ಭಾರತೀಯ ಗುರುಪರಂಪರೆಯು ನಾರಾಯಣನಿಂದ ಆರಂಭವಾಯಿತನ್ನುತ್ತಾರೆ. ಈ ಪರಂಪರೆ ಮುಂದುವರಿಯಿತು. ಈ ಗುರುಪರಂಪರೆಯನ್ನು ಹೇಳುವ ಶ್ಲೋಕ ನಾರಾಯಣನಿಂದ ಬ್ರಹ್ಮ, ವಸಿಷ್ಠ, ಶಕ್ತಿ, ಪರಾಶರ, – ಹೀಗೆ ವಂಶಪಾರಂಪರ್ಯವಾಗಿದೆ. “ನಾರಾಯಣಂ ಪದ್ಮಭುವಂ ವಸಿಷ್ಟಂ ಶಕ್ತಿಂ ಚ ತತ್ತುತ್ತ ಪರಾಶರಂ ಚ | ವ್ಯಾಸಂ ಶುಕಂ ಗೌಡಪದಂ ಮಹಾಂತಂ ಗೋವಿಂದಯೋಗೀಂದ್ರಮಥಾಸ್ಯ ಶಿಷ್ಯಂ |” ವಸಿಷ್ಠರು ಅತ್ಯಂತ ಪ್ರಸಿದ್ಧರಾದ ಮಹರ್ಷಿಗಳು, ‘ವಶಿವತಾಂ ವಶಿನಾಂ ಜಿತೇಂದ್ರಿಯಾಣಾಂ ಶ್ರೇಷ್ಠಃ’ – ತನ್ನ ಇಂದ್ರಿಯ ಮತ್ತು ಮನಸ್ಸುಗಳನ್ನು ಹತೋಟಿ ಯಲ್ಲಿಟ್ಟುಕೊಂಡು ಆ ಮೂಲಕ ಹೊರಗಿನ ಎಲ್ಲ ಜನರನ್ನೂ ವಶದಲ್ಲಿಟ್ಟು ಕೊಂಡಿದ್ದ ಮಹಾನುಭಾವರು ವಸಿಷ್ಠರು. ಅವರು ಅನೇಕ ವೇದಮಂತ್ರಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದರು. ಋಗ್ವೇದದಮಂತ್ರಗಳನ್ನು ಕಂಡುಕೊಂಡಿದ್ದ ಮಂತ್ರದ್ರಷ್ಟಾರರಲ್ಲಿ ಇವರೂ ಒಬ್ಬರು. ಋಗ್ವೇದದ 890 ಮಂತ್ರಗಳು ವಸಿಷ್ಠರಿಂದ ದರ್ಶಿಸಲ್ಪಟ್ಟವುಗಳು. ವೇದದ ಅತಿ ಹೆಚ್ಚು ಮಂತ್ರಗಳನ್ನು ಕಂಡುಕೊಂಡ ಖ್ಯಾತಿ ಅವರಿಗೆ ಸೇರಬೇಕು. ಉದಾಹರಣೆಗೆ ಏಳನೆಯ ಅಷ್ಟಕದ ಪವಮಾನಸೋಮಸೂಕ್ತಗಳು ವಸಿಷ್ಠರಿಂದ ದರ್ಶಿಸಲ್ಪಟ್ಟವುಗಳು. ಪ್ರ ಹಿನ್ದಾನೋ ಜನಿತಾ ರೋದನ್ನೋ ರಥೋ ನ ವಾಜಂ ಸನ್ನಿಷ್ಯನ್ನಮಾಸೀತ್। ಎಂದು ಈ ಸೂಕ್ತಗಳು ಪ್ರಾರಂಭವಾಗುತ್ತವೆ. ಇದೇ ಅಷ್ಟಕದ 97ನೇಯ ಸೂಕ್ತದಲ್ಲಿ ಮೊದಲ ಮೂರು ಸೂಕ್ತಗಳನ್ನು ವಸಿಷ್ಠರೂ, ಅನಂತರ ಅವರ ಗೋತ್ರಜ (ವಂಶಜ)ರಾದ ಇಂದ್ರಪ್ರಮತಿ, ವೃಷಗಣ, ಮನ್ಯು, ಉಪಮನ್ಯು, ವ್ಯಾಘ್ರಪಾದ, ಶಕ್ತಿ, ತರ್ಕಾಶ್ರುತ್, ಮೃಲೀಕ, ವಸುಕ ಮುಂತಾದವರೂ ದರ್ಶಿಸಿರುತ್ತಾರೆ. ಇದು ವಸಿಷ್ಠರು ಸ್ವತಃ ವೇದಸೂಕ್ತಗಳ ದರ್ಶಕರಷ್ಟೇ ಅಲ್ಲ, ತಮ್ಮ ವಂಶಜರನ್ನೂ ದರ್ಶಕರನ್ನಾಗಿ ಮಾಡಿದ್ದ ಪ್ರಸಿದ್ಧ ಆಚಾರ್ಯರೆಂಬುದನ್ನು ತೋರಿಸುತ್ತದೆ. ವಸಿಷ್ಠರು ಬ್ರಹ್ಮನ ಮಾನಸಪುತ್ರರೆಂದು ಪ್ರಸಿದ್ದರು. ಇವರನ್ನು ಅಗಸ್ಯರಂತೆ ಕುಂಭಸಂಭವರೆಂದೂ ಕೆಲವು ಪುರಾಣಗಳು ವರ್ಣಿಸುತ್ತವೆ. ಸಪ್ತರ್ಷಿಗಳಲ್ಲಿ ವಸಿಷ್ಠರು ಪ್ರಮುಖರು. ಸಪ್ತರ್ಷಿಗಳು ಮನ್ವಂತರದಿಂದ ಮನ್ವಂತರಕ್ಕೆ ಬದಲಾಗುತ್ತಾರೆ. ಮೊದಲನೆಯ ಸ್ವಾಯಂಭುವ ಮನ್ನಂತರದಲ್ಲಿ ಮರೀಚಿ, ಅತಿ, ಪುಲಹ, ಪುಲಸ್ತ್ಯ, ಶ್ರುತ, ಅಂಗಿರಸ ಮತ್ತು ವಸಿಷ್ಠ ಸಪ್ತರ್ಷಿಗಳು. ಇವರುಗಳಲ್ಲಿ ವಸಿಷ್ಠರ ಬಗ್ಗೆ ಎಲ್ಲ ಪುರಾಣಗಳು ಮತ್ತು ಕಾವ್ಯಗಳಲ್ಲಿ ಹೆಚ್ಚು ಉಲ್ಲೇಖವಿದೆ. ಮೂರನೆಯ ಉತ್ತಮ ಮನ್ವಂತರದಲ್ಲಿ ವಸಿಷ್ಠರ ಪುತ್ರರೇ ಸಪ್ತರ್ಷಿಗಳ ಸ್ಥಾನವನ್ನು ಅಲಂಕರಿಸಿರುತ್ತಾರೆ. ತಮ್ಮ ತೇಜಸ್ಸು ಮತ್ತು ತಪಸ್ಸುಗಳಿಂದಲೇ ಅವರು ಆ ಸ್ಥಾನವನ್ನು ಪಡೆದರು. ತಮ್ಮಷ್ಟೇ ಶಕ್ತಿ ಸಾಮರ್ಥ್ಯಗಳನ್ನು ಪುತ್ರರೂ, ಶಿಷ್ಯರೂ ಆದವರಲ್ಲಿ ಸಂಕ್ರಮಣ ಮಾಡುವುದು ಆಚಾರ್ಯರ ಮತ್ತೊಂದು ಪ್ರಮುಖ ಗುಣವಾಗಿದೆ. ಐದನೆಯ ರೈವತ ಮನ್ವಂತರದಲ್ಲಿ ಮತ್ತೆ ವಸಿಷ್ಠರು ಸಪ್ತರ್ಷಿಗಳಲ್ಲಿ ಸ್ಥಾನವನ್ನು ಅಲಂಕರಿಸುತ್ತಾರೆ. ಈಗ ನಡೆಯುತ್ತಿರುವುದು ಏಳನೆಯ ವೈವಸ್ವತ ಮನ್ನಂತರ. ಇದರಲ್ಲಿಯೂ ಅತಿಶ್ಚನ ವಸಿಷ್ಠಶ್ಚ ಕಾಶ್ಯಪಶ್ಚ ಮಹಾನೃಷಿ: ಗೌತಮಶ್ಚ ಭಾರದ್ವಾಜೋ ವಿಶ್ವಾಮಿತ್ರೋsಥ ಕೌಶಿಕಃ ॥ ತಥೈವ ಪುತ್ರೋ ಭಗವಾನ್ ಋಚೀಕಸ್ಯ ಮಹಾತ್ಮನಃ ಜಮದಗ್ನಿಸ್ತು ಸಪ್ಪೆತೇ ಮುನಯೋsತ್ರ ತಥಾಂತರೇ ॥ ಎಂದು ಸಪ್ತರ್ಷಿಗಳ ಮಧ್ಯದಲ್ಲಿ ವಸಿಷ್ಠರಿಗೆ ಸ್ಥಾನ ಮೀಸಲಾಗಿದೆ. ವಸಿಷ್ಠರು ಗೋತ್ರಪ್ರವರ್ತಕರೂ ಹೌದು. ಅವರಿಂದ ಪ್ರವರ್ತಿತವಾದದ್ದು ವಸಿಷ್ಠ ಅಥವಾ ಉಪಮನ್ಯು ಗೋತ್ರ, ಜಾತೂಕರ್ಣಿ, ಪರಾಶರ, ಲಾಗಾಕ್ಷಿ ಗೋತ್ರಗಳಿಗೂ ವಸಿಷ್ಠರು ಅಥವಾ ವಾಸಿಷ್ಠರು ಋಷಿಗಳು. ಸೂರ್ಯವಂಶದ ರಾಜರಿಗೆ ವಸಿಷ್ಠರೇ ಕುಲಗುರುಗಳು. ರಾಮಾಯಣದಲ್ಲಿ ವಸಿಷ್ಠರದು ಪ್ರಮುಖ ಪಾತ್ರ. ಬಾಲಕಾಂಡದಲ್ಲಿ ದಶರಥನಿಂದ ಪುತ್ರಾರ್ಥವಾಗಿ ನಡೆದ ಯಾಗಕ್ಕೆ ವಸಿಷ್ಠರದೇ ನೇತೃತ್ವ, ರಾಮಲಕ್ಷ್ಮಣರನ್ನು ವಿಶ್ವಾಮಿತ್ರರ ಜೊತೆ ಕಳಿಸಲು ದಶರಥನು ಅನುಮಾನಪಡುತ್ತಿದ್ದಾಗ ತಮ್ಮ ಪ್ರತಿಸ್ಪರ್ಧಿಯಾಗಿದ್ದ ವಿಶ್ವಾಮಿತ್ರರಲ್ಲಿಯೂ ಉತ್ತಮ ಗುಣಗಳನ್ನು ಕಂಡುಕೊಂಡು, ಮುಂದೆ ರಾಮನ ಅಭ್ಯುದಯದ ಸಾಧನವನ್ನು ಒದಗಿಸಿಕೊಟ್ಟವರು ವಸಿಷ್ಠರು. ವಿಶ್ವಾಮಿತ್ರರ ತಪೋಬಲ ಮತ್ತು ಅಸ್ತ್ರವಿದ್ಯಾ ಚಾತುರ್ಯವನ್ನು ಅವರು ಮುಕ್ತಕಂಠದಿಂದ ಹೊಗಳಿರುತ್ತಾರೆ. ರಾಕ್ಷಸನಿಗ್ರಹಣದಲ್ಲಿ ಸ್ವಯಂ ಶಕ್ತರಾದರೂ ವಿಶ್ವಾಮಿತ್ರರು ರಾಮನ ಹಿತಾರ್ಥವಾಗಿಯೇ ಅವನನ್ನು ಕರೆದುಕೊಂಡು ಹೋಗುತ್ತಿದ್ದಾರೆಂಬ ಸತ್ಯವನ್ನು ಅರಿತವರು. ಅದನ್ನೇ ಅವರು ದಶರಥನಿಗೆ ಹೇಳಿ ರಾಮನ ಅಭ್ಯುದಯಕ್ಕೆ ಕಾರಣರಾಗುತ್ತಾರೆ. ಅನಂತರ ದಶರಥನು ಸಂತೋಷದಿಂದ ರಾಮಲಕ್ಷ್ಮಣರನ್ನು ಕಳಿಸುತ್ತಾನೆ. ಶ್ರೀರಾಮಚಂದ್ರನಿಗೇ ಗುರುಗಳಾಗುವ ಯೋಗ್ಯತೆ ಹೊಂದಿದ್ದವರು ವಸಿಷ್ಠರು. ಅರಮನೆಯಲ್ಲಿ ನಡೆಯಬೇಕಾದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳೂ ಅವರ ಆಪ್ಪಣೆಯಂತೆಯೇ ನಡೆಯುತ್ತಿದ್ದವು; ಸಮಯೋಚಿತವಾದ ಸಲಹೆಗಳನ್ನು ಕೊಡುತ್ತಿದ್ದ ಅವರ ಮಾತುಗಳಿಗೆ ಅಲ್ಲಿ ಅತೀವ ಮನ್ನಣೆಯಿತ್ತು. ದಶರಥ ಮರಣಿಸಿದ ಸಂದರ್ಭದಲ್ಲಿ ದೇಹವನ್ನು ತೈಲಭಾಂಡದೊಳಗೆ ಇರಿಸಿ, ಭರತನಿಗೆ ಹೇಳಿಕಳುಹಿಸಿದವರೂ ವಸಿಷ್ಠರೇ. ರಾಜನ ಮಾತಿನಂತೆ ಭರತನಿಗೆ ರಾಜ್ಯಭಾರವನ್ನು ವಹಿಸಿಕೊಡಲು ಏರ್ಪಾಡು ಮಾಡಿದರು. ಆದರೆ ಅವನು ರಾಜ್ಯವನ್ನು ತಿರಸ್ಕರಿಸಿ ರಾಮನನ್ನು ಕರೆತರಲು ಕಾಡಿಗೆ ಹೊರಟಾಗ, ತಾವೂ ಜೊತೆಯಲ್ಲಿ ಬಂದರು. ಕಾಡಿನಲ್ಲಿ ರಾಮನಿಗೆ ಇಕ್ಷಾಕುವಂಶದ ಚರಿತ್ರೆಯನ್ನು ವಿವರಿಸಿ, ಜೇಷ್ಠಪುತ್ರನೇ ರಾಜ್ಯದ ಉತ್ತರಾಧಿಕಾರಿಯೆಂಬ ಕುಲಪದ್ಧತಿಯನ್ನು ನಿರೂಪಿಸಿದರು. ಆ ಸಂದರ್ಭದಲ್ಲಿ ಅವರು ಆಚಾರ್ಯರ ಸ್ಥಾನವನ್ನು ಕುರಿತು, ‘ತಂದೆಯು ದೇಹವನ್ನು ಕೊಡುತ್ತಾನೆ. ಆದರೆ ಆಚಾರ್ಯನು ಜ್ಞಾನವನ್ನು ಕೊಡುತ್ತಾನೆ. ಆದ್ದರಿಂದಲೇ ಅವನು ಶ್ರೇಷ್ಠನು’ ಎಂದು ಹೇಳುತ್ತ ಆಚಾರ್ಯತ್ವವನ್ನು ಸಮರ್ಥಿಸುತ್ತಾರೆ. ಅವರು ಇಡೀ ಇಕ್ಷಾಕುವಂಶಕ್ಕೆ ಕುಲಗುರುಗಳಾದ ಕಾರಣ ಆಚಾರ್ಯರೆಲ್ಲರಲ್ಲಿ ಶ್ರೇಷ್ಠರಾಗಿದ್ದರು. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-೧ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಬ್ರಹ್ಮಜ್ಞಾನ ಪುರುಷರಿಗೆ ಮೀಸಲಲ್ಲ, ಮಹಿಳೆಯರೂ ಪಡೆಯಬಹುದೆಂದು ತೋರಿಸಿಕೊಟ್ಟ ಯಾಜ್ಞವಲ್ಕ್ಯ ಮಹರ್ಷಿ ವಸಿಷ್ಠರ ಜೇಷ್ಠಪುತ್ರ ಶಕ್ತಿ ಮಹರ್ಷಿ