Sharabhanga Maharshi went to Brahmaloka after having darshan of Sri RamaAI ಚಿತ್ರ

ಶ್ರೀರಾಮನು ಚಿತ್ರಕೂಟದಿಂದ ಪಂಚವಟಿಗೆ ಹೋಗುವ ದಾರಿಯಲ್ಲಿ ತಪಸ್ಸಿನಿಂದ ಪರಿಶುದ್ದಚಿತ್ತರೂ ದೇವತಾಸದೃಶರೂ ಆದ ಶರಭಂಗರೆಂಬ ಮುನಿಗಳನ್ನು ಸಂದರ್ಶಿಸಿದನು. ರಾಮನು ಅಲ್ಲಿಗೆ ಹೋದಾಗ ಸೂರ್ಯನೋಪಾದಿಯಲ್ಲಿ ತೇಜೋಮಯವಾದ ರಥವು ಅವರ ಆಶ್ರಮದ ಬಳಿಯಲ್ಲಿದ್ದಿತು. ದೇವಾನು ದೇವತೆಗಳೊಂದಿಗೆ ಸಾಕ್ಷಾತ್ ದೇವೇಂದ್ರನೇ ರಥದ ಬಳಿಯಲ್ಲಿ ನಿಂತಿದ್ದನು.

ರಥಕ್ಕೆ ಹಸಿರುಬಣ್ಣದ ಕುದುರೆಗಳನ್ನು ಕಟ್ಟಿದ್ದರು. ಎಲ್ಲ ವಿಧದ ದಿವ್ಯಾಲಂಕಾರಗಳಿಂದ ಶೋಭಿತವಾಗಿದ್ದ ಆ ರಥದ ಬಳಿಯಲ್ಲಿ ದೇವೇಂದ್ರನು ಶರಭಂಗ ಮಹರ್ಷಿಗಳೊಡನೆ ಮಾತನಾಡುತ್ತಿದ್ದನು. ರಾಮನು ಲಕ್ಷ್ಮಣನಿಗೆ ಆ ರಥವನ್ನು ತೋರಿಸಿ ಅದರ ವೈಶಿಷ್ಟ್ಯಗಳನ್ನು ವರ್ಣಿಸಿದನು. ಲಕ್ಷ್ಮಣ ಮತ್ತು ಸೀತೆಯರನ್ನು ಅಲ್ಲಿಯೇ ಇರುವಂತೆ ತಿಳಿಸಿ, ರಾಮನೊಬ್ಬನೇ ಆಶ್ರಮದ ಕಡೆಗೆ ಹೊರಟನು.

ಶ್ರೀರಾಮನು ಬರುತ್ತಿರುವುದನ್ನು ಕಂಡು ಶರಭಂಗ ಮಹರ್ಷಿಗಳನ್ನು ಕುರಿತು ದೇವೇಂದ್ರನು, ‘ಶ್ರೀರಾಮನು ಇತ್ತ ಬರುತ್ತಿದ್ದಾನೆ! ಅವನು ತನ್ನ ಕೆಲಸವನ್ನು ಪೂರೈಸಿದ ಮೇಲೆ ನನ್ನನ್ನು ನೋಡುವುದು ಲೇಸು. ಅವನು ಜಯಶಾಲಿಯಾದ ಮೇಲೆ ನಾನೇ ಬಂದು ಅವನನ್ನು ನೋಡುವೆನು’ ಎಂದು ಹೇಳಿ ಶರಭಂಗರ ಅನುಮತಿಯನ್ನು ಪಡೆದು ದಿವ್ಯರಥದೊಡನೆ ಮಾಯವಾಗಿಬಿಟ್ಟನು. ಶರಭಂಗರೊಬ್ಬರೇ ಅಲ್ಲಿ ಉಳಿದರು.

ಶ್ರೀರಾಮನು ಹಿಂದಕ್ಕೆ ಬಂದು ಸೀತಾಲಕ್ಷ್ಮಣಸಮೇತನಾಗಿ ಮತ್ತೆ ಆ ಮಹರ್ಷಿಗಳ ಆಶ್ರಮಕ್ಕೆ ಹೋದನು. ಅವರೆಲ್ಲರೂ ಮುನಿಗಳಿಗೆ ಪ್ರಣಾಮ ಮಾಡಿದರು. ಮಹರ್ಷಿಗಳು ಅವರೆಲ್ಲರ ಕುಶಲಪ್ರಶ್ನೆ ಮಾಡಿ, ಅತಿಥಿಸತ್ಕಾರಗಳನ್ನು ನೆರವೇರಿಸಿದರು. ಎಲ್ಲರೂ ಸುಖವಾಗಿ ಕುಳಿತಿರಲು ಶ್ರೀರಾಮನು ಮಹರ್ಷಿಗಳನ್ನು ದೇವೇಂದ್ರನ ಆಗಮನದ ವಿಚಾರವಾಗಿ ಪ್ರಶ್ನೆಮಾಡಿದನು.

ಶರಭಂಗರು, “ಶ್ರೀರಾಮ! ವರಪ್ರದನಾದ ದೇವೇಂದ್ರನು ನನ್ನನ್ನು ಬ್ರಹ್ಮಲೋಕಕ್ಕೆ ಕರೆದೊಯ್ಯಲು ಬಂದಿದ್ದನು. ಉಗ್ರವಾದ ತಪಸ್ಸಿನಿಂದ ನನಗೆ ಆ ಲೋಕಗಳು ಸಾಧಿತವಾಗಿವೆ. ಇಂದ್ರಿಯಗಳ ಜಯವೇ ಇಂತಹ ಸಾಧನೆಗೆ ಪ್ರಮುಖವಾದುದು. ನಾನು ಇಂದ್ರನೊಡನೆ ಮಾತನಾಡುತ್ತಿರುವಾಗ ನಿನ್ನ ಆಗಮನವಾಯಿತು. ನಿನ್ನಂಥ ಪರಮಪ್ರಿಯನಾದ ಅತಿಥಿಯು ಬರುತ್ತಿರುವಾಗ ನಿನ್ನನ್ನು ನೋಡದೆ, ಸತ್ಕರಿಸದೆ ಬ್ರಹ್ಮಲೋಕಕ್ಕೆ ಹೋಗಲು ನಾನು ಇಷ್ಟಪಡಲಿಲ್ಲ.

ಧರ್ಮಾತ್ಮನಾದ ನಿನ್ನ ದರ್ಶನವನ್ನು ಮಾಡಿ. ಅನಂತರ ಅವರೊಡನೆ ಹೋಗಲು ನಿಶ್ಚಯ ಮಾಡಿದೆನು. ಈಗ ನಾನು ಜಯಿಸಿರುವ ಈ ಲೋಕಗಳನ್ನಲ್ಲ ನಿನಗೆ ಸಮರ್ಪಿಸಿಬಿಡುತ್ತೇನೆ” ಎಂದರು. ಆಗ ಶ್ರೀರಾಮನು ತನಗೆ ಅಂತಹ ಲೋಕಗಳ ಆವಶ್ಯಕತೆಯಿಲ್ಲವೆಂದೂ ಸದ್ಯದಲ್ಲಿ ಅರಣ್ಯದಲ್ಲಿ ವಾಸಮಾಡಲು ಅನುಕೂಲವಾದ ಪ್ರದೇಶವೊಂದನ್ನು ತೋರಿಸಿಕೊಡಬೇಕೆಂದೂ ಮಹರ್ಷಿಗಳನ್ನು ಕೇಳಿದನು.

ಆಗ ಮಹರ್ಷಿಗಳು ಅವನಿಗೆ ಸುತೀಕ್ಷ್ಯಮಹರ್ಷಿಗಳ ಆಶ್ರಮದ ದಾರಿಯನ್ನು ತೋರಿಸಿ, “ಅವರು ನಿನಗೆ ಉತ್ತಮವಾದ ವಾಸಸ್ಥಾನವನ್ನು ಕಲ್ಪಿಸಿಕೊಡುವರು” ಎಂದು ಹೇಳಿ, ಸ್ವಲ್ಪಕಾಲದವರೆಗೆ ಅಲ್ಲಿಯೇ ಇರುವಂತೆಯೂ ಹಾವು ತನ್ನ ಪೊರೆಯನ್ನು ಕಳಚುವಂತೆ, ಈ ದೇಹದಿಂದ ತಾವು ಮುಕ್ತರಾಗುವುದಾಗಿಯೂ ರಾಮನನ್ನು ಪ್ರಾರ್ಥಿಸಿಕೊಂಡರು. ಅನಂತರ ಶರಭಂಗರು ಮಂತ್ರಪೂರ್ವಕವಾಗಿ ಅಗ್ನಿಗೆ ಆಹುತಿ ಗಳನ್ನಿತ್ತು ಅದನ್ನು ಪ್ರಜ್ವಲಿಸುವಂತೆ ಮಾಡಿದರು. ತೇಜಸ್ವಿಗಳಾದ ಮುನಿಗಳು ಶಾಂತರಾಗಿ ಅದರಲ್ಲಿ ಪ್ರವೇಶಿಸಿದರು. ಕೂಡಲೇ ಅವರ ರೋಮಗಳು, ಸುಕ್ಕುಗಟ್ಟಿದ ಚರ್ಮಗಳೆಲ್ಲ ಬೆಂಕಿಯಲ್ಲಿ ಭಸ್ಮವಾಗಿ ಹೋದವು. ಸೀತಾಲಕ್ಷ್ಮಣರು ವಿಸ್ಮಯದಿಂದ ಆ ದೃಶ್ಯವನ್ನು ನೋಡುತ್ತಿದ್ದರು. ಆಗ ಅಗ್ನಿಜ್ವಾಲೆಯ ಮಧ್ಯದಿಂದ ಇನ್ನೊಬ್ಬ ಅಗ್ನಿಯೋ ಎಂಬಂತೆ ಬೆಳಗುತ್ತ ತರುಣನೊಬ್ಬನು ಪುಟಿದು ಮೇಲಕ್ಕೆ ಎದ್ದನು. ಹೀಗೆ ದಿವ್ಯದೇಹವನ್ನು ಪಡೆದ ಶರಭಂಗರು, ಇವರೆಲ್ಲರೂ ನೋಡುತ್ತಿರುವಂತೆಯೇ, ದೇವತೆಗಳ ಲೋಕಗಳನ್ನೆಲ್ಲ ದಾಟಿ ಬ್ರಹ್ಮಲೋಕಕ್ಕೆ ಹೊರಟುಹೋದರು.

ಹೀಗೆ ಶರಭಂಗರು ಇಚ್ಛಾಮರಣಿಗಳಾಗಿ, ಶ್ರೀರಾಮನಿಗೆ ಕಾಡಿನಲ್ಲಿ ಮುಂದಿನ ದಾರಿಯನ್ನು ತೋರಿಸಿ, ತಮ್ಮ ಮುಕ್ತಿಮಾರ್ಗವನ್ನು ಅನುಸರಿಸಿ ಹೊರಟುಹೋದರು.

ಅವರು ರಾಮದರ್ಶನೋದ್ದೇಶದಿಂದ ತನ್ನನ್ನು ಕರೆದೊಯ್ಯಲು ಬಂದಿದ್ದ ಸಾಕ್ಷಾತ್ ಇಂದ್ರನನ್ನೂ ಹಿಂದಕ್ಕೆ ಕಳಿಸಿದರು. ಅವರಿಗೆ ದೇವಲೋಕಗಳಿಗೆ ಹೋಗಲು ಯಾವುದೇ ದಿವ್ಯರಥದ ಆವಶ್ಯಕತೆಯಿರಲಿಲ್ಲ. ಬೇಕೆಂದಾಗ ತಮ್ಮ ಜೀರ್ಣ ಶರೀರವನ್ನು ತ್ಯಜಿಸಿ, ತಮಗಿಷ್ಟವಾದ ಲೋಕಗಳಿಗೆ ಹೋಗಬಲ್ಲ ಶಕ್ತಿಗಳನ್ನು ಅವರು ತಮ್ಮ ತಪಸ್ಸಿನಿಂದ ಸಾಧಿಸಿಕೊಂಡಿದ್ದರು. ರಾಮಕಾರ್ಯದಲ್ಲಿ ನೆರವಾಗಲು ಅವರು ರಾಮನ ಆಗಮನವನ್ನು ಕಾಯುತ್ತಿದ್ದರು. ಅವನಿಗೆ ಮುಂದಿನ ಮಾರ್ಗವನ್ನು ತೋರಿಸಿ ತಮ್ಮ ಕರ್ತವ್ಯವನ್ನು ಪೂರೈಸಿದರು.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *