PMMVY Scheme 6000 Rupees for pregnant women how to applyಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ

ಬೆಂಗಳೂರು, ಜು.30: ಕೇಂದ್ರ ಸರ್ಕಾರ ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಉತ್ತೇಜಿಸಲು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY) ಜಾರಿಗೊಳಿಸಿದೆ. ಈ ಯೋಜನೆಯಡಿ ಅರ್ಹ ಮಹಿಳೆಯರಿಗೆ ₹5,000 ನಗದು ಸಹಾಯಧನ ನೀಡಲಾಗುತ್ತದೆ.

ಜೊತೆಗೆ ಜನನಿ ಸುರಕ್ಷಾ ಯೋಜನೆಯಡಿ ₹1,000 ಪ್ರೋತ್ಸಾಹಧನವೂ ದೊರೆಯುವುದರಿಂದ ಒಟ್ಟು ಪ್ರಯೋಜನ ₹6,000 ಆಗುತ್ತದೆ. ಹಾಗಾದರೆ ಈ ಯೋಜನೆಯ ಲಾಭ ಯಾರಿಗೆ ಸಿಗುತ್ತದೆ? ಅರ್ಜಿ ಎಲ್ಲಿ ಸಲ್ಲಿಸಬೇಕು? ಯಾವ ದಾಖಲೆಗಳು ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ಯಾರಿಗೆ ಸಿಗಲಿದೆ ಯೋಜನೆಯ ಲಾಭ?

19 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ, ಮೊದಲ ಬಾರಿಗೆ ಗರ್ಭಿಣಿಯಾಗಿರುವ ಹಾಗೂ ಸರ್ಕಾರಿ ಹೆರಿಗೆ ಸೌಲಭ್ಯ ಪಡೆಯದ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಎಷ್ಟು ಹಣ ಸಿಗುತ್ತದೆ?

ಯೋಜನೆಯಡಿ ಒಟ್ಟು ₹5,000 ನಗದು ಸಹಾಯಧನವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ.

  1. ಮೊದಲ ಕಂತು – ₹1,000: ಗರ್ಭಧಾರಣೆಯ ಆರಂಭದಲ್ಲೇ ಅಂಗನವಾಡಿ ಅಥವಾ ಅನುಮೋದಿತ ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡ ಬಳಿಕ.
  2. ಎರಡನೇ ಕಂತು – ₹2,000: ಗರ್ಭಧಾರಣೆಯ ಆರು ತಿಂಗಳು ಪೂರ್ಣಗೊಂಡು ಅಗತ್ಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ.
  3. ಮೂರನೇ ಕಂತು – ₹2,000: ಮಗುವಿನ ಜನನದ ನಂತರ ಅಗತ್ಯ ಲಸಿಕೆಗಳನ್ನು ನೀಡಿದ ಬಳಿಕ. ಇದರ ಜೊತೆಗೆ ಜನನಿ ಸುರಕ್ಷಾ ಯೋಜನೆ ಅಡಿಯಲ್ಲಿ ಸಂಸ್ಥೆಯಲ್ಲಿ ಹೆರಿಗೆ ನಡೆದರೆ ಹೆಚ್ಚುವರಿಯಾಗಿ ₹1,000 ಪ್ರೋತ್ಸಾಹಧನವೂ ದೊರೆಯುತ್ತದೆ. 

ಯೋಜನೆಯ ಪ್ರಮುಖ ನಿಯಮಗಳು

ಈ ಯೋಜನೆಯ ಪ್ರಯೋಜನವನ್ನು ಒಮ್ಮೆ ಮಾತ್ರ ಪಡೆಯಬಹುದು. ಯಾವುದೇ ಕಂತು ಪಡೆದ ನಂತರ ಗರ್ಭಪಾತವಾದರೆ ಮುಂದಿನ ಕಂತುಗಳನ್ನು ಆ ಗರ್ಭಧಾರಣೆಗೆ ನೀಡುವುದಿಲ್ಲ. ನಂತರದ ಗರ್ಭಧಾರಣೆಯಲ್ಲಿ ಉಳಿದ ಕಂತುಗಳನ್ನು ಪಡೆಯಬಹುದು. ಎಲ್ಲಾ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಮಾತ್ರ ಕಂತುಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಸಮೀಪದ ಅಂಗನವಾಡಿ ಕೇಂದ್ರ ಅಥವಾ ಸರ್ಕಾರದಿಂದ ಅನುಮೋದಿತ ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ

ಯೋಜನೆಯ ಲಾಭ ಪಡೆಯಲು ಅರ್ಹ ಮಹಿಳೆಯರು ತಮ್ಮ ಪ್ರದೇಶದ ಅಂಗನವಾಡಿ ಕೇಂದ್ರ ಅಥವಾ ಅನುಮೋದಿತ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕು.

ನೋಂದಣಿಯ ವೇಳೆ ಫಾರ್ಮ್-1A ಅನ್ನು ಭರ್ತಿ ಮಾಡಿ ಸಲ್ಲಿಸಬೇಕು. ಈ ಅರ್ಜಿ ನಮೂನೆಯನ್ನು ಸಂಬಂಧಿತ ಕೇಂದ್ರದಲ್ಲೇ ಪಡೆಯಬಹುದು. ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವೆಬ್‌ಸೈಟ್‌ನಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  1. ಸಂಪೂರ್ಣ ಭರ್ತಿ ಮಾಡಿದ ಫಾರ್ಮ್-1A
  2. ತಾಯಿ ಮತ್ತು ಮಕ್ಕಳ ರಕ್ಷಣಾ (MCP) ಕಾರ್ಡ್ ಪ್ರತಿ
  3. ಮಹಿಳೆ ಹಾಗೂ ಪತಿಯ ಗುರುತಿನ ದಾಖಲೆ
  4. ಆಧಾರ್ ಕಾರ್ಡ್ ವಿವರ
  5. ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಯ ಪಾಸ್‌ಬುಕ್ ಪ್ರತಿ
  6. ಅರ್ಜಿದಾರ್ತಿ ಮತ್ತು ಪತಿ ಸಹಿ ಮಾಡಿದ ಸಮ್ಮತಿ ಪತ್ರ
  7. ಸಂಪರ್ಕ ವಿವರಗಳ

ಹಣ ಹೇಗೆ ಜಮೆಯಾಗುತ್ತದೆ?

ಎಲ್ಲ ದಾಖಲೆಗಳ ಪರಿಶೀಲನೆಯ ಬಳಿಕ ಡಿಬಿಟಿ (DBT) ಮೂಲಕ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ಹಾಗೂ ಆರ್ಥಿಕ ಭದ್ರತೆಯನ್ನು ಹೆಚ್ಚಿಸುವ ಮಹತ್ವದ ಯೋಜನೆಯಾಗಿದ್ದು, ಅರ್ಹ ಮಹಿಳೆಯರು ಸಮಯಕ್ಕೆ ಸರಿಯಾಗಿ ನೋಂದಣಿ ಮಾಡಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *