ಶಕ್ತಿ ಮಹರ್ಷಿಗಳು ವಸಿಷ್ಠರ ಜೇಷ್ಠಪುತ್ರರು. ‘ಆತ್ಮಾ ವೈ ಪುತ್ರನಾಮಾಸಿ’ ಎಂಬ ನುಡಿಗೆ ಅನ್ವರ್ಥವಾಗಿದ್ದು ತಂದೆಯಂತೆಯೇ ಶಕ್ತಿಸಂಪನ್ನರು. ಅದನ್ನು ಅರಿತೇ ವಸಿಷ್ಠರು ಅವರಿಗೆ ಶಕ್ತಿಯೆಂದು ನಾಮಕರಣ ಮಾಡಿದ್ದಿರಬಹುದು. ಋಗ್ವೆದದ ಮಂತ್ರದ್ರಷ್ಟಾರ ಋಷಿಗಳಲ್ಲಿ ಇವರೂ ಒಬ್ಬರಾಗಿರುತ್ತಾರೆ. ಋಗ್ವೆದದ ಮೂರು ಮಂತ್ರಗಳು ಶಕ್ತಿ ಮಹರ್ಷಿಗಳ ಕೊಡುಗೆಯಾಗಿದೆ. ಅವುಗಳ ಅರ್ಥ “ಎಲೈ ಸೋಮದೇವನೇ! ಹರ್ಷವನ್ನುಂಟುಮಾಡಲು ಸಮರ್ಥನಾದ ನೀನು ಯಜ್ಞದಲ್ಲಿರುವ ಉನ್ನತಸ್ಥಾನದಲ್ಲಿ ಧಾರೆಯೊಡಗೂಡಿ ಪ್ರವಹಿಸು. ಯಾರ ಹಿಂಸೆಗೂ ಒಳಪಡದೆ ಅನೇಕ ಧಾರೆ ಮತ್ತು ಸುಗಂಧಯುಕ್ತನಾಗಿ ಅನ್ನಲಾಭಕ್ಕೆ ಪ್ರವಹಿಸು. “ಕಡಿವಾಣವಿಲ್ಲದೆಯೂ ರಥಕ್ಕೆ ಕಟ್ಟಲ್ಪಡದೆಯೂ ಇರುವ ಅಶ್ವಗಳನ್ನು ಯುದ್ಧರಂಗದಲ್ಲಿ ಬಿಟ್ಟರೆ ಹೇಗೆ ಸ್ವತಂತ್ರವಾಗಿ ಓಡುವುವೋ ಹಾಗೆ ಸೋಮರಸ ಕಲಶಾಭಿಮುಖವಾಗಿ ಓಡುತ್ತದೆ. ಎಲೈ ದೇವತೆಗಳೇ! ಈ ಸೋಮರಸವನ್ನು ಪಾನ ಮಾಡಲು ಸಮೀಪಿಸಿರಿ. “ಎಲೈ ಸೋಮದೇವನೇ! ನಮ್ಮ ಯಜ್ಞವನ್ನು ಮಾತ್ರ ಲಕ್ಷಿಸಿ ದ್ಯುಲೋಕವಾದ ಉದಕವನ್ನು ಚಮೂಪಾತ್ರೆಗಳಲ್ಲಿ ಸುರಿಸು. ಸೋಮನು ಆಕರ್ಷಕವಾದ ಪ್ರವೃದ್ಧ, ಪುತ್ರಯುಕ್ತ ಮತ್ತು ಅತ್ಯಧಿಕಶಕ್ತಿಯುಳ್ಳ ಧನವನ್ನು ಕೊಡಲಿ.”ಇದೇ ಮಂಡಲದ ಐದನೆಯ ಅಧ್ಯಾಯದ 107ನೇಯ ಸೂಕ್ತದ 14 ರಿಂದ 16ನೇಯ ಮಂತ್ರಗಳೂ ಶಕ್ತಿ ಮಹರ್ಷಿಗಳ ಹೆಸರಿನಲ್ಲಿವೆ. ಅವುಗಳ ಅರ್ಥ ಹೀಗಿದೆ: “ಯಾವ ನಮ್ಮ ಸೋಮವನ್ನು ಇಂದ್ರನು ಪಾನಮಾಡುವನೋ, ಮರುತ್ತುಗಳು ಯಾವ ಸೋಮವನ್ನು ಪಾನಮಾಡುವರೋ ಮತ್ತು ಅರ್ಯಮನೊಂದಿಗೆ ಭಗನು ಯಾವುದನ್ನು ಪಾನಮಾಡುವನೋ, ಯಾವ ಸೋಮದ ಸಹಾಯದಿಂದ ಮಿತ್ರಾವರುಣರನ್ನು ಬರಮಾಡಿಕೊಳ್ಳುವನೋ, ಮಹತ್ತ್ವದ ರಕ್ಷಣಾರ್ಥವಾಗಿ ಇಂದ್ರನನ್ನು ಯಾವ ಸೋಮದಿಂದ ತೃಪ್ತಿಪಡಿಸುವೆವೋ ಆ ಸೋಮವು ಹಿಂಡಲ್ಪಡುತ್ತದೆ. ಎಲೈ ಸೋಮನೇ! ಋತ್ವಿಕ್ಕುಗಳಿಂದ ನಿಯಮಿತನೂ, ಉತ್ತಮವಾದ ಆಯುಧವುಳ್ಳವನೂ, ಹರ್ಷಯುತನೂ ಮಾಧುರ್ಯವುಳ್ಳವನೂ ಆದ ನೀನು ಇಂದ್ರನ ಪಾನಾರ್ಥವಾಗಿ ಸ್ರವಿಸು. “ಎಲೈ ಸೋಮದೇವನೇ! ಮಿತ್ರನಿಗೂ. ವರುಣನಿಗೂ, ವಾಯುವಿಗೂ ತೃಪ್ತಿಕಾರಕನೂ ದ್ಯುಲೋಕಕ್ಕೆ ಸ್ಥಾಪಕನೂ ಅತ್ಯುತ್ತಮನೂ ಆದ ನೀನು ಇಂದ್ರನ ಮನಕ್ಕೆ ತೃಪ್ತಿ ಕೊಡುವ ಕಲಶವನ್ನು, ನದಿಗಳು ಸಮುದ್ರವನ್ನು ಪ್ರವೇಶಿಸುವಂತೆ ಪ್ರವೇಶಿಸು.” ಹೀಗೆ ಶಕ್ತಿ ಮಹರ್ಷಿಗಳು ಮಂತ್ರದರ್ಶಕರಾಗಿ ಪ್ರಸಿದ್ಧರಾದ ಋಷಿಗಳಾಗಿದ್ದರು. ಕೌಂಡಿನ್ಯ ಗೋತ್ರಪ್ರವರದಲ್ಲಿ ‘ವಾಸಿಷ್ಠ ಮೈತ್ರಾವರುಣ ಕೌಂಡಿನ್ನರೆಂಬ ತಯಾರ್ಷೇಯವು, ಅವರು ಗೋತಪ್ರವರ್ತಕರೂ ಆಗಿದ್ದಿರಬಹುದೆಂದು ಸೂಚಿಸುತ್ತದೆ. ಗುರುಪರಂಪರೆಯ ಉಳಿದ ಮಹರ್ಷಿಗಳಂತೆ ಇವರು ಅತ್ಯಂತ ಪ್ರಸಿದ್ದಿಯನ್ನು ಪಡೆಯದಿರಲು ಅವರ ಅಕಾಲಿಕ ಮರಣವೇ ಕಾರಣ, ಪ್ರತಿಭಾನಿತ್ವರಾದ ಶಕ್ತಿ ಮಹರ್ಷಿ ನಮ್ಮ ಪರಂಪರೆಯ ಉಳಿದ ಋಷಿಗಳಂತೆ ಬಹುಕಾಲ ಬದುಕಿದ್ದಿದ್ದರೆ ಮಾನವಸಮಾಜಕ್ಕೆ ಅಪೂರ್ವ ಕೊಡುಗೆಗಳನ್ನು ನೀಡುತ್ತಿದ್ದರೆಂಬುದರಲ್ಲಿ ಸಂಶಯವಿಲ್ಲ. ಮಹಾಭಾರತದ ಕಥೆ ಇಕ್ಷಾಕುವಂಶದಲ್ಲಿ ಅತಿಪರಾಕ್ರಮಿಯಾದ ಕಲ್ಮಾಷಪಾದನೆಂಬ ರಾಜನಿದ್ದನು. ಅವನು ಒಂದು ಸಲ ಕಾಡಿನಲ್ಲಿ ಬೇಟೆಯಾಡಿ ದಣಿದು. ಹಸಿವು ಬಾಯಾರಿಕೆಗಳಿಂದ ಆರ್ತನಾಗಿ ವಿಶ್ರಾಂತಿಗೆ ಸರಿಯಾದ ಸ್ಥಳವನ್ನು ಹುಡುಕುತ್ತಾ ಹೋಗುತ್ತಿದ್ದನು. ಆಗ ಅವನು ತನಗೆ ಎದುರಾಗಿ ಬರುತ್ತಿದ್ದ ವಸಿಷ್ಠಪುತ್ರರಾದ ಶಕ್ತಿಮಹರ್ಷಿಗಳನ್ನು ಕಂಡನು. ರಾಜನು ಮಹರ್ಷಿಗಳನ್ನು, “ಹಾದಿಯನ್ನು ಬಿಟ್ಟು ಸರಿದು ನಿಲ್ಲು” ಎಂದು ಹೇಳಿದನು. ಅದಕ್ಕೆ ಮಹರ್ಷಿಗಳು,“ಮಹಾರಾಜ, ನೀನು ನನಗೆ ಮೊದಲು ಹಾದಿಯನ್ನು ಬಿಟ್ಟುಕೊಡಬೇಕು. ಇದು ಸನಾತನಧರ್ಮ” ಎಂದು ಹೇಳಿದರು. ಬಹಳ ಹೊತ್ತಿನವರೆಗೂ ಇಬ್ಬರೂ ಹಾದಿಯಿಂದ ಸರಿಯಲಿಲ್ಲ. ರಾಜನು ಕೊನೆಗೆ ಕೋಪದಿಂದ ವಿವೇಚನಾಶೂನ್ಯನಾಗಿ ಕೈಯಲ್ಲಿದ್ದ ಬೆತ್ತದಿಂದ ಶಕ್ತಿಯನ್ನು ಪ್ರಹರಿಸಿದನು. ತಪೋಧನರಾದ ಋಷಿಗಳು ಶಪಿಸಿಬಿಟ್ಟರು. “ರಾಕ್ಷಸನಂತೆ ನೀನು ತಪಸ್ವಿಯನ್ನು ಕಾರಣವಿಲ್ಲದೇ ಹಿಂಸೆಮಾಡಿದುದರಿಂದ ಇಂದಿನಿಂದಲೇ ನಿನಗೆ ನರಮಾಂಸವನ್ನು ಭಕ್ಷಿಸುವ ರಾಕ್ಷಸತ್ವವುಂಟಾಗಲಿ” ಎಂದು. ಶಕ್ತಿಯ ಶಾಪದ ಪ್ರಭಾವದಿಂದ ಮತ್ತು ವಿಶ್ವಾಮಿತ್ರರ ಆಜ್ಞೆಯಿಂದ ರಾಕ್ಷಸನೊಬ್ಬನು ಕಲ್ಮಾಷಪಾದನೊಳಗೆ ಸೇರಿಕೊಂಡನು. ಇದರಿಂದಾಗಿ ರಾಜನ ವಿವೇಚನಾಶಕ್ತಿ ಪೂರ್ಣವಾಗಿ ನಾಶವಾಯಿತು. ಇದರ ಜೊತೆಗೆ ಒಬ್ಬ ಬ್ರಾಹ್ಮಣನೂ ರಾಜನನ್ನು ಶಪಿಸಿದ್ದನೆಂದು ಹೇಳುತ್ತಾರೆ. ಇದೆಲ್ಲದರಿಂದ ರಾಜನು ಎದುರಿಗೆ ಇರುವವನು ಮಹಾತಪಸ್ವಿಯೆಂಬುದನ್ನೂ ತನ್ನ ಕುಲಗುರುಗಳ ಪುತ್ರನೆಂಬುದನ್ನೂ ಮರೆತುಬಿಟ್ಟನು. “ನೀನಲ್ಲವೇ ನನ್ನನ್ನು ನರಭಕ್ಷಕನಾಗೆಂದು ಶಪಿಸಿದವನು? ನಿನ್ನನ್ನೇ ಮೊದಲು ತಿಂದು ನನ್ನ ನರಭಕ್ಷಕ ಜೀವನವನ್ನು ಆರಂಭಿಸುತ್ತೇನೆ” ಎನ್ನುತ್ತ ಶಕ್ತಿಗೆ ತಪ್ಪಿಸಿಕೊಳ್ಳಲು ಆವಕಾಶವನ್ನೇ ಕೊಡದೆ, ಅವರ ಮೇಲೆ ಬಿದ್ದು ಸಂಹರಿಸಿಬಿಟ್ಟನು. ಹಾಗೆಯೇ ಆಶ್ರಮಕ್ಕೆ ನುಗ್ಗಿ ಶಕ್ತಿಯ ಅನುಜರನ್ನೂ ಕೊಂದುಹಾಕಿದನು. ಹೀಗೆ ಮಹರ್ಷಿಗಳು ತಾವು ನೀಡಿದ ಶಾಪದ ಕಾರಣದಿಂದಲೇ ತಮ್ಮ ನಾಶಕ್ಕೆ ಕಾರಣರಾದರು. ಕೋಪವೆಂಬುದು ಆನರ್ಥಸಾಧನವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಶಕ್ತಿಮಹರ್ಷಿಗಳು ಹೆಸರಿಗೆ ತಕ್ಕಂತೆ ಶಕ್ತಿಸಂಪನ್ನರಾಗಿದ್ದರೂ ಅವರ ಶಕ್ತಿ-ಸಾಮರ್ಥ್ಯಗಳು ಲೋಕೋಪಕಾರಕ್ಕೆ ಪೂರ್ಣವಾಗಿ ಪ್ರಯೋಜನವಾಗಲಿಲ್ಲ. ಆದರೆ ಅವರು ಉಳಿಸಿದ್ದ ಕೆಲಸವನ್ನು ಅವರ ಪುತ್ರರಾದ ಪರಾಶರರು ಮುಂದುವರಿಸಿ ಗುರುಪರಂಪರೆಯನ್ನು ಉಳಿಸಿ, ಲೋಕಕಲ್ಯಾಣವನ್ನು ಸಾಧಿಸಿದರು. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-1 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಪ್ರಭು ಶ್ರೀರಾಮಚಂದ್ರನ ಕುಲಗುರು, ಸಪ್ತರ್ಷಿಗಳಲ್ಲಿ ಪ್ರಮುಖರು ವಸಿಷ್ಠ ಮಹರ್ಷಿ ವೇದವ್ಯಾಸರ ತಂದೆ ಪರಾಶರ ಮಹರ್ಷಿ