ಉತಥ್ಯ ಮಹಾಮುನಿ ಅಂಗಿರಸರ ಪುತ್ರರು. ಬೃಹಸ್ಪತಿ ಮತ್ತು ಸಂವರ್ತರು ಇವರ ಸಹೋದರರು. ಈ ಮುನಿ ಮಾಂಧಾತ ರಾಜನ ಕಾಲದಲ್ಲಿದ್ದರೆಂದು ಹೇಳುತ್ತಾರೆ. ಇವರಿಗೆ ಉಚಥ್ಯರೆಂಬ ಹೆಸರೂ ಇದ್ದಂತೆ ಕಾಣುತ್ತದೆ. ಅನುಶಾಸನಪರ್ವದಲ್ಲಿ ವಾಯುವು ಕಾರ್ತವೀರ್ಯಾರ್ಜುನನಿಗೆ ಬ್ರಾಹ್ಮಣರ ಮಹತ್ತ್ವವನ್ನು ತಿಳಿಯಪಡಿಸುತ್ತ, ಉತಥ್ಯರ ಪ್ರಭಾವವನ್ನು ವಿವರಿಸುವ ಸಂದರ್ಭವಿದೆ. ಸೋಮನಿಗೆ ‘ಭದ್ರಾ’ ಎಂಬ ಅಪ್ರತಿಮರೂಪಸಿಯಾದ ಮಗಳಿದ್ದಳು. ಅವಳು ಉತಥ್ಯರನ್ನೇ ಪತಿಯನ್ನಾಗಿ ಪಡೆಯಬೇಕೆಂದು ನಿಯಮಾನುಷ್ಠಾನಪರಳಾಗಿ ಕಠೋರ ತಪಸ್ಸನ್ನು ಮಾಡಿದ್ದಳು. ಭದ್ರೆಯ ತಾತನಾದ ಅತ್ರಿಯು ಮೊಮ್ಮಗಳ ಮನೋಭಿಪ್ರಾಯವನ್ನು ತಿಳಿದು, ಉತಥ್ಯರನ್ನು ಆಹ್ವಾನಿಸಿ, ಭದ್ರೆಯನ್ನು ಅವರಿಗೆ ವಿವಾಹಮಾಡಿಕೊಟ್ಟನು. ಆದರೆ ವರುಣನು ಭದ್ರೆಯನ್ನು ತಾನು ಪಡೆಯಬೇಕೆಂದು ಆಶಿಸಿದ್ದನು. ಅವನು ಸಮಯವನ್ನು ಕಾಯುತ್ತಿದ್ದು, ಯಮುನಾನದಿಗೆ ಸ್ನಾನಕ್ಕಾಗಿ ಹೋಗಿದ್ದ ಭದ್ರೆಯನ್ನು ಅಪಹರಿಸಿಕೊಂಡು ಹೋದನು. ಈ ವಿಷಯವು ನಾರದರಿಂದ ಉತಥ್ಯರಿಗೆ ತಿಳಿಯಿತು. ಉತಥ್ಯರು ನಾರದರ ಮೂಲಕವಾಗಿಯೇ ‘ತನ್ನ ಪತ್ನಿಯನ್ನು ಬಿಟ್ಟುಕೊಡುವಂತೆ’ ವರುಣನಿಗೆ ಹೇಳಿಕಳುಹಿಸಿದರು. ನಾರದರು ಅಂತೆಯೇ ವರುಣಲೋಕಕ್ಕೆ ಹೋಗಿ ಉತಥ್ಯರ ಪ್ರಭಾವವನ್ನು ತಿಳಿಸಿದರೂ ವರುಣನು ಭದ್ರೆಯನ್ನು ಕಳಿಸಲು ಒಪ್ಪಲಿಲ್ಲ. ಉತಥ್ಯರು ತಮ್ಮ ತೇಜಸ್ಸಿನಿಂದ ನೀರನ್ನೆಲ್ಲ ಸ್ಥಂಭಿಸಿ ಕುಡಿದುಬಿಡಲು ಶುರುಮಾಡಿದರು. ಆದರೂ ವರುಣನು ಬಗ್ಗಲಿಲ್ಲ. ಉತಥ್ಯರು ಭೂದೇವಿಯನ್ನು ವರುಣನ ನಗರಕ್ಕೆ ದಾರಿತೋರಿಸಲು ಕೇಳಿದರು. ಭೂದೇವಿಯು ಭದ್ರೆಯು ಇರುವ ಸ್ಥಳವನ್ನು ತೋರಿಸಿದಳು. ಅವಳನ್ನು ಕರೆತರಲು ಉತಥ್ಯರು ಸಮುದ್ರದ ಬಳಿಗೆ ಹೋಗುತ್ತಲೇ ಆ ಪ್ರದೇಶವೆಲ್ಲ ಬಂಜರು ಭೂಮಿಯಂತಾಯಿತು. ಭ್ರಾಂತನಾದ ವರುಣನು ಉತಥ್ಯರಿಗೆ ಶರಣಾಗಿ ಭದ್ರೆಯನ್ನು ಅವರಿಗೆ ಒಪ್ಪಿಸಿದನು. ಕರುಣಾಳುವಾದ ಉತಥ್ಯರು ವರುಣನನ್ನು ಕ್ಷಮಿಸಿ, ಅಖಿಲ ಜಗತ್ತನ್ನೂ ದುಃಖದಿಂದ ಬಿಡುಗಡೆ ಮಾಡಿದರು. ಮಹಾಭಾರತದ ಆದಿಪರ್ವದಲ್ಲಿ ಭೀಷ್ಮನು ತನ್ನ ತಾಯಿಯಾದ ಸತ್ಯವತಿಗೆ ಉತಥ್ಯರ ವಿಚಾರವನ್ನು ಹೇಳುತ್ತಾನೆ. ಉತಥ್ಯರಿಗೆ ಮಮತೆಯೆಂಬ ಮಡದಿಯಿದ್ದಳು. ಅವಳು ಗರ್ಭ ಧರಿಸಿದಾಗ ಉತಥ್ಯರ ಮಹಿಮೆಯಿಂದ ಮಗುವು ಗರ್ಭದಲ್ಲಿಯೇ ವೇದವೇದಾಂಗಗಳನ್ನು ತಿಳಿದಿತ್ತು. ದೇವಗುರುವಾದ ಬೃಹಸ್ಪತಿಯು ಮಮತೆಯನ್ನು ಕಾಮಿಸಲು ಬಂದನು. ಆಗ ಗರ್ಭದಲ್ಲಿದ್ದ ಶಿಶುವು ಅವನನ್ನು ಅಕಾರ ಮಾಡದಂತೆ ತಡೆಯಿತು. ಬೃಹಸ್ಪತಿಯು ಕುಪಿತನಾಗಿ ಮಗುವನ್ನು ಹುಟ್ಟು ಕುರುಡನಾಗುವಂತೆ ಶಪಿಸಿದನು. ಅದರಂತೆ ಉತಥ್ಯರ ಮಗನಾದ ದೀರ್ಘತಮಸನು ಕುರುಡನಾದರೂ ಮೇಧಾವಿಯಾಗಿದ್ದನು. ಅವನು ಮುಂದೆ ಪ್ರದ್ವೇಷಿಯೆಂಬ ಕನೈಯನ್ನು ವಿವಾಹವಾದನು. ಆವರೆಗೆ ವಿವಾಹಪದ್ಧತಿ ಅಷ್ಟು ನಿಯಮಬದ್ಧವಾಗಿರಲಿಲ್ಲ. ದೀರ್ಘತಮಸನು ಪ್ರತಿ ಹೆಂಗಸೂ ಒಬ್ಬನೇ ಗಂಡನಲ್ಲಿ ಅನುರಕ್ತಳಾಗಿರಬೇಕೆಂಬ ನಿಯಮವನ್ನು ಮಾಡಿದನು. ಮಹಾಭಾರತದ ಶಾಂತಿಪರ್ವದಲ್ಲಿ ಬ್ರಹ್ಮವಿದರಲ್ಲಿ ಶ್ರೇಷ್ಠರಾದ ಉತಥ್ಯರು ಯವನಾಶ್ವನ ಮಗನಾದ ಮಾಂಧಾತನಿಗೆ ಕ್ಷಾತ್ರಧರ್ಮದ ಉಪದೇಶ ಮಾಡಿರುವ ವಿಷಯ ಉಕ್ತವಾಗಿದೆ. ಮಾಂಧಾತನು ಒಮ್ಮೆ ಉತಥ್ಯರನ್ನು ಸಂಧಿಸಿದಾಗ ಮಹರ್ಷಿಯು “ರಾಜನು ಧರ್ಮವನ್ನು ಪರಿಪಾಲನೆ ಮಾಡಬೇಕು ಮತ್ತು ಪ್ರಚಾರಮಾಡಬೇಕು. ಅವನು ಜಗತ್ತಿನ ರಕ್ಷಕನಾಗಿರಬೇಕೇ ಹೊರತು ಸುಖೋಪಭೋಗಗಳನ್ನು ಅನುಭವಿಸುತ್ತ ಕಾಲ ಕಳೆಯಬಾರದು. ಎಲ್ಲ ಪ್ರಾಣಿಗಳೂ ಧರ್ಮದ ಆಧಾರದ ಮೇಲೆಯೇ ಜೀವಿಸಿವೆ. ರಾಜನು ಅಂತಹ ಧರ್ಮವನ್ನು ಪಾಲಿಸದಿದ್ದರೆ ದೇವತೆಗಳು ಅವನನ್ನು ನಿಂದಿಸುತ್ತ, ನರಕಕ್ಕೆ ತಳ್ಳುತ್ತಾರೆ. ಜಗತ್ತಿನಲ್ಲಿ ಪಾಪಾಚರಣೆ ಹೆಚ್ಚಿದರೆ, ಸತ್ಪುರುಷರು ‘ಇದು ನನ್ನ ವಸ್ತು’ ಎಂದು ಯಾವುದನ್ನೂ ಹೇಳಿಕೊಳ್ಳಲು ಆಗುವುದೇ ಇಲ್ಲ. ದೇವರಪೂಜೆ, ಪಿತೃತರ್ಪಣ, ಅತಿಥಿಸತ್ಕಾರಗಳು ನಿಂತುಹೋಗುತ್ತವೆ. ಇಹಪರಗಳನ್ನು ಗಮನದಲ್ಲಿಟ್ಟುಕೊಂಡು ಋಷಿಗಳು ರಾಜನನ್ನು ಸೃಷ್ಟಿಸಿರುತ್ತಾರೆ. ರಾಜನೂ ಬ್ರಾಹ್ಮಣರ ವಿಷಯದಲ್ಲಿ ಗೌರವದಿಂದ ಇರಬೇಕು. ವಿರೋಚನನ ಮಗನಾದ ಬಲಿಯು ಬ್ರಾಹ್ಮಣರ ವಿಷಯದಲ್ಲಿ ಅಸೂಯೆಯನ್ನು ತಾಳಿದ್ದರಿಂದಲೇ ರಾಜ್ಯಲಕ್ಷ್ಮಿಯು ಅವನನ್ನು ಬಿಟ್ಟುಹೋದಳು. ದರ್ಪವೂ ಕೂಡ ಹಾನಿಕರವಾದುದು. ದರ್ಪನು ಅಧರ್ಮನ ಪುತ್ರನು. ಅವನು ತನ್ನ ಪ್ರಭಾವದಿಂದ ದೇವತೆಗಳನ್ನು, ಅಸುರರನ್ನು ಮತ್ತು ರಾಜರ್ಷಿಗಳನ್ನು ವಿನಾಶಗೊಳಿಸುತ್ತಾನೆ. ನಿನಗೆ ಬಹಳ ಕಾಲ ರಾಜ್ಯವನ್ನು ಆಳುವ ಆಸೆಯಿದ್ದರೆ ದರ್ಪಕ್ಕೆ ವಶನಾಗಬೇಡ” ರಾಜನು ಎಚ್ಚರಿಕೆಯಿಂದ ಇರಬೇಕಾದ ಅಂಶಗಳನ್ನೆಲ್ಲ ಮಾಂಧಾತನಿಗೆ ಹೇಳುತ್ತಾರೆ. ಹೀಗೆ ಹೇಳುತ್ತ ಉತಥ್ಯರು ಅನಾಚಾರಿಯಾದ ರಾಜನಿಂದ ರಾಜ್ಯದಲ್ಲಿ ಉಂಟಾಗಬಹುದಾದ ಅನರ್ಥಗಳನ್ನೂ ವಿವರಿಸುತ್ತಾರೆ. ಎಲ್ಲರೂ ತಮ್ಮ ತಮ್ಮ ವರ್ಣೋಚಿತ ಕರ್ಮಗಳನ್ನು ಮಾಡುವಂತೆ ರಾಜನು ನಿಯೋಜಿಸಬೇಕು ಎಂದು ಮಾಂಧಾತನಿಗೆ ವಿಸ್ತಾರವಾಗಿ ಉತಥ್ಯರು ರಾಜಧರ್ಮವನ್ನು ಉಪದೇಶಿಸಿಸುತ್ತಾರೆ. ಅದರಂತೆಯೇ ನಡೆದ ಆ ರಾಜನು ಉತ್ತಮವಾಗಿ ರಾಜ್ಯಭಾರ ಮಾಡಿ ಕೀರ್ತಿಶಾಲಿಯಾದನು. ಹೀಗೆ ಅಂಗಿರಸರ ಮೂರುಜನ ಪುತ್ರರೂ ಪ್ರಸಿದ್ಧ ಮಹರ್ಷಿಗಳಾಗಿದ್ದರು. ಹಿರಿಯರಾದ ಉತಥ್ಯರು ವರುಣನನ್ನೇ ಮಣಿಸಿ ಕೀರ್ತಿಶಾಲಿಯಾದರು; ಮಾಂಧಾತನಿಗೆ ಮಾರ್ಗದರ್ಶಕರಾಗಿದ್ದರು. ಎರಡನೆಯವನಾದ ಬೃಹಸ್ಪತಿಯು ದೇವತೆಗಳಿಗೆ ಗುರುವಾದನು. ಮೂರನೆಯವನಾದ ಸಂವರ್ತನು ಅವಧೂತನಾಗಿ, ಮರುತ್ತನಿಗೆ ಯಾಜಕನಾಗಿ, ಇಂದ್ರನನ್ನೇ ಜಯಿಸಿದನು. ಮಹಾಭಾರತದ ಆದಿಪರ್ವ- ಅನುಶಾಸನ ಪರ್ವಗಳು, ಭಾಗವತ, ವಿಷ್ಣುಪುರಾಣ ಮತ್ತು ಮತ್ತ್ವಪುರಾಣಗಳು ಉತಥ್ಯರ ಮಹಿಮೆಯನ್ನು ವರ್ಣಿಸುತ್ತವೆ. ಹಿಂದೆ ಮಹರ್ಷಿಗಳು ಶಾಪಾನುಗ್ರಹಸಮರ್ಥರಾಗಿದ್ದರು. ರಾಜನು ಮಹರ್ಷಿಗಳ ಆಶ್ರಮಗಳಿಗೆ ಹೋಗಿ ಅವರ ಆವಶ್ಯಕತೆಗಳನ್ನು ಸ್ವತಃ ಮನ್ನಿಸುತ್ತಿದ್ದನಲ್ಲದೆ, ಅವರೊಡನೆ ಸಮಾಲೋಚನೆ ಮಾಡಿ ತನ್ನ ರಾಜ್ಯವನ್ನು ಪಾಲಿಸುತ್ತಿದ್ದನೆಂದು ಇದರಿಂದ ತಿಳಿದುಬರುತ್ತದೆ. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ವೀರ ಸಾವರ್ಕರ್ ಸ್ಮರಣ ಸಂಚಿಕೆ 2: ಸ್ವಾತಂತ್ರ್ಯ ಹೋರಾಟದ ಸಪ್ತಪದಿ ತುಳಿದ ದಂಪತಿ, ಲಂಡನ್ಗೆ ಜಿಗಿದ ಸಿಂಹ ಛಾಂದೋಗೋಪನಿಷತ್ತಿನ ಈ ಮಂತ್ರ ಜಪಿಸಿ 116 ವರ್ಷ ಬದುಕಿದ್ದ ಐತರೇಯ ಮಹರ್ಷಿ