Indian sage Samvarta Maharshi story in Kannadaಸಂವರ್ತ ಮಹರ್ಷಿ

ಅಂಗಿರಸ ಮಹಾಮುನಿಗಳಿಗೆ ಸಮಾನವ್ರತನಿಷ್ಠರಾದ ಮೂವರು ಮಕ್ಕಳಿದ್ದರು. ಉತಥ್ಯ, ಬೃಹಸ್ಪತಿ ಮತ್ತು ಸಂವರ್ತ, ಬೃಹಸ್ಪತಿಯು ಇಂದನಿಗೆ ಪುರೋಹಿತನಾದನು. ಅದಕ್ಕೂ ಮುಂಚಿನಿಂದಲೇ ಬೃಹಸ್ಪತಿಯು ತನ್ನ ತಮ್ಮನಾದ ಸಂವರ್ತನನ್ನು ಪೀಡಿಸುತ್ತಲೇ ಇದ್ದನು. ಸಂವರ್ತನು ಕೊನೆಗೊಮ್ಮೆ ಬೇಸತ್ತು ಐಶ್ವರ್ಯವನ್ನೆಲ್ಲ ತ್ಯಜಿಸಿ ಅರಣ್ಯಕ್ಕೆ ಹೊರಟುಹೋದನು.

ಈ ಸಮಯದಲ್ಲಿ ಭೂಲೋಕದಲ್ಲಿ ಮರುತ್ತನೆಂಬ ರಾಜನಿದ್ದನು. ಅವನು ಬಹಳ ಗುಣವಂತನೂ ಪ್ರಜಾನುರಾಗಿಯೂ ಆಗಿದ್ದನು. ಇಂದ್ರನು ಮರುತ್ತನೊಡನೆ ಯಾವಾಗಲೂ ಸ್ಪರ್ಧೆಗೆ ಇಳಿಯುತ್ತಿದ್ದನು. ಇಂದ್ರನು ಏನೆಲ್ಲ ಪ್ರಯತ್ನಮಾಡಿಯೂ ಜನರ ಅಭಿಪ್ರಾಯವನ್ನು ಬದಲಿಸಲು ಶಕ್ಯನಾಗಲಿಲ್ಲ.

ಜನಾನುರಾಗ ಮತ್ತು ಸದ್ಗುಣಗಳಿಂದ ಮರುತ್ತನೇ ಶ್ರೇಷ್ಠನೆಂದು ಎಲ್ಲರೂ ಹೇಳುತ್ತಿದ್ದರು. ಇದರಿಂದ ಇಂದ್ರನಿಗೆ ಮರುತ್ತನ ಮೇಲೆ ಅಸೂಯೆಯು ಅಂಕುರಿಸಿತು. ಮರುತ್ತನ ವಂಶದವರಿಗೂ ಬೃಹಸ್ಪತಿಯೇ ಕುಲಪುರೋಹಿತನಾಗಿದ್ದನು. ಮರುತ್ತನೇನಾದರೂ ತನಗಿಂತ ಉತ್ತಮ ಯಜ್ಞಗಳನ್ನು ಮಾಡಿದರೆ, ಅವನ ಕೀರ್ತಿಯು ಇನ್ನೂ ಹೆಚ್ಚುವುದೆಂದು ಇಂದ್ರನಿಗೆ ಭಯವಾಯಿತು.

ಆದುದರಿಂದ ಇಂದ್ರನು ಬೃಹಸ್ಪತಿಯನ್ನು ಕರೆದು, ‘ಯಾವುದೇ ಕಾರಣದಿಂದಲೂ ಮರುತ್ತನಿಂದ ದೈವಕರ್ಮಗಳನ್ನಾಗಲಿ ಪಿತೃಕರ್ಮಗಳನ್ನಾಗಲಿ ಮಾಡಿಸಬಾರದೆಂದು’ ಹೇಳಿದನು. ‘ದೇವತೆಗಳಿಗೆ ಯಜ್ಞ ಮಾಡಿಸುವ ಪುರೋಹಿತನು ಮನುಷ್ಯನಾದ ಮರುತ್ತನಿಗೆ ಯಜ್ಞಯಾಗಾದಿಗಳನ್ನು ಮಾಡಿಸುವುದು ಅವನ ಘನತೆಗೂ ದೇವೇಂದ್ರನ ಗೌರವಕ್ಕೂ ಕೀಳೆಂದು’ ಹೇಳುತ್ತ, ತಮ್ಮಿಬ್ಬರಲ್ಲಿ ಯಾರಾದರೂ ಒಬ್ಬರನ್ನು ಮಾತ್ರ ಪರಿಗ್ರಹಿಸುವಂತೆ ಬೃಹಸ್ಪತಿಗೆ ಹೇಳಿದನು.

ಆಗ ಬೃಹಸ್ಪತಿಯು ಮರುತ್ತನ ಯಜ್ಞಗಳ ಪೌರೋಹಿತ್ಯವನ್ನು ವಹಿಸುವುದಿಲ್ಲವೆಂದು ಇಂದ್ರನಿಗೆ ಮಾತುಕೊಟ್ಟನು. ಇದರಿಂದ ಇಂದ್ರನಿಗೆ ಬಹಳ ಸಂತೋಷವಾಯಿತು. ಕುಲಗುರುವಿಲ್ಲದೆ ಮರುತ್ತನು ಯಾವ ವೈದಿಕಕಾರ್ಯವನ್ನೂ ಮಾಡಲಾರನೆಂಬುದು ಅವನ ನಂಬುಗೆಯಾಗಿತ್ತು.

ಇದೇ ಸಂದರ್ಭದಲ್ಲಿ ಮರುತ್ತನು ಮಹಾಯಜ್ಞವೊಂದನ್ನು ಮೊದಲು ಮನದಲ್ಲಿ ಸಂಕಲ್ಪಿಸಿ ಬೃಹಸ್ಪತಿಯ ಬಳಿಗೆ ಬಂದು ಸಂಕಲ್ಪಿತ ಯಜ್ಞವನ್ನು ನಡೆಸಿಕೊಡುವಂತೆ ಕೇಳಿಕೊಂಡನು. ಬೃಹಸ್ಪತಿಯು ‘ಮನುಷ್ಯರಿಗೆ ಯಜ್ಞವನ್ನು ಮಾಡಿಸುವುದಿಲ್ಲವೆಂದು ದೇವರಾಜನಿಗೆ ತಾನು ಮಾತುಕೊಟ್ಟಿರುವುದಾಗಿಯೂ ರಾಜನು ಬೇರೆ ಯಾರನ್ನಾದರೂ ಯಾಜಕರನ್ನಾಗಿ ಪರಿಗ್ರಹಿಸಬೇಕೆಂದೂ’ ಹೇಳಿಬಿಟ್ಟನು.

ಈ ಮಾತುಗಳನ್ನು ಕೇಳಿ ಖಿನ್ನನಾಗಿ ಮರುತ್ತನು ಹಿಂದಿರುಗಿ ಬರುತ್ತಿರುವಾಗ, ದಾರಿಯಲ್ಲಿ ನಾರದರು ಎದುರಾದರು. ದುಃಖಿತನಾಗಿದ್ದ ರಾಜನನ್ನು ಕಂಡು ನಾರದರು ಅವನ ದುಃಖಕ್ಕೆ ಕಾರಣವನ್ನು ಕೇಳಿದರು. ರಾಜನು ಬೃಹಸ್ಪತಿಯ ಮಾತುಗಳನ್ನು ನಾರದರಿಗೆ ಹೇಳಿ. ಈಗ ತಾನೇನು ಮಾಡಬೇಕೆಂದು ತೋರದೆ ಚಿಂತಿತನಾಗಿರುವ ವಿಷಯವನ್ನು ಅರುಹಿದನು. ನಾರದರು ‘ಅಂಗಿರಸರ ಮತ್ತೊಬ್ಬ ಮಗನಾದ, ಪರಮಧಾರ್ಮಿಕನಾದ ಸಂವರ್ತನೆಂಬ ಮಹರ್ಷಿಯಿದ್ದಾನೆ. ನೀನು ಅವನನ್ನು ಪ್ರಸನ್ನಗೊಳಿಸಿದರೆ, ಅವನು ನಿನಗೆ ಬೃಹಸ್ಪತಿಗಿಂತಲೂ ಉತ್ತಮವಾಗಿ ಯಾಗವನ್ನು ಮಾಡಿಸುತ್ತಾನೆಂದು’ ಹೇಳಿದರು. ಅವರೇ ಮುಂದುವರಿಸಿ, ‘ಸಂವರ್ತನು ಪ್ರತಿದಿನ ವಾರಾಣಸಿಗೆ ಶಿವದರ್ಶನಕ್ಕಾಗಿ ಬರುವವರ ಪ್ರತಿಕ್ರಿಯೆಯನ್ನು ಗಮನಿಸುತ್ತಿರು.

ಎಲ್ಲರೂ ಅದರ ಕಡೆ ನೋಡದೆ ಬರುತ್ತಾನೆ. ನೀನು ನಗರದ ಬಾಗಿಲಿನಲ್ಲಿ ಒಂದು ಹೆಣವನ್ನಿಟ್ಟುಕೊಂಡು ಹಾದಿಯಲ್ಲಿ ತಮ್ಮ ಪಾಡಿಗೆ ತಾವು ಮುಂದೆ ಹೋಗುತ್ತಾರೆ. ಸಂವರ್ತನು ಮಾತ್ರ ಮರಳಿ ಬಂದಹಾದಿಯನ್ನು ಹಿಡಿದು ಹಿಂದಿರುಗುವನು. ಆಗ ನೀನು ಅವನನ್ನು ಹಿಂಬಾಲಿಸು. ಹೋಗು. ಏಕಾಂತಸ್ಥಳವು ಸಿಕ್ಕಿದೊಡನೆಯೇ ಅವನನ್ನು ಸಂಧಿಸಿ ಬದ್ಧಾಂಜಲಿಯಾಗಿ ಅವನು ಯಾವ ಕಡೆಗೆ ಓಡುವನೋ ಅಲ್ಲಿಗೆಲ್ಲ ನೀನು ಅವನನ್ನು ಅನುಸರಿಸಿಕೊಂಡು ಶರಣುಹೊಂದು.

ಅವನೇನಾದರೂ ತನ್ನ ಪರಿಚಯವನ್ನು ಯಾರು ಮಾಡಿಕೊಟ್ಟರೆಂದು ಕೇಳಿದರೆ, ನಾರದರೇ ಹೇಳಿಕೊಟ್ಟರೆಂದು ತಿಳಿಸು. ಅವನನ್ನು ಹೇಗಾದರೂ ಒಲಿಸಿಕೊಂಡರೆ ನಿನ್ನ ಕೆಲಸವಾಗುತ್ತದೆ’ ಎಂದು ತಿಳಿಸಿ ಹೊರಟುಹೋದರು. ರಾಜನು ವಾರಾಣಸಿ ಪಟ್ಟಣಕ್ಕೆ ಪ್ರಯಾಣ ಮಾಡಿದನು. ನಾರದರ ಮಾತಿನಂತೆ ಪಟ್ಟಣದ ಮಹಾದ್ವಾರದಲ್ಲಿ ಶವವೊಂದನ್ನಿರಿಸಿ ಕಾಯುತ್ತಿದ್ದನು.

ಸ್ವಲ್ಪ ಹೊತ್ತಿನಲ್ಲಿಯೇ ಸಂವರ್ತನು ಅಲ್ಲಿಗೆ ಬಂದು, ರಭಸದಿಂದ ಹಿಂದಕ್ಕೆ ಓಡತೊಡಗಿದನು. ಮರುತ್ತನೂ ಅವರ ಹಿಂದೆಯೇ ಓಡಿದನು. ಸಂವರ್ತನು ರಾಜನು ಅನುಸರಿಸುವುದನ್ನು ತಪ್ಪಿಸಲು ಅವನ ಮೇಲೆ ಧೂಳು, ಕೆಸರನ್ನೆಲ್ಲ ಎರಚಿದನು. ಆದರೂ ರಾಜನು ಶಾಂತನಾಗಿ ಅವನನ್ನು ಹಿಂಬಾಲಿಸುತ್ತಲೇ ಇದ್ದನು. ಆಯಾಸಗೊಂಡ ಸಂವರ್ತರು ಒಂದು ತಂಪಾದ ಆಲದ ಮರದ ನೆರಳಿಗೆ ಹೋಗಿ ಕುಳಿತುಕೊಂಡರು.

ರಾಜನು ಅವನ ಬಳಿಗೆ ಬಂದು ಕೈಜೋಡಿಸಿ ನಿಂತುಕೊಂಡನು. ಸಂವರ್ತನು ತಾನು ಇಲ್ಲಿರುವುದು ಹೇಗೆ ತಿಳಿಯಿತೆಂದು ರಾಜನನ್ನು ಕೇಳಿದನು. ರಾಜನು ನಾರದರು ತನಗೆ ಈ ವಿಷಯವನ್ನು ತಿಳಿಸಿದರೆಂದು ಹೇಳಿದನು. ಸಂವರ್ತನು ರಾಜನನ್ನು ಭಯಪಡಿಸಲು “ನಾನೊಬ್ಬ ಹುಚ್ಚನು. ನನ್ನ ಮನಸ್ಸಿನಂತೆ ನಡೆಯತಕ್ಕವನು.

ನನ್ನಿಂದ ಯಾವ ಕೆಲಸವೂ ಆಗದು. ನನ್ನ ಅಣ್ಣನಾದರೋ ಯಜ್ಞಗಳನ್ನು ಮಾಡಿಸುವುದರಲ್ಲಿ ಸಮರ್ಥನು. ನನ್ನದೆಲ್ಲವನ್ನೂ ನನ್ನ ಅಣ್ಣನು ಈ ಹಿಂದೆಯೇ ಅಪಹರಿಸಿ ಬಿಟ್ಟನು. ಆದರೂ ನಾನು ಅವನ ಅನುಜ್ಞೆಯನ್ನು ಪಡೆಯದೇ ನಿನಗೆ ಯಾವುದೇ ಕಾರಣದಿಂದಲೂ ಯಾವ ಯಜ್ಞವನ್ನೂ ಮಾಡಿಸುವುದಿಲ್ಲ. ಅವನು ನನ್ನ ಜೇಷ್ಠ ಸಹೋದರನು. ನೀನೇನಾದರೂ ಅವನ ಅನುಜ್ಞೆಯನ್ನು ಪಡೆದು ಬಂದೆಯಾದರೆ, ನಾನು ಯಜ್ಞವನ್ನು ಮಾಡಿಸಬಲ್ಲೆ” ಎಂದನು.

ಆಗ ರಾಜನು, “ಪೂಜ್ಯರೇ! ನಾನು ಮೊದಲೇ ಬೃಹಸ್ಪತಿಗಳ ಬಳಿಗೆ ಹೋಗಿದ್ದೆನು. ಅವರು ದೇವತೆಗಳಿಗೆ ಯಜ್ಞ ಮಾಡಿಸುವ ತಾನು, ಮನುಷ್ಯರಿಗೆ ಯಜ್ಞಮಾಡಿಸಲಾರೆನೆಂದು ನನ್ನನ್ನು ತಿರಸ್ಕರಿಸಿದರು. ಆದ್ದರಿಂದ ನಿಮ್ಮನ್ನು ಶರಣುಹೊಂದಿರುತ್ತೇನೆ. ನೀವು ನನ್ನ ಪ್ರಾರ್ಥನೆಯನ್ನು ಅಂಗೀಕರಿಸಬೇಕು” ಎಂದು ಬೇಡಿಕೊಂಡನು. ಆಗ ಸಂವರ್ತನು, “ನೀನು ನನ್ನ ಅಭಿಪ್ರಾಯಕ್ಕೆ ಅನುಸಾರವಾಗಿಯೇ ಎಲ್ಲ ಸಂದರ್ಭಗಳಲ್ಲಿಯೂ ನಡೆದುಕೊಳ್ಳುವುದಾದರೆ ನಾನು ಯಜ್ಞವನ್ನು ಮಾಡಿಸುತ್ತೇನೆ. ಈ ಕಾರ್ಯದಿಂದ ಬೃಹಸ್ಪತಿ ಮತ್ತು ಇಂದ್ರರು ನಿನಗೆ ಶತ್ರುಗಳಾಗುತ್ತಾರೆ. ಅವರು ತೊಂದರೆ ಮಾಡುವರೆಂದು ಹೆದರಿ, ನೀನು ಮಧ್ಯದಲ್ಲಿ ನನ್ನನ್ನು ಪರಿತ್ಯಜಿಸಿದರೆ ನಿನ್ನನ್ನು ಬಂಧುಗಳ ಸಮೇತವಾಗಿ ಭಸ್ಮ ಮಾಡಿಬಿಡುತ್ತೇನೆ” ಎಂದನು. ಮರುತ್ತನು ಎಂತಹ ಸಂದರ್ಭದಲ್ಲಿಯೂ ಸಂವರ್ತನಿಗೆ ದ್ರೋಹ ಮಾಡುವುದಿಲ್ಲವೆಂದು ಶಪಥಮಾಡಿದನು.

ಸಂವರ್ತನಿಗೆ ಯಜ್ಞಮಾಡಿಸುವುದರಲ್ಲಿಯಾಗಲೀ ದಕ್ಷಿಣೆಯ ರೂಪವಾಗಿ ಧನಸಂಗ್ರಹದಲ್ಲಿಯಾಗಲೀ ಆಸಕ್ತಿಯಿರಲಿಲ್ಲ. ಆದರೆ ಇಂದ್ರ ಮತ್ತು ಬೃಹಸ್ಪತಿಗಳಿಗೆ ಪ್ರಿಯವಲ್ಲದ ಈ ಕಾರ್ಯವನ್ನು ಮಾಡಬೇಕೆಂದು ಅವನು ನಿರ್ಧರಿಸಿದನು. ಯಜ್ಞವು ಬಹಳ ಚೆನ್ನಾಗಿ ನಡೆಯಬೇಕೆಂಬ ಉದ್ದೇಶದಿಂದ ಸಂವರ್ತನೇ ಮರುತ್ತನಿಗೆ ಅಪಾರವಾದ ಧನರಾಶಿಯಿರುವ ಸ್ಥಳವನ್ನು ತೋರಿಸಿಕೊಟ್ಟನು.

ಹಿಮಾಲಯದ ಹಿಂದೆ ಇರುವ ಮುಂಜವಂತವೆಂಬ ಪರ್ವತದಲ್ಲಿ ಸುವರ್ಣಗಣಿಗಳಿವೆಯೆಂದೂ ಅವು ಕುಬೇರನ ಅನುಚರರಿಂದ ರಕ್ಷಿಸಲ್ಪಡುತ್ತಿವೆಯೆಂದೂ ಅವನು ಹೇಳಿದನು. ಅಲ್ಲಿರುವ ಚಿನ್ನವನ್ನು ಪಡೆಯಲು ಶಿವನನ್ನು ಸ್ತುತಿಸಬೇಕಾದ ಸ್ತೋತ್ರವನ್ನೂ ಮರುತ್ತನಿಗೆ ಉಪದೇಶಿಸಿದನು. ಮರುತ್ತನು ಅದರಂತೆಯೇ ಶಿವನನ್ನು ಶರಣುಹೊಂದಿ, ಸುವರ್ಣದ ರಾಶಿಯನ್ನೇ ಪಡೆದುಕೊಂಡನು. ಮರುತ್ತನ ಸೇವಕರು ಅದೆಲ್ಲವನ್ನೂ ಯಜ್ಞಭೂಮಿಗೆ ತಂದರು. ಬಹಳ ಅದ್ಧೂರಿಯಿಂದ ಸಿದ್ಧತೆಗಳು ನಡೆದವು.

ಬೃಹಸ್ಪತಿಗ ಈ ಎಲ್ಲ ಸಮಾಚಾರವೂ ತಲಪಿತು. ಅವನು ದುಃಖ ಮತ್ತು ಚಿಂತೆಯಿಂದ ಪರಿತಪಿಸತೊಡಗಿದರು. ತನ್ನ ದುಃಖವನ್ನು ಅವನು ಇಂದ್ರನಲ್ಲಿ ತೋಡಿಕೊಂಡನು. ಸರ್ವೋಪಾಯಗಳಿಂದ ಮರುತ್ತ ಮತ್ತು ಸಂವರ್ತರು ಸೇರಿ ಮಾಡುವ ಯಜ್ಞವನ್ನು ನಿಲ್ಲಿಸಬೇಕೆಂದು ಕೇಳಿಕೊಂಡರು.

ಒಡನೆಯೇ ಇಂದ್ರನು ಬಿಟ್ಟುಬರಬೇಕೆಂದೂ ಮರುತ್ತನಿಗೆ ಹೇಳಿಕಳುಹಿಸಿದನು. ಅದರಂತೆ ಅಗ್ನಿಯು ಅಗ್ನಿಯನ್ನು ಕರೆದು ದೇವಗುರುವೇ ಯಜ್ಞವನ್ನು ಮಾಡಿಸುತ್ತಾನೆಂದೂ ಸಂವರ್ತನನ್ನು ಮರುತ್ತನ ಬಳಿಗೆ ಹೋಗಿ, ‘ಇಂದ್ರನು ಅವನೊಡನೆ ಶಾಶ್ವತವಾದ ಮೈತ್ರಿಯನ್ನು ಹೇಳಿದನು. ಆದರೆ ಮರುತ್ತನು ಸಂವರ್ತನೇ ತನ್ನ ಯಾಜಕನೆಂದೂ, ಅವನನ್ನು ಬಯಸುತ್ತಾನೆಂದೂ, ಬೃಹಸ್ಪತಿಯನ್ನೇ ಯಜ್ಞಮಾಡಲು ಕಳುಹಿಸುತ್ತಾನೆಂದೂ, ಬದಲಾಯಿಸಲು ಸಾಧ್ಯವಿಲ್ಲವೆಂದೂ ಹೇಳಿಬಿಟ್ಟನು. ಅಗ್ನಿಯು ಪದೇಪದೇ ಮರುತ್ತನಿಗೆ ಬೇರೆ ಬೇರೆ ಆಮಿಷಗಳನ್ನು ಒಡ್ಡುತ್ತಿರುವುದನ್ನು ಕಂಡು ಸಂವರ್ತನು ಕೋಪದಿಂದ ಅಗ್ನಿಯನ್ನೇ ಸುಟ್ಟುಬಿಡುವುದಾಗಿ ಬೆದರಿಸಿದನು. ಅಗ್ನಿಯು ಹೆದರಿ ಕೂಡಲೇ ಅಲ್ಲಿಂದ ಹೊರಟುಹೋದನು. ಇಂದ್ರನಿಗೆ ನಡೆದ ಸಂಗತಿಯನ್ನೆಲ್ಲ ಅರುಹಿದನು.

ಅನಂತರ ಇಂದ್ರನು ಧೃತರಾಷ್ಟನೆಂಬ ಗಂಧರ್ವನನ್ನು ಮತ್ತೆ ಮರುತ್ತನ ಬಳಿಗೆ ಕಳುಹಿಸಿದನು. ಧೃತರಾಷ್ಟ್ರನು ಅಲ್ಲಿಗೆ ಹೋಗಿ ಬೃಹಸ್ಪತಿಯನ್ನು ಯಜ್ಞಕಾರ್ಯಮಾಡಲು ವರಣಮಾಡದಿದ್ದರೆ ಇಂದ್ರನ ವಜ್ರಾಯುಧಕ್ಕೆ ತುತ್ತಾಗಬೇಕಾಗುತ್ತದೆಂಬ ಇಂದ್ರನ ಮಾತುಗಳನ್ನು ತಿಳಿಸಿದನು. ಆದರೆ ಮರುತ್ತನು ‘ತಾನು ಕೊಟ್ಟ ಮಾತನ್ನು ಮುರಿಯುವುದು ಸಾಧ್ಯವಿಲ್ಲವೆಂದೂ, ಸಂವರ್ತನೇ ತನಗೆ ಯಜ್ಞ ಮಾಡಿಸುವವನೆಂದೂ’ ಹೇಳಿಬಿಟ್ಟನು. ಇಂದ್ರನ ಗರ್ಜನೆಯು ಅಷ್ಟರಲ್ಲಿಯೇ ಆಕಾಶದಲ್ಲಿ ಕೇಳಿಬರತೊಡಗಿತು.

ಮರುತ್ತನು ಸಂವರ್ತನನ್ನೇ ಶರಣುಹೊಂದಿದನು. ಸಂವರ್ತನು ತನ್ನ ಮಂತ್ರಬಲದಿಂದ ಇಂದ್ರಾದಿ ಸಕಲದೇವತೆಗಳನ್ನೂ ಯಜ್ಞಶಾಲೆಗೆ ಆಹ್ವಾನಿಸಿದರು. ಮಂತ್ರಶಕ್ತಿಯು ಇಂದ್ರನನ್ನು ದೇವತೆಗಳೊಡನೆ ಅವರ ಇಚ್ಚೆಗೆ ವಿರುದ್ಧವಾಗಿ ಎಳೆದುತಂದಿತು. ಮರುತ್ತನು ಸಶರೀರರಾಗಿ ಬಂದ ಇಂದ್ರಾದಿ ದೇವತೆಗಳನ್ನು ವಿಧಿವತ್ತಾಗಿ ಸ್ವಾಗತಿಸಿದರು. ಬಳಿಕ ಸಂವರ್ತನು ಇಂದ್ರನನ್ನು ಕುರಿತು, “ದೇವರಾಜನೇ! ನಿನಗೆ ಸ್ವಾಗತವು. ನಿನ್ನ ಸಾನ್ನಿಧ್ಯದಿಂದ ಈ ಯಜ್ಞವು ಬಹಳವಾಗಿ ಶೋಭಿಸುತ್ತಿದೆ. ನನ್ನಿಂದ ಸಂಸ್ಕರಿಸಲ್ಪಟ್ಟಿರುವ ಈ ಸೋಮರಸವನ್ನು ಪಾನಮಾಡು” ಎಂದರು.

ಸಂವರ್ತನ ಮಂತ್ರಶಕ್ತಿಯಿಂದ ಇಂದ್ರನ ಕೋಪವೂ ನಷ್ಟವಾಗಿಹೋಯಿತು. ಸಂವರ್ತನ ಆಜ್ಞೆಯಂತೆ ಯಜ್ಞದ ವಿಧಾನವನ್ನು ಇಂದ್ರನೇ ಅನುಶಾಸನ ಮಾಡಿದನು. ಎಲ್ಲ ದೇವತೆಗಳ ಹವಿರ್ಭಾಗಗಳನ್ನೂ ನಿಶ್ಚಯ ಮಾಡಿದನು. ದೇವತೆಗಳೆಲ್ಲ ಯಜ್ಞಮಂಟಪದ ನಿರ್ಮಾಣಕಾರ್ಯದಲ್ಲಿ ನೆರವಾದರು. ಅಪ್ಸರೆಯರೆಲ್ಲ ನರ್ತಿಸುತ್ತಿದ್ದರು.

ಎರಡನೆಯ ಯಜೇಶ್ವರನಂತೆ ತೇಜಸ್ವಿಯಾಗಿ ಕಂಗೊಳಿಸುತ್ತಿದ್ದ ಸಂವರ್ತನು ಯಥಾವಿಧಿಯಾಗಿ ಯಜ್ಞವನ್ನು ಪೂರ್ಣಗೊಳಿಸಿದನು. ದೇವತೆಗಳೆಲ್ಲರೂ ಸಂತೃಪ್ತರಾಗಿ ಮರುತ್ತ ರಾಜನ ಅನುಮತಿಯನ್ನು ಪಡೆದು ಹಿಂದಿರುಗಿದರು. ಹೀಗೆ ಸಂವರ್ತನು ತನ್ನ ತಪಃಪ್ರಭಾವದಿಂದ ಇಂದ್ರಾದಿ ದೇವತೆಗಳನ್ನೂ ಆಜ್ಞಾಧಾರಕರನ್ನಾಗಿ ಮಾಡಿಕೊಂಡನು. ಮಹಾಭಾರತದ ಅನುಶಾಸನಪರ್ವವು ಸಂವರ್ತರನ್ನು ಶ್ರೇಷ್ಠ ತಪಸ್ವಿಗಳ ಪಟ್ಟಿಯಲ್ಲಿ ಸೇರಿಸಿದೆ.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *