Story of Yajnavalkya Sage in Kannadaಯಾಜ್ಞವಲ್ಕ್ಯ ಮಹರ್ಷಿ

ಉಪನಿಷತ್ತಿನ ಸಂಪ್ರದಾಯಪ್ರವರ್ತಕರಲ್ಲಿ ಯಾಜ್ಞವಲ್ಕ್ಯರ ಹೆಸರು ಪ್ರಸಿದ್ಧವಾದುದು. ಇವರ ತಂದೆ ಸುಪ್ರಸಿದ್ದ ವೈದಿಕರೂ ಕರ್ಮಕಾಂಡ ನಿರತರ ಆದ ದೇವರಾತರು. ಇವರ ತಾಯಿಯ ಹೆಸರು ಹಲವು ಬಗೆಗಳಲ್ಲಿ ಉಕ್ತವಾಗಿದೆ. ಮಹರ್ಷಿ ವೈಶಂಪಾಯನರ ಸೋದರಿಯಾದ ಸುನಂದೆಯು ಇವರ ತಾಯಿಯಿಂದು ಒಂದು ಕಡೆ ಹೇಳಿದರೆ, ದೇವುಡುರವರು ಆಕೆಯನ್ನು ಆಲಂಬನೀದೇವಿಯೆಂದು ಕರೆದಿದ್ದಾರೆ. ತಂದೆಯ ಹೆಸರು ಬ್ರಹ್ಮರಾತರೆಂದೂ ಕೆಲವರು ಹೇಳುತ್ತಾರೆ.

ಬಾಲಕ ಯಾಜ್ಞವಲ್ಕ್ಯರು ಅಪ್ರತಿಮ ಮೇಧಾಶಕ್ತಿಯುಳ್ಳವರಾಗಿದ್ದರು. ತಂದೆ ಯಿಂದಲೇ ವೇದವಿದ್ಯೆಯನ್ನು ಕಲಿತಿದ್ದ ಇವರಿಗೆ ಬಾಷ್ಕಲಮಹರ್ಷಿಗಳಿಂದ ಋಗ್ಗೇದಪಾಠವೂ, ಜೈಮಿನಿಗಳಿಂದ ಸಾಮವೇದವೂ, ಆರುಣಿಯವರಿಂದ ಅಥರ್ವಣ ಪಾಠವೂ ಆಗಿತ್ತೆಂದು ಹೇಳುತ್ತಾರೆ. ಯಜುರ್ವೇದದ ಅಧ್ಯಯನಕ್ಕಾಗಿ ಅವರು ಮಹರ್ಷಿ ವೈಶಂಪಾಯನರ ಆಶ್ರಮದಲ್ಲಿದ್ದರು.

ಒಂದು ಸಲ ಮೇರುಪರ್ವತದ ತಪ್ಪಲಿನಲ್ಲಿ ಎಲ್ಲ ಗುರುಕುಲಗಳ ಕುಲಪತಿಗಳ ಸಭೆಯೊಂದು ಆಯೋಜಿತವಾಗಿತ್ತು. ಈ ಸಭೆಗೆ ಬಾರದವರಿಗೆ ಬ್ರಹ್ಮಹತ್ಯಾದೋಷ ಉಂಟಾಗುವುದೆಂದು ತೀರ್ಮಾನಿಸಲಾಗಿತ್ತು. ಸಭೆಯ ದಿನದಂದು ವೈಶಂಪಾಯನರ ತಂದೆಯ ವಾರ್ಷಿಕ ಶ್ರಾದ್ಧವಿದ್ದ ಕಾರಣ ಅವರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯ ವಾಗಲಿಲ್ಲ. ಇದರಿಂದಾಗಿ ಉಂಟಾದ ಬಹ್ಮಹತ್ಯಾದೋಷದ ಪರಿಹಾರಾರ್ಥವಾಗಿ ಅವರು ಕಠಿಣವಾದ ಕರ್ಮಗಳನ್ನು ಆಚರಿಸಬೇಕಾಯಿತು.

ವೃದ್ಧರಾಗಿದ್ದ ಅವರು ತಾವೇ ಎಲ್ಲವನ್ನೂ ಮಾಡಲು ಸಾಧ್ಯವಾಗದೆಂದು ಭಾವಿಸಿ, ಶಿಷ್ಯರನ್ನೆಲ್ಲ ಕರೆದು, “ನೀವೆಲ್ಲ ಸಪ್ತದಿನ ಪರ್ಯಂತ ಸತತವಾಗಿ ಕರ್ಮಗಳನ್ನು ಮಾಡಿ. ನನ್ನನ್ನು ಬ್ರಹ್ಮಹತ್ಯಾದೋಷದಿಂದ ಮುಕ್ತರಾಗಿಸಿ” ಎಂದು ಆಜ್ಞೆ ಮಾಡಿದರು. ಶಿಷ್ಯರಲ್ಲಿ ಒಬ್ಬರಾಗಿದ್ದ ಯಾಜ್ಞವಲ್ಕರು, “ಇವರೆಲ್ಲರ ಬದಲಾಗಿ ನಾನೊಬ್ಬನೇ ತಪಸ್ಸು ಮಾಡಿ ನಿಮ್ಮನ್ನು ದೋಷಮುಕ್ತರನ್ನಾಗಿ ಮಾಡಬಲ್ಲೆ” ಎಂದು ಆತ್ಮವಿಶ್ವಾಸದಿಂದ ಹೇಳಿದರು.

ಆದರೆ ಗುರುಗಳಿಗೆ ಇದು ಅಹಂಕಾರದ ಪರಮಾವಧಿಯೆನಿಸಿತು. ಕೂಡಲೇ ಕಠಿಣವಾಗಿ. “ನಿನಗೆ ಬೋಧಿಸಿದ ಎಲ್ಲ ವಿದ್ಯೆಗಳನ್ನೂ ಹಿಂತಿರುಗಿಸಿ ಇಲ್ಲಿಂದ ಹೊರಟುಹೋಗು” ಎಂದು ಆಜ್ಞಾಪಿಸಿದರು. ಯಾಜ್ಞವಲ್ಕರು ಅಂತೆಯೇ ಅವರು ಕಲಿಸಿದ ಕೃಷ್ಣಯಜುರ್ವೇದವನ್ನು ಅಲ್ಲಿಯೇ ಬಿಟ್ಟು, ತಂದೆಯ ಆಶ್ರಮಕ್ಕೆ ಹಿಂದಿರುಗಿ ಬಂದರು.

ಮಿಥಿಲಾನಗರ ಯಾಜ್ಞವಲ್ಕರ ವಾಸಸ್ಥಾನವಾಗಿತ್ತು. ಆಗ ಮಿಥಿಲೆಯು ವಿದೇಹರಾಜ್ಯದ ರಾಜಧಾನಿ. ಅದರ ಅರಸ ಬ್ರಹ್ಮಜ್ಞಾನಿಯೆನಿಸಿದ ಜನಕ. ಆತನಲ್ಲಿ ಅವನ ಆಸ್ಥಾನದಲ್ಲಿ ಅನೇಕ ಪಂಡಿತರು, ಜ್ಞಾನಿಗಳು ಇರುತ್ತಿದ್ದರು. ರಾಜನು ಅನೇಕ ದೊಡ್ಡ ದೊಡ್ಡ ಪಂಡಿತರು, ಋಷಿಗಳೂ ಕೂಡಾ ಉಪದೇಶ ಪಡೆದು ಹೋಗುತ್ತಿದ್ದರು. ಜೊತೆಗೆ ಯಾಗ, ಯಜ್ಞಗಳನ್ನು ಮಾಡಿದ್ದನು.

ಇಂತಹ ಒಂದು ಯಜ್ಞಕ್ಷೆ ದೇಶದ ಎಲ್ಲ ಕಡೆಗಳಿಂದ ಪಂಡಿತರು ಆಗಮಿಸಿದ್ದರು. ಆಗ ಜನಕನಿಗೆ ಈ ಎಲ್ಲ ಜ್ಞಾನಿಗಳಲ್ಲಿ ಅತ್ಯಂತ ಶ್ರೇಷ್ಠ ಬ್ರಹ್ಮನಿಷ್ಠನನ್ನು ಆರಿಸಿ, ಅವನಿಂದ ಬ್ರಹ್ಮಜ್ಞಾನೋಪದೇಶ ಪಡೆದುಕೊಳ್ಳುವ ಇಚ್ಛೆಯಾಯಿತು. ಯಜ್ಞದ ಅಂತ್ಯದಲ್ಲಿ ಅತ್ಯಂತ ಶ್ರೇಷ್ಠ ಬ್ರಹ್ಮಜ್ಞಾನಿಗೆ ಚಿನ್ನಾಭರಣಗಳಿಂದ ಅಲಂಕರಿಸಿದ ಒಂದು ಸಾವಿರ ಗೋವುಗಳನ್ನು ದಾನಮಾಡುವುದಾಗಿ ಘೋಷಿಸಿದ.

ನೆರೆದಿದ್ದ ಯಾರಿಗೂ ಅದನ್ನು ಸ್ವೀಕರಿಸಲು ಧೈರ್ಯಸಾಲದಿದ್ದಾಗ, ಯಾಜ್ಞವಬ್ಬರು ತಮ್ಮ ಶಿಷ್ಯರನ್ನು ಕರೆದು ಗೋವುಗಳನ್ನು ಹೊಡೆದುಕೊಂಡು ಹೋಗುವಂತೆ ಹೇಳಿದರು. ಉಳಿದ ಮಹಾಪಂಡಿತರು ಕೂಡಲೇ ಇವರೊಡನೆ ವಾದಕ್ಕೆ ಇಳಿದರು. ಈ ವಾದವು ಬೃಹದಾರಣ್ಯಕ ಉಪನಿಷತ್ತಿನ ‘ಮುನಿಕಾಂಡ’ ಎಂಬ ಮೂರನೆಯ ಅಧ್ಯಾಯದಲ್ಲಿ ವಿಸ್ತಾರವಾಗಿ ನಿರೂಪಿತವಾಗಿದೆ.

ಎಲ್ಲ ಪಂಡಿತರೂ ವಾದದಲ್ಲಿ ಸೋತನಂತರ, ಜನಕನು ಇವರ ಜ್ಞಾನವನ್ನು ಮೆಚ್ಚಿ, ತನ್ನ ಸರ್ವಸ್ವವನ್ನೂ ಅವರಿಗೆ ಅರ್ಪಿಸುತ್ತಾನೆ. ಯಜ್ಞವಲ್ಕ್ಯರನ್ನು ತನ್ನ ಗುರುಗಳಾಗಿ ಸ್ವೀಕರಿಸಿ, ಅವರಿಂದ ಬ್ರಹ್ಮಜ್ಞಾನವನ್ನು ಪಡೆಯುತ್ತಾನೆ.

ಬ್ರಹ್ಮಜ್ಞಾನವು ಪುರುಷರಿಗೇ ಮೀಸಲಲ್ಲ, ಮಹಿಳೆಯರಿಗೂ ಅಷ್ಟೇ ಅವಕಾಶಗಳಿವೆಯೆಂದು ತೋರಿಸಿಕೊಟ್ಟ ಕೀರ್ತಿಯೂ ಯಾಜ್ಞವಲ್ಕರಿಗೆ ಸೇರಬೇಕು. ಜನಕನ ಸಭೆಯಲ್ಲಿ ಅವರೊಡನೆ ಗಾರ್ಗಿವಾಚಕ್ಕವಿಯೆಂಬ ಬ್ರಹ್ಮವಾದಿನಿಯು ವಾದಮಾಡುತ್ತಾಳೆ. ಅವಳ ವಿದ್ವತ್ತು ಮತ್ತು ಅನುಭವ ಯಾರಿಗೂ ಕಡಮೆಯಿರಲಿಲ್ಲ. ಅಂತಹ ಬ್ರಹ್ಮವಾದಿನಿಯರಿಗೆ ಸಾಕಷ್ಟು ಗೌರವವೂ ಇತ್ತು.

ಯಾಜ್ಞವಲ್ಬರ ಪತ್ನಿಯಾದ ಮೈತ್ರೇಯಿ ಮತ್ತೊಬ್ಬಳು ಬ್ರಹ್ಮನಿಷ್ಠಳು. ಯಾಜ್ಞವಲ್ಕರು ತಮ್ಮ ಐಶ್ವರ್ಯವನ್ನೆಲ್ಲ ಇಬ್ಬರು ಪತ್ನಿಯರಾದ ಮೈತ್ರೇಯಿ ಮತ್ತು ಕಾತ್ಯಾಯನಿಗೆ ಹಂಚಿಕೊಟ್ಟು ಸಂನ್ಯಾಸ ಸ್ವೀಕರಿಸಲು ತೀರ್ಮಾನಿಸಿದಾಗ, “ಈ ಐಶ್ವರ್ಯವು ಸುಖವನ್ನು ಕೊಡಬಲ್ಲದೇ?” ಎಂದು ಮೈತ್ರೇಯಿ ಪ್ರಶ್ನಿಸುತ್ತಾಳೆ.

ಅವಳ ಜ್ಞಾನಪಿಪಾಸೆಯನ್ನೂ ವೈರಾಗ್ಯವನ್ನೂ ಅರ್ಥಮಾಡಿಕೊಂಡ ಯಾಜ್ಞವಲ್ಕರು ಅವಳಿಗೆ ಆತ್ಮಜ್ಞಾನವನ್ನು ಉಪದೇಶಿಸುತ್ತಾರೆ. ಇದೇ ಬೃಹದಾರಣ್ಯಕ ಉಪನಿಷತ್ತಿನಲ್ಲಿ ಪ್ರಸಿದ್ಧವಾದ, ‘ಮೈತ್ರೇಯಿಬ್ರಾಹ್ಮಣ’ವೆಂಬ ಆತ್ಮವಿದ್ಯಾಭಾಗವು. ಹೀಗೆ ಮೈತ್ರೇಯಿಯ ನೆಪದಿಂದ ಲೋಕಕ್ಕೆ, ಆತ್ಮಜ್ಞಾನವನ್ನು ನೀಡಿ, ತಾವು ವಿದ್ವತ್ಸಂನ್ಯಾಸವನ್ನು ಸ್ವೀಕರಿಸಿ ಮುಕ್ತರಾದ ಮಹಾನುಭಾವರು, ಯಾಜ್ಞನರು.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-೧

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *