Kamboja renamed Cambodia in memory of Kaundinya Maharishiಕಾಂಬೋಡಿಯಾದಲ್ಲಿರುವ ಕೌಂಡಿನ್ಯ ಮಹರ್ಷಿಗಳ ಪ್ರತಿಮೆ

ಕೌಂಡಿನ್ಯರು ಕುಂಡಿನ ಋಷಿಗಳ ಪುತ್ರರು. ಅವರು ಗೋತ್ರಪ್ರವರ್ತಕರು. ಕೌಂಡಿನ್ಯ ಮತ್ತು ವಾಸಿಷ್ಠಗೋತ್ರಗಳೆರಡೂ ವಾಸಿಷ್ಠ, ಮೈತ್ರಾವರುಣ ಮತ್ತು ಕೌಂಡಿನ್ಯರನ್ನು ಪ್ರವರದಲ್ಲಿ ಒಳಗೊಂಡಿವೆ. ಶತಪಥಬ್ರಾಹ್ಮಣದಲ್ಲಿ ಇವರ ಉಲ್ಲೇಖವಿದೆ. ಬೃಹದಾರಣ್ಯಕದಲ್ಲಿ ಕೌಂಡಿನ್ಯರು ಶಾಂಡಿಲ್ಯರ ಶಿಷ್ಯರೆಂದು ಹೇಳಲಾಗಿದೆ. ಮಹಾಭಾರತದ ಸಭಾಪರ್ವದಲ್ಲಿ ಯುಧಿಷ್ಟಿರನ ಸಭೆಗೆ ಬಂದಿದ್ದ ಮಹರ್ಷಿಗಳ ಪಟ್ಟಿಯಲ್ಲಿ ಕೌಂಡಿನ್ಯರ ಹೆಸರನ್ನು ಕಾಣುತ್ತೇವೆ.

ಕೌಂಡಿನ್ಯರು ಭಾರತದೇಶಕ್ಕಿಂತಲೂ ಹೊರಗಡೆಯ ದ್ವೀಪಗಳಲ್ಲಿ ಹೆಚ್ಚು ಪ್ರಸಿದ್ಧರಾಗಿದ್ದಂತೆ ಕಾಣುತ್ತದೆ. ಡಾ. ಸುಶೀಲಕುಮಾರ ಪಾಂಡೆ ಎಂಬುವವರು ಕೌಂಡಿನ್ಯರ ವಿಷಯವಾಗಿ ಹಿಂದಿಯಲ್ಲಿ ಮಹಾಕಾವ್ಯವನ್ನೇ ರಚಿಸಿದ್ದಾರೆ. ಅವರು ತಮ್ಮ ಕೃತಿಯ ಪೀಠಿಕೆಯಲ್ಲಿ ಕೌಂಡಿನ್ಯರ ವಿಷಯವಾಗಿ ಬಹಳಷ್ಟು ಐತಿಹಾಸಿಕ ಸಂಗತಿಗಳನ್ನು ನೀಡಿದ್ದಾರೆ.

ಕುಬೇರನಾಥರಾಯರು ಕೌಂಡಿನ್ಯರನ್ನು ಭಾರತದ ಕೊಲಂಬಸ್ ಎಂದು ಕರೆದಿದ್ದಾರೆ! ಕಾಂಬೋಡಿಯಾ ಮತ್ತು ಚೀನಾದಲ್ಲಿ ದೊರೆತಿರುವ ಐತಿಹಾಸಿಕ ದಾಖಲೆಗಳ ಪ್ರಕಾರ ಕೌಂಡಿನ್ಯರೆಂಬ ಬ್ರಾಹ್ಮಣರು ಭಾರತದಿಂದ ಕಂಪ್ಯೂಚಿಯಾ ದ್ವೀಪಕ್ಕೆ ಪ್ರಯಾಣ ಮಾಡಿದರು.

ಅವರು ಅಶ್ವತ್ಥಾಮರ ಶಿಷ್ಯರಾಗಿದ್ದರು. ಅವರು ಆ ದ್ವೀಪಕ್ಕೆ ಹೋದಾಗ, ಅಲ್ಲಿಯ ಜನರು ಅನಾಗರಿಕರಾಗಿದ್ದರು. ಕೌಂಡಿನ್ಯರು ಅಲ್ಲಿ ಭಾರತೀಯ ಸಂಸ್ಕೃತಿಯನ್ನು ಹರಡಿದರು. ಅಲ್ಲಿಯ ಭಾಷೆ, ಲಿಪಿ, ಶಿಲ್ಪಕಲೆ, ಜ್ಞಾನ-ವಿಜ್ಞಾನಾದಿಗಳ ಮೇಲೆ ಹಿಂದೂಧರ್ಮದ ಛಾಯೆಯು ಇಂದಿಗೂ ಗಾಢವಾಗಿದೆ. ಇಂದಿನ ಕಾಂಬೋಡಿಯಾ ಅಂದಿನ ಕಾಂಬೋಜ ರಾಜ್ಯವಾಗಿದ್ದಿರಬಹುದು. ಕೌಂಡಿನ್ಯ ಮಹರ್ಷಿಗಳಿಂದ ಕಾಂಬೋಜ, ಕಾಂಬೋಡಿಯಾ ಆಯಿತು ಎಂದು ಹೇಳಾಗಿದೆ.

ಚೀನೀಭಾಷೆಯಲ್ಲಿ ಈ ರಾಜ್ಯವನ್ನು ‘ಪೂನಾನ್’ ಎಂದು ಕರೆಯುತ್ತಿದ್ದರಂತೆ. ಕೌಂಡಿನ್ಯಮಹರ್ಷಿಗಳು ಅಲ್ಲಿಗೆ ಹೋದಾಗ, ಅಲ್ಲಿಯ ಜನರು ನಾಗದೇವತೆಯನ್ನು ಆರಾಧಿಸುತ್ತಿದ್ದರು. ಕೌಂಡಿನ್ಯರು ಅಲ್ಲಿಯ ರಾಣಿ ಸೋಮಾಳನ್ನು ವಿವಾಹವಾಗಿ ಸೋಮವಂಶದ ಜನಕರಾದರು.

ಬ್ರಿಜೇನ್‌ರಾಯ್ ಚಟರ್ಜಿಯವರ ಪ್ರಕಾರ ‘ಕಾಂಬೋಜ ನಿವಾಸಿಗಳು ನಟರಾಜರೂಪದ ಶಿವನ ಆರಾಧಕರಾಗಿದ್ದರು. ಕೌಂಡಿನ್ಯರು ಅಲ್ಲಿಗೆ ಹೋಗಿ ವೈದಿಕ ಯಜ್ಞಯಾಗಾದಿಗಳನ್ನು ಪ್ರಚಾರ ಮಾಡಿದರು’. ಇಂದಿಗೂ ಈ ದ್ವೀಪಗಳಲ್ಲಿ ಭಾರತೀಯ ಸಂಸ್ಕೃತಿಯ ಛಾಯೆಯನ್ನು ಕಾಣುತ್ತೇವೆ.

ಕೌಂಡಿನ್ಯರು ತೆರಳಿದ ದೇಶ-ಕಾಲಗಳ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಭಾರತೀಯ ಪ್ರಾಚೀನಸಾಹಿತ್ಯದಲ್ಲಿ ಈ ವಿಷಯ ಎಲ್ಲಿಯೂ ಹೇಳಲ್ಪಟ್ಟಿಲ್ಲ. ಅಂದಿನ ಕಾಲಕ್ಕೆ ಬ್ರಾಹ್ಮಣರು ಹಡಗಿನಲ್ಲಿ ವಿದೇಶಪ್ರಯಾಣ ಮಾಡುತ್ತಿದ್ದುದು ಅಪರೂಪವಾಗಿತ್ತಾದ್ದರಿಂದ ಮತ್ತು ಅಲ್ಲಿ ನಡೆದ ಸಂಗತಿಗಳು ಭಾರತಕ್ಕೆ ತಲಪುವ ಸಾಧ್ಯತೆಯೂ ಅಷ್ಟಾಗಿ ಇರಲಿಲ್ಲವಾದುದರಿಂದ ಅಂದಿನ ಸಾಹಿತ್ಯಗಳಲ್ಲಿ ಕೌಂಡಿನ್ಯರ ಪ್ರಸ್ತಾವ ಹೆಚ್ಚಿಗೆ ಇಲ್ಲದಿರಬಹುದು.

ಆದರೆ ಚೀನಾಯಾತ್ರಿಕರು ಮತ್ತು ರಾಯಭಾರಿಗಳ ಬರವಣಿಗೆಯಲ್ಲಿ ಈ ಅಂಶಗಳು ಸ್ಪಷ್ಟವಾಗಿ ದೊರೆಯುತ್ತವೆ. ಆದರೆ ಆಗ ಅವರು ‘ಪೂನಾನ್’ ಎಂದು ಕರೆಯುತ್ತಿದ್ದ ಭಾಗದ ಬಗ್ಗೆ ಕೆಲವು ಸಂದೇಹಗಳಿವೆ. ಕೆಲವರು ಈ ದೇಶವನ್ನು ‘ಚಂಪಾ’ ಎಂದೂ ಅದು ಇಂದಿನ ದಕ್ಷಿಣ ವಿಯೆಟ್ನಾಂ ಎಂದೂ ಹೇಳುತ್ತಾರೆ. ಮತ್ತೆ ಕೆಲವರು ‘ಪೂನಾನ್’ ಎಂಬುದು ‘ಭೂತಾನ್’ ಎಂಬುದರ ಅಪಭ್ರಂಶವೆಂದೂ ಭಾವಿಸುತ್ತಾರೆ. ಅದೇನೇ ಇದ್ದರೂ ಕೌಂಡಿನ್ಯರು ಭಾರತದಿಂದ ಹೊರಗೆ ಭಾರತೀಯಸಂಸ್ಕೃತಿಯ ಪ್ರಚಾರ ಮಾಡಿದ ಮಹಾಮಹಿಮರೆಂಬುದರಲ್ಲಿ ಸಂಶಯವಿಲ್ಲ.

ಇಡೀ ಜಗತ್ತೇ ಒಂದು ಕುಟುಂಬವೆಂದು ಭಾವಿಸಿ, ದೂರದೇಶದ ಜನರಿಗೆ ನಾಗರಿಕತೆಯನ್ನು ಕಲಿಸಿ, ಮನುಷ್ಯರಂತೆ ಬಾಳಲು ಅನುವುಮಾಡಿಕೊಟ್ಟವರು ಕೌಂಡಿನ್ಯರು. ಇವರು ಅಲ್ಲಿಗೆ ಹೋದಾಗ, ಅಲ್ಲಿಯ ಜನರಿಗೆ ಬಟ್ಟೆಯನ್ನು ತಯಾರಿಸುವ ಕಲೆ ಗೊತ್ತಿರಲಿಲ್ಲ. ಸೊಪ್ಪುಸದೆಗಳಿಂದ ಮೈಯನ್ನು ಮುಚ್ಚಿಕೊಂಡು ಚಳಿ-ಮಳೆಗಳಿಂದ ರಕ್ಷಣೆ ಪಡೆಯುತ್ತಿದ್ದರು. ಮನುಷ್ಯರು ಮತ್ತು ಮೃಗಗಳ ಮಾಂಸದಿಂದ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು.

ಕೌಂಡಿನ್ಯರು ಅವರಿಗೆ ಅನ್ನ, ಬಟ್ಟೆ, ವಸತಿ, ವಿದ್ಯೆ ಮುಂತಾದ ಎಲ್ಲ ಜೀವನಾವಶ್ಯಕ ವಿಷಯಗಳಲ್ಲಿ ಶಿಕ್ಷಣ ನೀಡಿದರು. ಅಲ್ಲಿಯ ಜನ ಇವರನ್ನು ದೇವರೆಂದೇ ಭಾವಿಸಿ, ಇವರನ್ನು ರಾಜಪದವಿಯಲ್ಲಿ ನಿಯೋಜಿಸಿದರು. ಹೀಗೆ ಕೌಂಡಿನ್ಯರು ಭಾರತೀಯ ಸಂಸ್ಕೃತಿಯ ಪ್ರಪ್ರಥಮ ರಾಯಭಾರಿಗಳೆನಿಸಿದರು. ಇಂದಿಗೂ ಭಾರತೀಯ ಸಂಸ್ಕೃತಿಯ ಅವಶೇಷಗಳನ್ನು ಆ ಪ್ರದೇಶಗಳಲ್ಲಿ ಕಾಣಬಹುದು.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *