ರಹ್ಮನೇ ಅವರ ಆಶ್ರಮಕ್ಕೆ ಬಂದನು. ಚಕಿತರಾದ ಮುನಿಗಳು ಎದ್ದು ಬ್ರಹ್ಮನನ್ನು ಸ್ವಾಗತಿಸಿ, ವಿಧಿವತ್ತಾಗಿ ಅರ್ಥ್ಯಪಾದ್ಯಪೀಠಾದಿಗಳನ್ನು ಸಮರ್ಪಿಸಿ, ಬದ್ಧಾಂಜಲಿಗಳಾಗಿ ನಿಂತರು. ಭಗವಾನ್ ಬ್ರಹ್ಮದೇವನು ತಾನು ಉತ್ತಮಾಸನದಲ್ಲಿ ಕುಳಿತುಕೊಂಡು. ಮಹರ್ಷಿಗಳನ್ನೂ ಕುಳಿತುಕೊಳ್ಳುವಂತೆ ಹೇಳಿದನು. ಮಹರ್ಷಿಗಳು ಬ್ರಹ್ಮನ ಆದೇಶವನ್ನು ಪಾಲಿಸಿ ಕುಳಿತುಕೊಂಡರು. ಅವರ ಮನಸ್ಸಿನಲ್ಲಿ ಅಂದಿನ ಬೆಳಗಿನ ಘಟನೆ ಮತ್ತೆ ಮರುಕಳಿಸಿತು. ಪಾಪಾತ್ಮನಾದ ಬೇಡನು ಎಂತಹ ಕೆಲಸವನ್ನು ಮಾಡಿಬಿಟ್ಟನು? ಜೊತೆಯಾಗಿ ಇಂಪಾಗಿ ಧ್ವನಿಗೈಯುತ್ತಿದ್ದ ಹಕ್ಕಿಗಳಲ್ಲಿ ಒಂದನ್ನು ಹೊಡೆದು, ಹೆಣ್ಣುಹಕ್ಕಿಯನ್ನು ಎಂತಹ ದುಃಖಕ್ಕೆ ಈಡುಮಾಡಿದನು! – ಎಂದು ಯೋಚಿಸುತ್ತ ತಾವು ಶಪಿಸಿದ್ದ ಆ ಶ್ಲೋಕವನ್ನು ಮತ್ತೆ ನೆನಪಿಸಿಕೊಂಡರು. ಅವರ ಮನೋಗತವನ್ನು ಅರಿತ ಬ್ರಹ್ಮನು “ಮಹರ್ಷಿಯೇ! ನೀನು ಹೇಳಿದ ಛಂದೋಬದ್ಧರಚನೆಯು ನನ್ನ ಇಚ್ಛೆಯಿಂದಲೇ ನಿನ್ನ ಬಾಯಿಂದ ಬಂದಿತು. ಇದೇ ಛಂದಸ್ಸಿನಿಂದ ಶ್ರೀರಾಮನ ಚರಿತ್ರೆಯನ್ನು ನೀನು ಸಂಪೂರ್ಣವಾಗಿ ರಚಿಸು. ನಿನಗೆ ರಾಮಚರಿತೆಯ ಎಲ್ಲ ಘಟನೆಗಳೂ ಗೋಚರವಾಗುತ್ತವೆ. ಅವು ಏಕಾಂತದಲ್ಲಿ ನಡೆದಿರಲಿ, ಬಹಿರಂಗವಾಗಿ ನಡೆದಿರಲಿ, ನಿನ್ನ ಕಣ್ಣಿಗೆ ಕಟ್ಟುವಂತೆ ಪ್ರತ್ಯಕ್ಷವಾಗುತ್ತವೆ. ಈ ಪೃಥ್ವಿಯಲ್ಲಿ ಪರ್ವತಗಳೂ ನದಿಗಳೂ ಎಲ್ಲಿಯವರೆಗೆ ಇರುವುವೋ ಅಲ್ಲಿಯವರೆಗೂ ನೀನು ರಚಿಸುವ ರಾಮಾಯಣವು ಪ್ರಚಾರದಲ್ಲಿರುವುದು. ಅದು ಪ್ರಚಾರದಲ್ಲಿ ಇರುವವರೆಗೂ ನೀನು ನನ್ನ ಬ್ರಹ್ಮಲೋಕದಲ್ಲಿ ಸ್ವತಂತ್ರವಾಗಿ ವಿಹರಿಸಬಹುದು” ಎಂದು ಹೇಳಿ ಬ್ರಹ್ಮನು ಅಂತರ್ಧಾನ ಹೊಂದಿದನು. ಮುನಿಗಳೂ ಅವರ ಶಿಷ್ಯರೂ ವಿಸ್ಮಿತರಾದರು. ಪರಮಾತ್ಮನ ಕರುಣೆಯಿಂದ ಸಂಪೂರ್ಣವಾಗಿ ಶ್ರೀಮದ್ರಾಮಾಯಣವನ್ನು ಇದೇ ಛಂದಸ್ಸಿನಲ್ಲಿ ಮುನಿಗಳು ರಚಿಸಿದರು. ದೋಷರಹಿತವಾದ, ವರ್ಣವಿನ್ಯಾಸದಿಂದ ಕೂಡಿದ, ಕಾವ್ಯಗುಣಗಳಿಂದ ಉಪೇತವಾದ ಈ ಕೃತಿಯನ್ನು ರಚಿಸಿ ಅವರು ಅಮರರಾದರು. ವಾಲ್ಮೀಕಿಗಳು ತಾವು ರಚಿಸಿದ ಕಾವ್ಯದಲ್ಲಿನ ಒಂದು ಭಾಗವೇ ಆಗಿದ್ದಾರೆ. ಆನಂದ ರಾಮಾಯಣವು, ವಾಲ್ಮೀಕಿಗಳೇ ತಮ್ಮ ವೃತ್ತಾಂತವನ್ನು ರಾಮನಿಗೆ ವಿವರಿಸಿದ ಕಥೆಯನ್ನು ಹೇಳುತ್ತದೆ. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-1 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಹೇಮರೆಡ್ಡಿ ಮಲ್ಲಮ್ಮ ಜಯಂತಿ: ಭಕ್ತಿ, ಪತಿವ್ರತೆ, ಸಹನೆ ಮತ್ತು ಸ್ತ್ರೀಶಕ್ತಿಯ ಅಮರ ಜ್ಯೋತಿ ಮನುಷ್ಯನ ಕಿರುಬೆರಳಿನಷ್ಟು ಶರೀರದ ಗಾತ್ರ ಹೊಂದಿದ್ದ ತನು ಮಹರ್ಷಿ