1977ರಲ್ಲಿ ಪಾಕಿಸ್ತಾನ ಮತ್ತು ಭಾರತದ ರಕ್ಷಣಾ ಸಚಿವರು ಎದುರು-ಬದುರು ಕುಂತು ಒಂದು ಒಪ್ಪಂದ ಮಾಡಿಕೊಂಡರು. ಇನ್ನಾದರೂ ಸೌಹಾರ್ದವಾಗಿರೋಣ ಅನ್ನೋ ಜೆಂಟಲ್‌ಮನ್ಸ್ ಒಪ್ಪಂದ ಅದು. ಸೆಪ್ಟೆಂಬರ್ 15 ರಿಂದ ಏಪ್ರಿಲ್ 15ರವರೆಗೆ ಯಾರೊಬ್ಬರೂ ಮತ್ತೊಬ್ಬರ ಬೇಲಿ ಹಾರಿ ಗುಡ್ಡಗಳನ್ನು ಆಕ್ರಮಿಸಬಾರದು ಅಂತ. ಅಷ್ಟೇ ಅಲ್ಲ, ಆ ವೇಳೆಯಲ್ಲಿ ತಮ್ಮ ತಮ್ಮ ಠಾಣ್ಯಗಳನ್ನೂ ಬಿಡಬೇಕೆಂದು ಒಪ್ಪಂದದಲ್ಲಿ ಸೇರಿಸಲಾಗಿತ್ತು. ಆ ವೇಳೆಯಲ್ಲಿ ಸುರಿಯುವ ಮಂಜು ಸೈನಿಕರ ಜೀವ ಹರಣ ಮಾಡಿಬಿಡುತ್ತದೆಂಬುದು ಆ ಒಪ್ಪಂದದ ಹಿಂದಿನ ಮರ್ಮವಾಗಿತ್ತು. 1998ರಲ್ಲಿ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ಼್ ಷರೀಫ್ ಮತ್ತು ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎದುರು-ಬದುರು ಕುಂತರು, ಕೈಕುಲುಕಿದರು. ನಮ್ಮ ಪದ್ಧತಿಯಂತೆ ನಮಸ್ಕರಿಸಿದರು, ಅವರ ಪದ್ಧತಿಯಂತೆ ತಬ್ಬಿಕೊಂಡರು. ರೈಲು ಬಿಟ್ಟರು, ಬಸ್ಸೂ ಓಡಿಸಿದರು. ಹಿಂದೂಸ್ತಾನಿ – ಪಾಕಿಸ್ತಾನಿ ಭಾಯಿಭಾಯಿ ಅಂತೆಲ್ಲ ಮೆರೆದಾಡಿದೆವು. ಆ ವೇಳೆಗಾಗಲೇ ಪಾಕಿಸ್ತಾನ 1977ರ ಒಪ್ಪಂದವನ್ನು ಮಂಜಿನಬೆಟ್ಟಗಳಲ್ಲೇ ಜಿಹಾದಿನ ಒಲೆ ಇಟ್ಟು ಸುಟ್ಟುಬಿಟ್ಟಿತ್ತು. ಸರಿಹೋದ ಸಂಬಂಧದ ಮೌಢ್ಯದಲ್ಲೇ ಮೈಮರೆತಿದ್ದ ಭಾರತೀಯರನ್ನು ಮಟ್ಟಹಾಕುವ ತಂತ್ರವನ್ನು ರೂಪಿಸುತ್ತಲೇ ಇತ್ತು ಪಾಕಿಸ್ತಾನ. ಕಾಶ್ಮೀರದ ವಿಷಯವನ್ನು ಮತ್ತೆ ಹಸಿಯಾಗಿಸಲು ಹವಣಿಸುತ್ತಿದ್ದ ಸೇನಾ ನಾಯಕ ಪರ್ವೇಜ್ ಮುಷರ್ರಫ್ ಯೋಜನೆಗಳನ್ನು ಹೆಣೆಯುತ್ತಲೇ ಇದ್ದ. ಅಟಲ್ ಬಿಹಾರಿಯವರು ಪಾಕಿಸ್ತಾನಕ್ಕೆ ಹೋದಾಗ ಅವರಿಗೆ ವಂದಿಸದೆ ತನ್ನೊಳಗಿನ ವಿಷ ಕಾರಿಕೊಂಡು ಅವಮಾನಿಸಿದ್ದ. ಈಗ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಮಾಸ್ಟರ್ ಪ್ಲಾನ್ ಅವನ ತಲೆಯೊಳಗೆ ಸಿದ್ಧವಾಗಿತ್ತು. ಕಾರ್ಗಿಲ್, ಬಟಾಲಿಕ್, ದ್ರಾಸ್ ಇವೆಲ್ಲ ಲೈನ್ ಆಫ್ ಕಂಟ್ರೋಲ್‌ನ ಉದ್ದಕ್ಕೂ ಇರುವ ಗಡಿ ಭಾಗದ ಪ್ರದೇಶಗಳು. ಲಡಾಖ್‌ನ ಭಾಗಗಳು ಇವು. ರಕ್ಷಣಾ ದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರದೇಶಗಳು. ಶ್ರೀನಗರದಿಂದ ಹೊರಟು, ಸೋನ್‌ಮಾರ್ಗ್‌ಗೆ ಬಂದು ಅಲ್ಲಿಂದ ಜೋಜಿ ಲಾ ಪಾಸ್ ದಾಟಿಬಿಟ್ಟರೆ ಕಾರ್ಗಿಲ್ ತಲುಪಬಹುದು. ಜೋಜಿ ಲಾ ಪಾಸ್ ಕಳಕೊಂಡೆವೆಂದರೆ ಕತೆ ಮುಗಿದಂತೆ ಅಷ್ಟೇ. ಶ್ರೀನಗರದೊಂದಿಗೆ ಲಡಾಖ್‌ನ ಸಂಪರ್ಕವೇ ಇಲ್ಲ. ಜೋಜಿ ಲಾ ಪಾಸ್, 18 ಸಾವಿರ ಅಡಿ ಬೆಟ್ಟದೆತ್ತರಕ್ಕೂ ಸಾಗುವ ಮಾರ್ಗ. ಅತ್ಯಂತ ಕಡಿದಾದ, ಅಷ್ಟೇ ಕಠಿಣವಾದ ಕೊರಕಲುಗಳು ದಾರಿಯುದ್ದಕ್ಕೂ. ಸ್ವಲ್ಪ ಎಡವಿದರೂ ಪ್ರಪಾತವೇ ಗತಿ. ಇನ್ನು ಮಂಜು ಸುರಿಯುವಾಗಲಂತೂ ಆ ದಾರಿಯಲ್ಲಿ ವಾಹನಗಳಿರಲಿ, ನಡೆದುಕೊಂಡು ಹೋಗುವುದೂ ಕಷ್ಟವೇ. ಮೇ ತಿಂಗಳ ಕೊನೆಯವರೆಗೆ ಮಂಜು ಬೆಟ್ಟ ಪೂರ್ತಿ ಆವರಿಸಿಕೊಂಡಿರುತ್ತದೆ. ಹೀಗಾಗಿ ಆ ವೇಳೆಯಲ್ಲಿ ಸೈನಿಕರೂ ಇರುವುದಿಲ್ಲ. ಅವರಿಗೆ ಬೇಕಾದ ವಸ್ತುಗಳನ್ನು ತಲುಪಿಸುವುದಕ್ಕೂ ಆಗೋದಿಲ್ಲ. ಈ ವಿಚಾರವನ್ನು ಚೆನ್ನಾಗಿ ಅರಿತ ಮುಷರ್ರಫ್ ಏಪ್ರಿಲ್ ಆರಂಭದಲ್ಲೇ ತನ್ನ ಸೈನಿಕರಿಗೆ ಆದೇಶ ನೀಡತೊಡಗಿದ. 30-40 ಜನರ ತಂಡಗಳನ್ನು ರಚಿಸಿದ. ಅವುಗಳಲ್ಲಿ ಜಿಹಾದಿನಿಂದ ಉನ್ಮತ್ತರಾದ ಮುಜಾಹಿದೀನ್‌ಗಳೂ ಇದ್ದರು. 1977ರ ಒಪ್ಪಂದವನ್ನು ನಮ್ಮ ಸೈನ್ಯ ನಿಯತ್ತಾಗಿ ಪಾಲಿಸುತ್ತಿತ್ತು. ಮುಷರ್ರಫ್ ಮಾತ್ರ ಗಾಳಿಗೆ ತೂರಿದ್ದ. ಮಂಜು ಕರಗುವುದನ್ನೆ ಕಾಯುತ್ತಿದ್ದ ಪಾಕಿಗಳು ಏಪ್ರಿಲ್ ಕೊನೆಕೊನೆಯಲ್ಲಿ ಕಾರ್ಗಿಲ್‌ನ, ಪೂರ್ವ ಬಟಾಲಿಕ್‌ನ ಮತ್ತು ದ್ರಾಸ್‌ನ ಉತ್ತರ ದಿಕ್ಕಿನ ಬೆಟ್ಟಗಳನ್ನು ಏರತೊಡಗಿದರು. ಗಟ್ಟಿಮುಟ್ಟಾದ ಬಂಕರ್‌ಗಳನ್ನು ಕಟ್ಟಿಕೊಂಡರು. ನಮ್ಮವರೇ ಬಿಟ್ಟುಬಂದಿದ್ದ ಬಂಕರುಗಳು ಅವರ ಸಹಾಯಕ್ಕೆ ಬಂದವು. ಮೇ ಆರಂಭದ ವೇಳೆಗೆ ಅವರ ತಯಾರಿ ಸಂಪೂರ್ಣಗೊಂಡಿತ್ತು. ಮೇ ಕೊನೆಯವರೆಗೂ ಮಂಜು ಕರಗದು, ಜೋಜಿ ಲಾ ತೆರೆದುಕೊಳ್ಳದು ಅಂದುಕೊಂಡಿದ್ದ ಪಾಕಿಗಳ ಲೆಕ್ಕಾಚಾರ ತಿರುವುಮುರುಗಾಯಿತು. ಆ ವರ್ಷ ಮೇ ಆರಂಭದಲ್ಲಿಯೇ ಮಂಜು ಕರಗಿ ಜೋಜಿ ಲಾ ತೆರೆದುಕೊಂಡಿತು. ಪಾಕ್ ಸೇನೆ ಬೆಟ್ಟದ ಮೇಲಿರುವ ಸುದ್ದಿ ದನಗಾಹಿಗಳ ಮೂಲಕ ಭಾರತೀಯ ಸೇನೆಯ ಕಿವಿ ತಲುಪಿತು. ಪುಂಡ ಪಾಕಿಗಳು ಏನು ಮಾಡುತ್ತಿದ್ದಾರೆಂದು ಅರಿತ ಸೇನೆ, ವರದಿ ತರಲೆಂದು ಸೌರಭ್ ಕಾಲಿಯಾ ನೇತೃತ್ವದಲ್ಲಿ ಐವರನ್ನು ಗುಡ್ಡ ಹತ್ತಿಸಿತು. ಮುನ್ಸೂಚನೆ ಇಲ್ಲದೇ ಶತ್ರು ಪಡೆಯನ್ನು ಅಂದಾಜಿಸದೇ ನಮ್ಮವರು ಗುಡ್ಡ ಹತ್ತಿದರು. ಮತೋನ್ಮತ್ತ ಪಾಕಿಗಳ ಕೈಗೆ ಸಿಕ್ಕಿಬಿದ್ದರು. ಬಂಧಿತ ಸೈನಿಕರನ್ನು ಪೀಡಿಸಲಾಯಿತು, ಹಿಂಸಿಸಲಾಯಿತು, ಕೊನೆಗೆ ತುಂಡುತುಂಡಾದ ಶವವನ್ನು ಸೇನೆಗೆ ಹಸ್ತಾಂತರಿಸಲಾಯಿತು. ಅಲ್ಲಿಗೆ, ಯುದ್ಧ ಸ್ಥಿತಿ ನಿರ್ಮಾಗೊಂಡುಬಿಟ್ಟಿತು. ಬೆಚ್ಚಿಬಿತ್ತು ವಾಜಪೇಯಿ ಸರ್ಕಾರ. ಗಟ್ಟಿಗ ಜಾರ್ಜ್ ಕೂಡಾ ಮೆತ್ತಗಾಗಿಬಿಟ್ಟರು. ಲಲಿತ ಕವಿ ವಾಜಪೇಯಿಯವರು ಬಂಡಾಯಗಾರರಾದರು. ಉಕ್ಕಿನ ಮನುಷ್ಯ ಅಡ್ವಾಣಿ ತುಕ್ಕು ಹಿಡಿದ ಬೇಹುಗಾರ ವ್ಯವಸ್ಥೆಯ ಬಗ್ಗೆ ಗಾಬರಿಗೊಂಡರು. ಸೈನ್ಯದ ಪ್ರಮುಖರೊಂದಿಗೆ ಮಾತುಕತೆ ಶುರುವಾಯ್ತು. “ಆಪರೇಷನ್ ವಿಜಯ” ಶುರುವಾಯ್ತು. ಸೈನ್ಯದ ಮಿಷನರಿಗಳೆಲ್ಲ ಚುರುಕಾದವು. ಕೆಲವು ಗಂಟೆಗಳಲ್ಲಿ ಪಾಕಿಗಳನ್ನು ಓಡಿಸುತ್ತೇವೆಂದಿತು ಸರ್ಕಾರ. ವಿರೋಧ ಪಕ್ಷದವರು ಸರ್ಕಾರದ ವೈಫಲ್ಯವಿದೆಂದು ಜರಿದರು. ಪಾಕಿಸ್ತಾನಕ್ಕೆ ಕಾಶ್ಮೀರ ಕೊಡುವುದರಲ್ಲಿ ತಪ್ಪೇನಿದೆ? ಸಮಸ್ಯೆಗೆ ಪರಿಹಾರ ದೊರಕಿಬಿಡುತ್ತಲ್ಲ ಎಂದರು ಒಂದಷ್ಟು ಬುದ್ಧಿಜೀವಿಗಳು! ಆದರೆ ಗಡಿತುದಿಯಲ್ಲಿ ಕಾಯುತ್ತಿದ್ದ ಸೈನಿಕ ಮಾತ್ರ ಫಡಫಡಿಸುತ್ತಿದ್ದ. ಅವನ ಬಳಿ ಮಂಜಿನ ಬೂಟುಗಳು, ಕನ್ನಡಕಗಳು, ಕೊನೆಗೆ ಬೆಚ್ಚನೆಯ ಬಟ್ಟೆಗಳೂ ಇರಲಿಲ್ಲ. ಇವ್ಯಾವುವೂ ಬೇಡ, ಒಂದಷ್ಟು ಮದ್ದು ಗುಂಡು, ಶಸ್ತ್ರಾಸ್ತ್ರ ಇದ್ದರೆ ಕೊಡಿ ಸಾಕು ಎಂದರು ಸೈನಿಕರು. ಇಪ್ಪತ್ತರೆರಡರ ತರುಣ ಮನೋಜ್ ಕುಮಾರ್ ಪಾಂಡೆ ರಕ್ತದ ಸಾಮರ್ಥ್ಯ ತೋರುವ ಮುನ್ನ ಮೃತ್ಯು ಬಂದರೆ, ಆ ಮೃತ್ಯುವನ್ನೇ ಕೊಂದುಬಿಡುತ್ತೇನೆಎಂದು ತನ್ನ ಡೈರಿಯಲ್ಲಿ ಬರೆದುಕೊಂಡಿದ್ದ. ಅಂತೆಯೇ ರಕ್ತದ ಶಕ್ತಿ ಸಾಬೀತುಪಡಿಸಿಯೇ ಪ್ರಾಣ ಕಳಕೊಂಡಿದ್ದ. ಅವನಿಗೆ ಪರಮವೀರ ಚಕ್ರವನ್ನು ಮರಣೋತ್ತರವಾಗಿ ಕೊಡಲಾಯ್ತು. ಒಂದೇ- ಎರಡೇ.. ದೇಹಕ್ಕಾದ ಗಾಯಗಳನ್ನು ಬದಿಗಿಟ್ಟು ರಾಷ್ಟ್ರದ ಗಾಯಕ್ಕೆ ಮುಲಾಮು ಹಚ್ಚಿದ ಪರಮ ವೀರರು ಇವರು. ನಾವು 524 ಸೈನಿಕರನ್ನು, ಅಧಿಕಾರಿಗಳನ್ನು ಕಳೆದುಕೊಂಡೆವು. ಅವರಲ್ಲಿ 22 ರಿಂದ 40ರೊಳಗಿನ ತರುಣರೇ ಹೆಚ್ಚು. 1363 ಜನ ಗಾಯಗೊಂಡರು. ಪಾಕಿಸ್ತಾನದ ದಿಕ್ಕಿನಲ್ಲಿ 696 ಜನ ಶವವಾದರು. ಸಾಯುವುದಕ್ಕೆ ಹೆದರಿದ ಉಳಿದವರು ಓಡಿಹೋದರು. ಯುದ್ಧದ ಹೊತ್ತಲ್ಲಿ ಜಾರ್ಜ್ ಯುದ್ಧದ ಬೆಟ್ಟಗಳ ಬುಡಕ್ಕೆ ಹೋಗಿಬಂದರು. ಸೈನಿಕರ ಆತ್ಮಸ್ಥೈರ್ಯ ವೃದ್ಧಿಯಾಯ್ತು. ಅತ್ತ ಪ್ರಮೋದ್ ಮಹಾಜನ್ ಮಾಧ್ಯಮಗಳೊಂದಿಗೆ ಮಾತನಾಡಿ ಯುದ್ಧದ ವರದಿಗಳನ್ನು ನೇರವಾಗಿ ಜನರಿಗೆ ತಲುಪಿಸಲು ಅವಕಾಶ ಮಾಡಿಕೊಟ್ಟರು. ಹೀಗಾಗಿಯೇ ವಿಕ್ರಮ್ ಬಾತ್ರಾರಂತಹ ಕೆಲವರು ಹೀರೋಗಳಾಗಲು ಸಾಧ್ಯವಾಗಿದ್ದು. ವಾಜಪೇಯಿಯವರು ಅಮೆರಿಕಾದೆದುರು ನಿಂತು ಪಾಕಿಸ್ತಾನಕ್ಕೆ ಬುದ್ಧಿ ನೀವೇ ಕಲಿಸುತ್ತೀರೋ, ನಾವೇ ಸರಿಯಾಗಿ ಕಲಿಸಬೇಕೋ?ಎಂದು ಗುಡುಗಿದರು. ನವಾಜ್ ಶರೀಫನೊಂದಿಗೆ ಮಾತು ಸಾಧ್ಯವೇ ಇಲ್ಲವೆಂದಿತು ಭಾರತ. ಅಷ್ಟರೊಳಗೆ ಸೋತು ಸುಣ್ಣವಾಗಿದ್ದ ಪಾಕ್ ಶರಣಾಗತವಾಯಿತು. ತನ್ನ ಸೈನಿಕರ ಶವ ಸ್ವೀಕರಿಸುವುದಿಲ್ಲವೆಂದಿತು. ಸ್ವೀಕಾರ ಮಾಡಿದರೆ ಒಪ್ಪಂದಗಳನ್ನು ಮುರಿದು ದಾಳಿ ಮಾಡಿದ್ದು ತಾನೇ ಎಂದು ಒಪ್ಪಿಕೊಳ್ಳಬೇಕಾದ ಪ್ರಮೇಯ ಬರುತ್ತದಲ್ಲವೆಂಬ ಹೆದರಿಕೆ! ಅನಾಥವಾದ ಸೈನಿಕ ಶವಗಳಿಗೆ ನಮ್ಮ ಸೈನಿಕರೇ ಅಂತ್ಯ ಸಂಸ್ಕಾರ ಮಾಡಿದರು! ಇತ್ತ ಭಾರತದ ಗೆಲುವು ಭಾರತದ ಆಂತರಿಕ ಶಕ್ತಿಯನ್ನು ವೃದ್ಧಿಸಿತು. ಷೇರು ಮಾರುಕಟ್ಟೆಯಲ್ಲಿ ಬೆಳವಣಿಗೆ ದಾಖಲಾಯ್ತು. ಆನ್ಯ ದೇಶದ ಕುರಿತಂತೆ ಧನಾತ್ಮಕವಾಗಿ ಚಿಂತಿಸಲಾರಂಭಿಸಿದರು. ಏಕಾಏಕಿ ಭಾರತ ಹೊಳೆಯಲಾರಂಭಿಸಿತು. ಅತ್ತ ಪಾಕ್ ಕುಗ್ಗಿಹೋಯ್ತು. ಎಲ್ಲ ಯುದ್ಧಗಳಲ್ಲಿ ಆದಂತೆ ಈ ಯುದ್ಧದಲ್ಲೂ ಬಾಲ ತುಳಿದ ನಾಯಿಯಂತೆ ಗುರ್ ಎನ್ನುತ್ತ ಓಡಿತು. ಒಂದೆಡೆ ಭಾರತವನ್ನು ಎದುರು ಹಾಕಿಕೊಂಡಿದ್ದಕ್ಕೆ ಅಲ್ಲಿನ ಪತ್ರಿಕೆಗಳು ಸರ್ಕಾರವನ್ನು ಹೀಗಳೆದರೆ, ಮತ್ತೊಂದೆಡೆ, ಆಯಕಟ್ಟಿನ ಜಾಗದಲ್ಲಿದ್ದೂ ಸೋತಿದ್ದಕ್ಕೆ ಜನ ಉರಿದುಬಿದ್ದರು. ಸಾಕಷ್ಟು ಹೆಸರುಗಳಿಸಿದ್ದ ನವಾಜ್ ಶರೀಫ್ ಏಕಾಏಕಿ ಯಾರಿಗೂ ಬೇಡವಾದ. ಇದರ ಲಾಭ ಮುಷರ್ರಫ್ ಗೆ ದಕ್ಕಿತು. ನವಾಜ್ ಷರೀಫರನ್ನು ಕೆಳಗಿಳಿಸಿ ತಾನೇ ಅಧ್ಯಕ್ಷನಾದ. ಪಾಕಿಸ್ತಾನ 50 ವರ್ಷಗಳಷ್ಟು ಹಿಂದೆ ಹೋಗಿ ನಿಂತಿತು. ಈಗಂತು ಅದರ ಸ್ಥಿತಿ ಹೇಳತೀರದು ಆದರೆ ಭಾರತ ವಿಶ್ವದೆತ್ತರಕ್ಕೆ ಬೆಳದಿದೆ ಅದಕ್ಕೆ ಕಾರಣ ನಮ್ಮೊಳಗಿನ ಕ್ಷಾತ್ರತೇಜ ಹಾಗೂ ಆ ನಮ್ಮ ವೀರ ಸೈನಿಕರು. ನಾಯಕ್ ಅಂಗ್ರೇಜ್ ಸಿಂಗ್ ಗುಂಡೇಟು ತಿಂದು ಮಲಗಿದ್ದ. ಪ್ರಧಾನಿ ವಾಜಪೇಯಿ ನೋಡಹೋದಾಗ ಹೇಳಿದ್ದ, ಭಾರತದ ಸೈನಿಕರು ಎದೆಗೆ ಗುಂಡು ತಿಂದಿದ್ದಾರೆ, ಬೆನ್ನಿಗಲ್ಲ. ದಯವಿಟ್ಟು ಎಲ್ಲರಿಗೂ ಇದು ಕೇಳುವಂತೆ ಹೇಳಿ ಅಂತ. ಈಗಲಾದರೂ ಅವರು ಹೇಳಿದ ಮಾತು ನಮ್ಮೆದೆಗಿಳಿದು ನಾವೂ ಸೈನಿಕರಾಗಬೇಕಲ್ಲ… ಅದು ಯಾವಾಗ ಎಂಬುದೇ ಪ್ರಶ್ನೆ? ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಕಾರ್ಗಿಲ್ ವಿಜಯ್ ದಿವಸ್: ತ್ಯಾಗದ ಕಥೆ, ಗೆಲುವಿನ ಸಂಕೇತ PMMVY Scheme: ಕೇಂದ್ರದಿಂದ ಗರ್ಭಿಣಿಯರಿಗೆ ಸಿಗಲಿದೆ 6 ಸಾವಿರ ರೂ.! ಹೇಗೆ ಅರ್ಜಿ ಸಲ್ಲಿಸಬೇಕು?