ಕರ್ನಾಟಕದ ಭಕ್ತಿ ಪರಂಪರೆಯಲ್ಲಿ ಮಹಿಳಾ ಶರಣೆಯರ ಸ್ಥಾನ ಅತ್ಯಂತ ವಿಶಿಷ್ಟವಾಗಿದೆ. ಅಂತಹ ಮಹಾನ್ ಶಿವಭಕ್ತೆಯರಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಪ್ರಮುಖರು. ಭಕ್ತಿ, ತ್ಯಾಗ, ಸಹನೆ, ಸೇವಾಭಾವ ಮತ್ತು ಮಾನವೀಯತೆಯ ಮೂಲಕ ಜನಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಮಲ್ಲಮ್ಮನವರ ಜಯಂತಿಯನ್ನು ಪ್ರತಿವರ್ಷ ಮೇ 10 ರಂದು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ದಿನ ಅವರ ಆದರ್ಶ ಜೀವನ, ಭಕ್ತಿ ಪರಂಪರೆ ಮತ್ತು ಸಮಾಜಕ್ಕೆ ನೀಡಿದ ಮೌಲ್ಯಗಳನ್ನು ಸ್ಮರಿಸಲಾಗುತ್ತದೆ. ಹೇಮರಡ್ಡಿ ಮಲ್ಲಮ್ಮ ಜಾತಿಗಳನ್ನು ಮೀರಿದ ಸಾದ್ವಿ ಹೆಣ್ಣುಕುಲದ ಧೀಶಕ್ತಿ, ಆದರ್ಶ ಸೊಸೆ, ಅದರ್ಶ ಮಡದಿ ಹೇಗಿರಬೇಕು ಎಂಬುದನ್ನು ಶತಮಾನಗಳ ಹಿಂದೆಯೇ ನಿರೂಪಿದ ಮಾದರಿ ಮಹಿಳೆ ಜೀವನದ ಮೇಲಿನ ಅವಳ ಶ್ರದ್ಧೆ ಸಾಮಾಜಿಕ ಕಳಕಳಿ, ಭಕ್ತಿಯನ್ನು ಕಂಡು ಸಾಕ್ಷಾತ್ ಶಿವನೇ ಮರಳಾಗಿದ್ದುಂಟು. ಹೀಗಾಗಿ ಮಲ್ಲಮ್ಮನನ್ನು ಒಂದು ಜಾತಿಗೆ, ಧರ್ಮಕ್ಕೆ ಸೀಮಿತವಾಗಿ ನೋಡುವುದೇ ಮಹಾಪರಾಧ. ಆಕೆ ಎಲ್ಲ ಜಾತಿ-ಧರ್ಮಿಯರ ಆದರ್ಶ. ವಿಶೇಷವಾಗಿ ಹೆಣ್ಣು ಸಂಕುಲಕ್ಕೆ ದಾರಿದೀಪ. ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯ ದೈವರಾಗಿ ಪೂಜಿಸುತ್ತ ಹಲವಾರು ಪವಾಡಗಳನ್ನು ಮಾಡುತ್ತ ಕೊನೆ ಕೊನೆಗೆ ತಾನೇ ದೈವವಾಗಿ ಅವತರಿಸಿದ ಹೇಮರಡ್ಡಿ ಮಲ್ಲಮ್ಮನ ಚರಿತ್ರೆ ಮೈನವಿರೇಳಿಸುವಂತಹದ್ದು ಸುಮಾರು ಐದು ನೂರು ವರ್ಷಗಳ ಹಿಂದೆ ಶ್ರೀಶೈಲ ಕ್ಷೇತ್ರದ ಸಮೀಪದ ರಾಮಪುರದಲ್ಲಿ ರಾಮರೆಡ್ಡಿ ಹಾಗೂ ಗೌರಮ್ಮ ದಂಪತಿಗಳಿಗೆ ಶ್ರೀಶೈಲ ಚನ್ನಮಲ್ಲಿಕಾರ್ಜುನನ ಕೃಪೆಯಿಂದ ಜನಿಸಿದ ಹೆಣ್ಣುಮಗುವೇ ಹೇಮರೆಡ್ಡಿ ಮಲ್ಲಮ್ಮ ಎಂದು ಜನಪದ ಕತೆಗಳು ತಿಳಿಸುತ್ತವೆ. ಕೆಲ ಜನಪ್ರತೀತಿಗಳ ಪ್ರಕಾರ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಉಪ್ಪಿನಬೆಟಗೇರಿಯನ್ನೂ ಅವರ ಜನ್ಮಸ್ಥಳವೆಂದು ಹೇಳಲಾಗುತ್ತದೆ. ಬಾಲ್ಯದಿಂದಲೇ ಮಲ್ಲಮ್ಮ ಶಿವಭಕ್ತಿ, ಪೂಜೆ, ಧ್ಯಾನ ಹಾಗೂ ದಾನಧರ್ಮಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ವಿನಯ, ದಯೆ, ಕರುಣೆ ಮತ್ತು ಸರಳತೆ ಅವರ ವ್ಯಕ್ತಿತ್ವದ ಪ್ರಮುಖ ಲಕ್ಷಣಗಳಾಗಿದ್ದವು. ಬಡವರ ಮೇಲಿನ ಕಾಳಜಿ ಹಾಗೂ ದೇವರ ಮೇಲಿನ ಅಪಾರ ಭಕ್ತಿ ಅವರನ್ನು ಇತರರಿಂದ ವಿಭಿನ್ನರನ್ನಾಗಿಸಿತು. “ಶಿವ ಕರೆದ ಕಾಲಕ್ಕೆ ಮ್ಯಾಲಕ ಹೋಗಾಗ ನಾಲ್ಕು ಮಂದಿ ಕಳುಸಾಕ ಬರುವಂಗ ಇರಬೇಕು” ಎಂಬ ಅವರ ಮಾತು ಅವರ ಆಧ್ಯಾತ್ಮಿಕ ಜೀವನದ ಆಳವನ್ನು ಪ್ರತಿಬಿಂಬಿಸುತ್ತದೆ. ಮಲ್ಲಮ್ಮ ಬೆಳೆದ ನಂತರ ಅವರನ್ನು ಸಿದ್ದಾಪುರದ ಕುಮಾರಗಿರಿ ವೇಮರೆಡ್ಡಿಯ ಹಿರಿಯ ಮಗ ಭರಮರೆಡ್ಡಿಗೆ ವಿವಾಹ ಮಾಡಿಕೊಡಲಾಯಿತು. ಭರಮರೆಡ್ಡಿ ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥನಾಗಿದ್ದನು. ಊರ ಜನರೆಲ್ಲ ಅವನನ್ನು ಹುಚ್ಚನೆಂದು ಪರಿಗಣಿಸುತ್ತಿದ್ದರು. ಆದರೆ ಮಲ್ಲಮ್ಮ ತನ್ನ ಗಂಡನಲ್ಲಿದ್ದ ಮುಗ್ಧತೆ ಮತ್ತು ಸಾಧುಸ್ವಭಾವವನ್ನು ಕಂಡು ಸಮಾಧಾನಗೊಂಡಳು. ತನ್ನ ಪತಿಯನ್ನು ಸಾಕ್ಷಾತ್ ಮಹಾದೇವನೆಂದು ಭಾವಿಸಿ ಸೇವೆ ಮಾಡಿದಳು. ಗಂಡನ ಬುದ್ಧಿವೈಕಲ್ಯವನ್ನು ಕಂಡು ಧೃತಿಗೆಡದೆ, ಪತಿ, ಅತ್ತೆ-ಮಾವ ಹಾಗೂ ಶ್ರೀಶೈಲ ಮಲ್ಲಿಕಾರ್ಜುನನನ್ನೇ ಪರಮದೈವವೆಂದು ಗೌರವಿಸುತ್ತಾ ಜೀವನ ಆರಂಭಿಸಿದಳು. ಮಲ್ಲಮ್ಮಳ ಜೀವನ ಸುಖಮಯವಾಗಿರಲಿಲ್ಲ. ಅತ್ತೆ ಪದ್ಮಮ್ಮ ಹಾಗೂ ನಂತರ ಮನೆಗೆ ಬಂದ ಒರೆಗಿತ್ತಿಯರಾದ ನಾಗಮ್ಮ ಮತ್ತು ಬಸಮ್ಮ ಅವರಿಂದ ಅನೇಕ ಕಿರುಕುಳಗಳನ್ನು ಅನುಭವಿಸಬೇಕಾಯಿತು. ಅತ್ತೆ ಮಲ್ಲಮ್ಮಗೆ ಸರಿಯಾಗಿ ಊಟ, ಬಟ್ಟೆ ಕೊಡದೆ ಗಂಡನ ಸಮೇತ ಕಾಡಿನ ಅಂಚಿನಲ್ಲಿದ್ದ ಗುಡಿಸಲಿಗೆ ಕಳುಹಿಸಿದಳು. ಆದರೂ ಮಲ್ಲಮ್ಮ ಅದನ್ನೇ ದೇವರ ಇಚ್ಛೆಯೆಂದು ಸ್ವೀಕರಿಸಿ ಕಾಡಿನಲ್ಲಿ ದನಗಳನ್ನು ಕಾಯುತ್ತಾ ಶ್ರೀಶೈಲ ಮಲ್ಲಿಕಾರ್ಜುನನ ಉಪಾಸನೆಯಲ್ಲಿ ಮಗ್ನಳಾಗಿದ್ದಳು. ಜೀವನವಿಡೀ ಸಂಕಷ್ಟ ಅನುಭವಿಸಿದರೂ ಇತರರ ಕಷ್ಟವನ್ನು ಕಂಡಾಗ ತನ್ನ ನೋವನ್ನು ಮರೆತು ಅವರಿಗೆ ನೆರವಾಗುತ್ತಿದ್ದಳು. ಮಲ್ಲಮ್ಮಳ ದಾನಶೀಲತೆಯನ್ನು ಪರೀಕ್ಷಿಸಲು ಒಂದು ದಿನ ಅತ್ತೆ ಮನೆಯ ಮುಂದೆ ಬಂದ ಭಿಕ್ಷುಕನಿಗೆ ಉರಿಯುವ ಕೆಂಡವನ್ನೇ ಕೊಡುವಂತೆ ಹೇಳಿದಳು. ಒಲೆಯಲ್ಲಿದ್ದ ನಿಗಿನಿಗಿ ಕೆಂಡವನ್ನು ಮಲ್ಲಮ್ಮನ ಕೈಗೆ ಹಾಕಿ, “ಇದನ್ನೇ ಭಿಕ್ಷುಕನಿಗೆ ಕೊಡು” ಎಂದು ಆದೇಶಿಸಿದಳು. ಮಲ್ಲಮ್ಮ ಮನದಲ್ಲಿ ಮಲ್ಲಿಕಾರ್ಜುನನನ್ನು ನೆನೆದು ಆ ಕೆಂಡವನ್ನೇ ಭಿಕ್ಷುಕನ ಜೋಳಿಗೆಗೆ ಹಾಕಿದಳು. ಅದ್ಭುತವೆಂದರೆ ಆ ಕೆಂಡ ಕ್ಷಣಾರ್ಧದಲ್ಲಿ ಧಾನ್ಯವಾಗಿ ಮಾರ್ಪಟ್ಟಿತು. ಈ ಘಟನೆಯ ನಂತರ ಮಲ್ಲಮ್ಮ “ಬೆಂಕಿದಾನದ ಮಲ್ಲಮ್ಮ” ಎಂಬ ಹೆಸರಿನಿಂದ ಪ್ರಸಿದ್ಧಳಾದಳು. ಕನ್ನಡ ಮತ್ತು ತೆಲುಗು ಭಕ್ತಿ ಪರಂಪರೆಯಲ್ಲಿ ಮಹಾಯೋಗಿ ವೇಮನರ ಹೆಸರು ಅಪಾರ ಗೌರವದಿಂದ ಉಲ್ಲೇಖಿಸಲಾಗುತ್ತದೆ. ಸಮಾಜ ಸುಧಾರಕ, ತತ್ವಜ್ಞಾನಿ ಹಾಗೂ ವೈರಾಗ್ಯದ ಪ್ರತೀಕನಾದ ವೇಮನರ ಜೀವನ ಪರಿವರ್ತನೆಯ ಹಿಂದೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಒಬ್ಬ ದುಶ್ಚಟಗಳ ದಾಸನಾಗಿದ್ದ ವ್ಯಕ್ತಿಯನ್ನು ತತ್ವಜ್ಞಾನಿಯನ್ನಾಗಿ ರೂಪಿಸಿದ ಮಹಾನ್ ಸ್ತ್ರೀಶಕ್ತಿ ಮಲ್ಲಮ್ಮನವರದು. ದೇಹದ ಸೌಂದರ್ಯ, ಕಾಮ ಮತ್ತು ವಿಷಯಾಸಕ್ತಿಗಳ ನಿಜಸ್ವರೂಪ ಅವನಿಗೆ ಅರಿವಾಗುತ್ತದೆ. ಕ್ಷಣಾರ್ಧದಲ್ಲೇ ಅವನಿಗೆ ತತ್ವಜ್ಞಾನೋದಯವಾಗುತ್ತದೆ. “ಕಣ್ಮುಚ್ಚಿ” ಎಂದು ವೈರಾಗ್ಯದ ಮಾರ್ಗ ಹಿಡಿದು ಹೊರಟ ವೇಮನ ಮುಂದೆ ಮಹಾಯೋಗಿ, ತತ್ವಜ್ಞಾನಿ ಹಾಗೂ ಜನಪದ ಕವಿಯಾಗಿ ಪ್ರಸಿದ್ಧನಾಗುತ್ತಾನೆ. ಈ ಘಟನೆಯಲ್ಲಿ ಮಲ್ಲಮ್ಮನ ಜ್ಞಾನ, ದೂರದೃಷ್ಟಿ ಮತ್ತು ಆಧ್ಯಾತ್ಮಿಕ ಪ್ರೌಢಿಮೆ ಸ್ಪಷ್ಟವಾಗಿ ಕಾಣುತ್ತದೆ. ಅವಳು ಕೇವಲ ಅತ್ತಿಗೆಯ ಪಾತ್ರ ನಿರ್ವಹಿಸಲಿಲ್ಲ. ಒಬ್ಬ ಮಾರ್ಗದರ್ಶಕಿಯಾಗಿ, ಗುರುವಾಗಿಯೂ ವೇಮನನ ಬದುಕನ್ನು ಬದಲಿಸಿದಳು. ಶಿಕ್ಷೆ ಅಥವಾ ಕೋಪದಿಂದ ಅಲ್ಲ, ಜ್ಞಾನ ಮತ್ತು ಅರಿವಿನ ಮೂಲಕ ವ್ಯಕ್ತಿಯನ್ನು ಪರಿವರ್ತಿಸಬಹುದು ಎಂಬುದನ್ನು ಮಲ್ಲಮ್ಮ ತಮ್ಮ ನಡೆ ಮೂಲಕ ತೋರಿಸಿದರು. ಹೀಗಾಗಿ ವೇಮನರ ಪರಿವರ್ತನೆಯಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಅವರ ಪಾತ್ರ ಅತ್ಯಂತ ಮಹತ್ವದ್ದು. ಒಬ್ಬ ದುಶ್ಚಟಗಳ ದಾಸನನ್ನು ಮಹಾಯೋಗಿಯನ್ನಾಗಿ ರೂಪಿಸಿದ ಮಹಾತಾಯಿ ಎಂಬ ಹೆಗ್ಗಳಿಕೆಗೆ ಮಲ್ಲಮ್ಮ ಪಾತ್ರರಾಗಿದ್ದಾರೆ. ಅವರ ಜ್ಞಾನ, ಸಹನೆ ಮತ್ತು ಆಧ್ಯಾತ್ಮಿಕ ಶಕ್ತಿ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ. ಮುಂದೆ ಆತ ಮಹಾಯೋಗಿ ವೇಮನನಾಗಿ ಪ್ರಸಿದ್ಧನಾದನು. ಹೀಗೆ ಮಲ್ಲಮ್ಮ ಒಬ್ಬ ದುಶ್ಚಟದ ದಾಸನನ್ನು ಮಹಾಯೋಗಿಯನ್ನಾಗಿ ರೂಪಿಸಿದ ಮಹಾತಾಯಿಯಾದಳು. ಒರೆಗಿತ್ತಿಯರು ಮಲ್ಲಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ, “ಜಂಗಮರ ಜೊತೆ ಅಸಭ್ಯವಾಗಿ ವರ್ತಿಸುತ್ತಾಳೆ” ಎಂದು ಅತ್ತೆಯ ಕಿವಿ ತುಂಬಿದರು. ಕೋಪಗೊಂಡ ಭರಮರೆಡ್ಡಿ ಕತ್ತಿ ಹಿಡಿದು ಮಲ್ಲಮ್ಮನನ್ನು ಕೊಲ್ಲಲು ಗುಡಿಸಲಿಗೆ ಬಂದನು. ಆದರೆ ಅಲ್ಲಿ ಅವನು ಕಂಡ ದೃಶ್ಯ ಅವನ ಬದುಕನ್ನೇ ಬದಲಿಸಿತು. ಮಲ್ಲಮ್ಮ ಸಾಕ್ಷಾತ್ ಶ್ರೀಶೈಲ ಮಲ್ಲಿಕಾರ್ಜುನನೊಂದಿಗೆ ಸಂಭಾಷಿಸುತ್ತಿದ್ದಳು. ಈ ಶಿವದರ್ಶನದಿಂದ ಭರಮರೆಡ್ಡಿಯ ಬುದ್ಧಿವೈಕಲ್ಯ ದೂರವಾಗಿ, ಆತನೂ ಕೂಡ ಶಿವಭಕ್ತನಾದನು. ಒಮ್ಮೆ ಮನೆಗೆ ಬಂದ ಜಂಗಮನನ್ನು ಅತ್ತೆ ಮತ್ತು ಒರೆಗಿತ್ತಿಯರು ಅವಮಾನಿಸಿ ಹೊರಹಾಕಿದರು. ಕೋಪಗೊಂಡ ಜಂಗಮ ಅವರಿಗೆ ಉಗ್ರ ರೋಗದ ಶಾಪ ನೀಡಿ ಅಂತರಧಾನನಾದನು. ತಮ್ಮ ಮೇಲೆ ಅನ್ಯಾಯ ಮಾಡಿದವರ ದುಃಖವನ್ನೂ ಸಹಿಸದ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನನಲ್ಲಿ ಘೋರ ತಪಸ್ಸು ಮಾಡಿ ಶಾಪ ವಿಮೋಚನೆ ಮಾಡಿಸಿದಳು. ಕ್ಷಮೆ, ಕರುಣೆ ಮತ್ತು ಮಾನವೀಯತೆಯ ಪರಾಕಾಷ್ಠೆ ಇಲ್ಲಿ ಕಾಣಿಸುತ್ತದೆ. ಹೇಮರೆಡ್ಡಿ ಮಲ್ಲಮ್ಮ ಜಾತಿಗಳನ್ನು ಮೀರಿದ ಸಾಧ್ವಿ. ಹೆಣ್ಣುಕುಲದ ಧೀಶಕ್ತಿ, ಆದರ್ಶ ಸೊಸೆ, ಆದರ್ಶ ಮಡದಿ ಹೇಗಿರಬೇಕು ಎಂಬುದನ್ನು ಶತಮಾನಗಳ ಹಿಂದೆಯೇ ತಮ್ಮ ಬದುಕಿನ ಮೂಲಕ ನಿರೂಪಿಸಿದ ಮಾದರಿ ಮಹಿಳೆ. ಅವರ ಜೀವನದ ಮೇಲಿನ ಶ್ರದ್ಧೆ, ಸಾಮಾಜಿಕ ಕಳಕಳಿ ಮತ್ತು ಭಕ್ತಿಯನ್ನು ಕಂಡು ಸಾಕ್ಷಾತ್ ಶಿವನೇ ಮರಳಾಗಿದ್ದಾನೆ ಎಂಬ ನಂಬಿಕೆ ಜನರಲ್ಲಿ ಇದೆ. ಹೀಗಾಗಿ ಮಲ್ಲಮ್ಮನನ್ನು ಒಂದು ಜಾತಿಗೆ ಅಥವಾ ಧರ್ಮಕ್ಕೆ ಸೀಮಿತವಾಗಿ ನೋಡುವುದು ಮಹಾಪರಾಧವೆಂದು ಪರಿಗಣಿಸಲಾಗುತ್ತದೆ. ಅವರು ಎಲ್ಲ ಜಾತಿ-ಧರ್ಮಗಳ ಜನರಿಗೂ ಆದರ್ಶವಾಗಿದ್ದು, ವಿಶೇಷವಾಗಿ ಹೆಣ್ಣು ಸಂಕುಲಕ್ಕೆ ದಾರಿದೀಪವಾಗಿದ್ದಾರೆ. ಆ ಸಂದರ್ಭದಲ್ಲಿ ಮಲ್ಲಮ್ಮನು ತನ್ನಿಗಾಗಿ ಯಾವುದೇ ಐಶ್ವರ್ಯ, ಸುಖ ಅಥವಾ ವೈಭವವನ್ನು ಬೇಡದೆ, “ರೆಡ್ಡಿ ಕುಲದಲ್ಲಿ ಭಕ್ತಿ, ಧರ್ಮ, ದಾನ, ಸತ್ಕಾರ್ಯಗಳು ಸದಾ ನೆಲೆಸಿರಲಿ. ಈ ಕುಲದ ಜನರು ಸನ್ಮಾರ್ಗದಲ್ಲಿ ನಡೆದು ಸಮಾಜಕ್ಕೆ ಮಾದರಿಯಾಗಲಿ” ಎಂದು ವರ ಕೇಳಿದಳು ಎನ್ನಲಾಗುತ್ತದೆ. ಮತ್ತೊಂದು ಜನಪ್ರತೀತಿಯ ಪ್ರಕಾರ, “ನನ್ನ ಕುಲದಲ್ಲಿ ಹುಟ್ಟುವವರು ಶಿವಭಕ್ತರಾಗಿರಲಿ, ಯಾರೂ ಅನ್ನ-ನೀರಿಗಾಗಿ ನರಳಬಾರದು, ದಾನ-ಧರ್ಮಗಳಲ್ಲಿ ಮುಂಚೂಣಿಯಲ್ಲಿರಲಿ” ಎಂದು ಮಲ್ಲಮ್ಮ ಪ್ರಾರ್ಥಿಸಿದಳು ಎಂದು ಹೇಳಲಾಗುತ್ತದೆ. ಮಲ್ಲಿಕಾರ್ಜುನನು ಅವಳ ಭಕ್ತಿಗೆ ಮೆಚ್ಚಿ ಆ ವರವನ್ನು ಅನುಗ್ರಹಿಸಿದನೆಂದು ನಂಬಲಾಗಿದೆ. ಈ ಕಥೆಯ ಸಾರಾಂಶ ಏನೆಂದರೆ, ಮಲ್ಲಮ್ಮನ ಭಕ್ತಿ ಕೇವಲ ವೈಯಕ್ತಿಕ ಮೋಕ್ಷಕ್ಕಾಗಿ ಇರಲಿಲ್ಲ; ಅದು ಸಮುದಾಯದ ಒಳಿತು ಮತ್ತು ಮಾನವೀಯ ಮೌಲ್ಯಗಳ ಉಳಿವಿಗಾಗಿ ಇತ್ತು. ಉತ್ತರ ಕರ್ನಾಟಕದ ಜನಪದ ಸಾಹಿತ್ಯ, ತತ್ವಪದಗಳು, ಭಜನೆಗಳು ಮತ್ತು ಕಥೆಗಳಲ್ಲಿ ಮಲ್ಲಮ್ಮನವರ ಜೀವನಗಾಥೆ ಇಂದಿಗೂ ಜೀವಂತವಾಗಿದೆ. “ಹುಟ್ಟಿದರೆ ಮಲ್ಲಮ್ಮನಂತಹ ಮಗಳು ಹುಟ್ಟಬೇಕು, ಸಿಕ್ಕರೆ ಮಲ್ಲಮ್ಮನಂತಹ ಸೊಸೆ ಸಿಗಬೇಕು, ಮಲ್ಲಮ್ಮನಂತಹ ಮಹಾಸತಿ ಪತ್ನಿಯಾಗಿ ದೊರೆಯಬೇಕು” ಎಂಬ ಮಾತು ಇಂದಿಗೂ ಜನಬದುಕಿನಲ್ಲಿ ಕೇಳಿಬರುತ್ತದೆ. ಭಕ್ತಿ ಮತ್ತು ಪ್ರೀತಿಯಿಂದ ಮಲ್ಲಮ್ಮನನ್ನು ದೈವಸ್ವರೂಪಿಣಿಯಾಗಿ ಆರಾಧಿಸುತ್ತಾರೆ. ಅವರು ಕನ್ನಡ ನಾಡಿನ ಭಕ್ತಿ ಪರಂಪರೆಯ ಅಮರ ಜ್ಯೋತಿ. ಅವರ ಜೀವನವು ಕೇವಲ ಶಿವಭಕ್ತಿಯ ಪ್ರತೀಕವಲ್ಲ; ಅದು ತ್ಯಾಗ, ಸಹನೆ, ಸೇವೆ ಮತ್ತು ಮಾನವೀಯತೆಯ ಮಹಾನ್ ಸಂದೇಶವಾಗಿದೆ. ಅವರ ಜಯಂತಿಯ ಸಂದರ್ಭದಲ್ಲಿ ಅವರ ಆದರ್ಶಗಳನ್ನು ಸ್ಮರಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಲೇಖಕರು: ಪ್ರೊ. ವೀಣಾ ಆರ್. ತಿರ್ಲಾಪೂರ Post navigation ಅಭಿಮನ್ಯುವಿನ ಪುತ್ರ ಪರೀಕ್ಷಿತನಿಗೆ ಹಾವು ಕಚ್ಚಿ ಸಾಯಲಿ ಎಂದು ಶಾಪವಿತ್ತ ಶಮೀಕ ಮಹರ್ಷಿ ಪುತ್ರ ಬ್ರಹ್ಮನ ಆಜ್ಞೆಯಂತೆ ರಾಮಾಯಣ ಬರೆದ ಪ್ರಚೇತಸರ ವಂಶದ ವಾಲ್ಮೀಕಿ ಮಹರ್ಷಿ