ಅಕೃತವ್ರಣರು ಬ್ರಹ್ಮರ್ಷಿಗಳು, ಪರಶುರಾಮರ ಮಿತ್ರರು. ಅಕೃತವುಣರ ತಂದೆಯ ಹೆಸರು ಶಾಂತಮುನಿ. ಅಕೃತವ್ರಣರು ಒಮ್ಮೆ ತೀರ್ಥಯಾತ್ರೆಗೆಂದು ಹೊರಟು, ಒಂದು ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಹುಲಿಯೊಂದು ಅವರನ್ನು ಹಿಡಿದುಬಿಟ್ಟಿತು. ದೈವಯೋಗದಿಂದ ಪರಶುರಾಮರು ಅದೇ ಸಮಯಕ್ಕೆ ಅಲ್ಲಿಗೆ ಬಂದರು. ಹುಲಿಯ ಬಾಯಿಯಿಂದ ಮಹರ್ಷಿಯನ್ನು ರಕ್ಷಿಸಿದರು. ಅಂದಿನಿಂದ ಅಕೃತವ್ರಣರೂ ಪರಶುರಾಮರೂ ಪರಸ್ಪರ ಪ್ರಿಯಮಿತ್ರರಾದರು. ಮಹೇಂದ್ರಪರ್ವತವು ಪರಶುರಾಮರು ತಪಸ್ಸು ಮಾಡಿದ ಸ್ಥಳ. ಅಕೃತವ್ರಣರು ಅಲ್ಲಿಯೇ ತಮ್ಮ ಆಶ್ರಮವನ್ನು ನಿರ್ಮಿಸಿಕೊಂಡು ತಪಸ್ಸಿನಲ್ಲಿ ನಿರತರಾಗಿದ್ದರು. ಯುಧಿಷ್ಠಿರನು ವನವಾಸದಲ್ಲಿದ್ದಾಗ ತನ್ನ ಜೊತೆಯವರೊಡನೆ ತೀರ್ಥಯಾತ್ರೆಯನ್ನು ಮಾಡುತ್ತ ಈ ಮಹರ್ಷಿಗಳ ಆಶ್ರಮಕ್ಕೆ ಹೋಗಿದ್ದನು. ಅವರಿಗೆ ಅಭಿವಾದನಪೂರ್ವಕ ನಮಸ್ಕರಿಸಿ, “ಪರಶುರಾಮರು ಆಗಾಗ್ಗೆ ಈ ಸ್ಥಳಕ್ಕೆ ಬರುತ್ತಾರೆಂದು ಕೇಳಿದ್ದೇನೆ. ಆ ಮಹಾತ್ಮರನ್ನು ಸಂದರ್ಶಿಸಲು ನನಗೆ ಸಾಧ್ಯವೆ?” ಎಂದು ಕೇಳಿದನು. ಅದಕ್ಕೆ ಉತ್ತರವಾಗಿ ಅಕೃತವ್ರಣರು, “ಧರ್ಮಜ, ನೀನು ಈ ಪವಿತ್ರಸ್ಥಳಕ್ಕೆ ಆಗಮಿಸಿರುವುದು ಪರಶುರಾಮನಿಗೆ ಈಗಾಗಲೇ ತಿಳಿದಿರುತ್ತದೆ. ಅವನು ನಿನ್ನ ವಿಷಯದಲ್ಲಿ ಸುಪ್ರೀತನಾಗಿರುತ್ತಾನೆ. ಇಲ್ಲಿರುವ ಮಹರ್ಷಿಗಳಿಗೆ ಅವನು ಶುಕ್ಲಪಕ್ಷದ ಅಷ್ಟಮಿ ಮತ್ತು ಚತುರ್ದಶಿಯಂದು ದರ್ಶನವನ್ನೀಯುತ್ತಾನೆ. ನಾಳೆಯೇ ಚತುರ್ದಶಿಯಿರುವುದರಿಂದ ನೀನೂ ಆ ಮಹಾಮಹಿಮನನ್ನು ಸಂದರ್ಶಿಸಬಹುದು” ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಯುಧಿಷ್ಠಿರನಿಗೆ ಪರಶುರಾಮರ ಚರಿತ್ರೆಯನ್ನೆಲ್ಲ ವಿವರಿಸಿದರು. ಅವರು ಹೇಳಿದ್ದಂತೆಯೇ ಮಾರನೆಯ ದಿನ ಪರಶುರಾಮರು ಅಲ್ಲಿಗೆ ಬಂದು ಯುಧಿಷ್ಠಿರಾದಿಗಳಿಗೆ ದರ್ಶನವನ್ನಿತ್ತು ಅವರ ಪೂಜಾದಿಗಳನ್ನು ಸ್ವೀಕರಿಸಿದರು. ಯುಧಿಷ್ಠಿರನು ಅಕೃತವ್ರಣರಿಗೆ ವಂದಿಸಿ ಮುಂದಕ್ಕೆ ಪ್ರಯಾಣ ಮಾಡಿದನು. ಇದಕ್ಕೂ ಬಹುಕಾಲ ಮುಂಚೆ ಭೀಷ್ಮನು ತನ್ನ ತಮ್ಮನಾದ ವಿಚಿತ್ರವೀರ್ಯನಿಗೆ ವಿವಾಹಾರ್ಥವಾಗಿ ಕಾಶೀದೇಶದ ರಾಜಕುಮಾರಿಯರಾದ ಅಂಬೆ, ಅಂಬಿಕೆ ಮತ್ತು ಅಂಬಾಲಿಕೆಯರನ್ನು ಸ್ವಯಂವರಮಂಟಪದಿಂದ ಗೆದ್ದು ತಂದಿದ್ದನು. ಅವರಲ್ಲಿ ಹಿರಿಯವಳಾದ ಅಂಬೆಯು ‘ತಾನು ಸಾಳ್ವರಾಜನನ್ನು ಈ ಮೊದಲೇ ಮನಸ್ಸಿನಿಂದ ಪತಿಯನ್ನಾಗಿ ವರಿಸಿಬಿಟ್ಟಿರುವುದಾಗಿಯೂ ಅವನನ್ನೇ ವಿವಾಹವಾಗಲು ಇಚ್ಛಿಸಿರುವುದಾಗಿಯೂ’ ಭೀಷ್ಠನೊಡನೆ ಹೇಳಿದಳು. ಅದರಂತೆ ಭೀಷನು ಅಂಬೆಯನ್ನು ಸಾಳರಾಜನ ಬಳಿಗೆ ಕಳುಹಿಸಿದನು. ಆದರೆ ಬೇರೆಯವರಿಂದ ವಿವಾಹಮಂಟಪದಲ್ಲಿ ತನ್ನ ಭವಿಷ್ಯಜೀವನವು ನಷ್ಟವಾಯಿತೆಂದು ದುಃಖಿತಳಾದ ಅಂಬೆಯು, ಕಾಡಿಗೆ ಗೆಲ್ಲಲಟ್ಟ ಕನ್ನೆಯನ್ನು ಸ್ವೀಕರಿಸಲು ಸಾಳ್ವರಾಜನು ಒಪ್ಪಲಿಲ್ಲ, ಹೀಗೆ ಭೀಷ್ಮನಿಂದ ತೆರಳಿ, ಅಲ್ಲಿದ್ದ ಮುನಿಗಳ ಆಶ್ರಮಕ್ಕೆ ಹೋದಳು. ಅವರಲ್ಲಿ ತನ್ನ ದುಃಖವನ್ನೆಲ್ಲ ನಿವೇದಿಸಿಕೊಂಡಳು. ಮುನಿಗಳ ನಡುವೆ ಹೋತವಾಹನನೆಂಬ ರಾಜರ್ಷಿಯೂ ಇದ್ದನು. ಹೋತವಾಹನನು ಅಂಬೆಯ ತಾಯಿಯ ತಂದೆ. ಅವನು ಮೊಮ್ಮಗಳನ್ನು ಪರಶುರಾಮರ ಬಳಿಗೆ ಕರೆದೊಯ್ದು, ಅವರ ಮೂಲಕ ಭೀಷನೇ ಅವಳನ್ನು ಪರಿಗ್ರಹಿಸುವಂತೆ ಮಾಡಬೇಕೆಂದು ತೀರ್ಮಾನಿಸಿದನು. ಅಕೃತವ್ರಣಮಹರ್ಷಿಗಳು ಅಲ್ಲಿಗೆ ಬಂದರು. ಅವರು ಆಗಮಿಸುತ್ತಲೇ ಆಶ್ರಮದಲ್ಲಿದ್ದ ಎಲ್ಲ ಋಷಿಗಳೂ ಹೀಗೆ ಅಂಬೆಯನ್ನು ಕುರಿತು ಮಾತನಾಡುತ್ತಿರುವಾಗ ಎಲ್ಲ ಋಷಿಗಳೂ ಎದ್ದು ನಿಂತು ಗೌರವಿಸಿ, ಯಥೋಚಿತ ಸತ್ಕಾರಗಳನ್ನು ಮಾಡಿದರು. ಅಕೃತವ್ರಣರೂ ಕೂಡ ಆ ವನವಾಸಿಗಳನ್ನೆಲ್ಲ ಗೌರವಿಸಿ, ಅವರೆಲ್ಲರ ಯೋಗಕ್ಷೇಮವನ್ನು ವಿಚಾರಿಸಿದರು. ಅನಂತರ ಹೋತ್ರವಾಹನನು ಪರಶುರಾಮರ ವಿಷಯವಾಗಿ ಮಹರ್ಷಿಗಳಲ್ಲಿ ಪ್ರಶ್ನಿಸಿದನು. ಅದಕ್ಕೆ ಅಕೃತವ್ರಣರು ‘ಪರಶುರಾಮರು ಹೋತ್ರವಾಹನನನ್ನು ಬಹಳವಾಗಿ ಹೊಗಳುತ್ತಿರುತ್ತಾರೆಂದೂ ತಮ್ಮನ್ನು ನೋಡುವ ಸಲುವಾಗಿ ಮಾರನೆಯ ದಿನವೇ ಅಲ್ಲಿಗೆ ಬರಲಿದ್ದಾರೆಂದೂ’ ಹೇಳಿದರು. ಹೋತ್ರವಾಹನನು ಅಕೃತವ್ರಣರಿಗೆ ಅಂಬೆಯ ವಿಚಾರವನ್ನೆಲ್ಲ ತಿಳಿಸಿದನು. ಅಂಬೆಯೂ ಋಷಿಗಳಿಗೆ ವಂದಿಸಿ, ಪರಶುರಾಮರು ಹೇಗೆ ಹೇಳುತ್ತಾರೆಯೋ ಅಂತೆಯೇ ಮಾಡುವುದಾಗಿ ಒಪ್ಪಿಕೊಂಡಳು. ಅಕೃತವ್ರಣರು ಅಂಬೆಯನ್ನು ಕುರಿತು, “ಮಗಳೇ, ನಿನ್ನ ಮನಸ್ಸಿನಲ್ಲಿ ಈಗ ಎರಡು ರೀತಿಯ ದುಃಖಗಳಿವೆ. ಪತಿಯು ದೊರೆಯದಂತೆ ಮಾಡಿದ ಭೀಷ್ಮ ಮತ್ತು ಪ್ರೀತಿಸಿದವಳನ್ನು ತಿರಸ್ಕರಿಸಿದ ಸಾಳ್ವರಲ್ಲಿ ಯಾರಿಗೆ ಪ್ರತೀಕಾರ ಮಾಡಲು ಇಷ್ಟಪಡುವೆ? ನಿನಗೆ ಹಿತವಾಗುವುದಾದರೆ ಮಹಾತ್ಮನಾದ ಪರಶುರಾಮನು ಸಾಳ್ವನಿಗೆ ನಿನ್ನನ್ನು ಮದುವೆಯಾಗಲು ಆದೇಶಿಸುತ್ತಾನೆ. ಇಲ್ಲದಿದ್ದರೆ ಭೀಷ್ಮನನ್ನು ಸಮರಾಂಗಣದಲ್ಲಿ ಸೋಲಿಸಿ, ನಿನ್ನ ಇಷ್ಟದಂತೆ ನಡೆಯುವ ಹಾಗೆ ಮಾಡುತ್ತಾನೆ” ಎಂದು ಹೇಳಿದರು. ಅಂಬೆಯು ಯಾರಿಗೆ ಪ್ರತೀಕಾರ ಮಾಡುವುದೆಂಬುದನ್ನು ನಿರ್ಧರಿಸಲಾರದೆ ಹೋದಳು. ಕೊನೆಗೆ ಯಾವುದು ಯುಕ್ತವೋ ಅದನ್ನು ನಿರ್ಧರಿಸುವ ಅಧಿಕಾರವನ್ನು ಅಕೃತವಣರಿಗೇ ಬಿಟ್ಟುಕೊಟ್ಟಳು. ಆಗ ಅಕೃತವಣರು, “ಗಾಂಗೇಯನು ನಿನ್ನನ್ನು ಹಸ್ತಿನಾಪುರಕ್ಕೆ ಕರೆದೊಯ್ಯದಿದ್ದಿದ್ದರೆ ಹೀಗೆಲ್ಲ ನಡೆಯುತ್ತಲೇ ಇರಲಿಲ್ಲ. ಆದ್ದರಿಂದ ಪರಶುರಾಮನ ಮೂಲಕ ಭೀಷ್ಮನಿಗೆ ಪ್ರತೀಕಾರ ಮಾಡುವುದೇ ಯುಕ್ತ ಎಂದರು. ಮಾರನೆಯ ದಿನ ಪರಶುರಾಮರು ಅಲ್ಲಿಗೆ ಆಗಮಿಸಿದರು. ಆಗ ಅಕೃತವಣ ಸಲಹೆಯಂತೆ ಅಂಬೆಯು ಪರಶುರಾಮರಿಗೆ ತನ್ನ ಪರಿಸ್ಥಿತಿಯನ್ನು ವಿವರಿಸಿದು ಆದರೆ ಪರಶುರಾಮರಿಗೆ ಭೀಷ್ಮನೊಡನೆ ಯುದ್ಧ ಮಾಡಲು ಮನಸ್ಸಿರಲಿಲ್ಲ. ಭೀಷ ಮತ್ತು ಸಾಳ್ವರನ್ನು ಕರೆಸಿ ಯಾರಾದರೊಬ್ಬರು ಅಂಬೆಯನ್ನು ವಿವಾಹವಾಗುವಂತೆ ಮಾಡುವುದಾಗಿ ಅವರು ಹೇಳಿದರು. ಆದರೆ ಅಂಬೆಗೆ ಅಕೃವಣರ ಮಾತು ಕೇಳಿದ ಮೇಲೆ ಭೀಷ್ಮನ ಮೇಲೆ ಪ್ರತೀಕಾರದ ಭಾವ ಹುಟ್ಟಿತ್ತು. ಇದನ್ನು ನೋಡುತ್ತಿದ್ದ ಅಕೃತವ್ರಣರು ಪರಶುರಾಮರಿಗೆ ‘ಶರಣಾಗತಳಾದ ಸ್ತ್ರೀಯೊಬ್ಬಳನ್ನು ಪರಿತ್ಯಜಿಸುವುದು ಯೋಗ್ಯವಲ್ಲವೆಂದೂ ಅವಳ ಇಚ್ಛೆಯನ್ನು ನಡೆಸಿಕೊಡಬೇಕೆಂದೂ’ ಸಲಹೆ ನೀಡಿದರು. ಅದರಂತೆ ಪರಶುರಾಮರು ತಮ್ಮ ಪ್ರಿಯಮಿತ್ರನ ಮಾತನ್ನು ಅಂಗೀಕರಿಸಿ ಅಂಬೆಯ ದುಃಖಶಮನಕ್ಕಾಗಿ ಭೀಷ್ಮನೊಡನೆ ಯುದ್ಧ ಮಾಡಲು ಮುಂದಾದರು. ಹೀಗೆ ಅಕೃತವ್ರಣರು ಪರಶುರಾಮರಿಂದಲೂ ವಂದ್ಯರಾಗಿದ್ದರು. ಅವರು ಪಾಂಡವರು ನಡೆಸಿದ ರಾಜಸೂಯಯಾಗದಲ್ಲಿ ಭಾಗವಹಿಸಿದ ಋತ್ವಿಜರಲ್ಲಿ ಒಬ್ಬರಾಗಿದ್ದರು. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಮನುಷ್ಯನ ಕಿರುಬೆರಳಿನಷ್ಟು ಶರೀರದ ಗಾತ್ರ ಹೊಂದಿದ್ದ ತನು ಮಹರ್ಷಿ ಕೌಂಡಿನ್ಯ ಮಹರ್ಷಿಗಳ ನೆನಪಿಗಾಗಿ ಕಾಂಬೋಜಕ್ಕೆ ಕಾಂಬೋಡಿಯಾ ಎಂದು ನಾಮಕರಣ