Importance of consuming lemon in summer: A scientific analysisಬೇಸಿಗೆಯಲ್ಲಿ ನಿಂಬೆಹಣ್ಣು ಸೇವನೆ ಮಹತ್ವ

ಬೇಸಿಗೆಯ ತೀವ್ರ ಉಷ್ಣತೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ. ಈ ಸಂದರ್ಭದಲ್ಲಿ ನೈಸರ್ಗಿಕ ತಂಪು ಮತ್ತು ತಾಜಾತನವನ್ನು ನೀಡುವ ಆಹಾರ ಪದಾರ್ಥಗಳಲ್ಲಿ ನಿಂಬೆಹಣ್ಣಿಗೆ ವಿಶಿಷ್ಟ ಸ್ಥಾನವಿದೆ. ಸಾಮಾನ್ಯವಾಗಿ ಅಡುಗೆ ಮತ್ತು ಪಾನೀಯಗಳಲ್ಲಿ ಬಳಸುವ ನಿಂಬೆಹಣ್ಣು ಕೇವಲ ರುಚಿಗಾಗಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಬಹಳ ಮಹತ್ವದ್ದಾಗಿದೆ. ನಿಂಬೆಹಣ್ಣಿನಲ್ಲಿ ವಿಟಮಿನ್            C ಸಿಟ್ರಿಕ್ ಆಮ್ಲ, ಫ್ಲೇವನಾಯ್ಡ್ಸ್, ಪೊಟ್ಯಾಸಿಯಂ ಮತ್ತು ಪೆಕ್ಟಿನ್‌ನಂತಹ ಪೌಷ್ಟಿಕಾಂಶಗಳು ಸಮೃದ್ಧವಾಗಿವೆ. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆ ಮತ್ತು ದೇಹದ ಜೈವಿಕ ಕ್ರಿಯೆಗಳನ್ನು ಸಮತೋಲನಗೊಳಿಸಲು ಸಹಕಾರಿಯಾಗುತ್ತವೆ.

ನಿಂಬೆಹಣ್ಣಿನಲ್ಲಿರುವ ವಿಟಮಿನ್ C ಶಕ್ತಿಶಾಲಿ ಆ್ಯಂಟಿ-ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿ ಮೆಟಾಬಾಲಿಸಂ ಪ್ರಕ್ರಿಯೆಗಳಲ್ಲಿ ಉಂಟಾಗುವ ಫ್ರೀ ರಾಡಿಕಲ್‌ಗಳು ಕೋಶಗಳಿಗೆ ಹಾನಿ ಉಂಟುಮಾಡುವ ಸಾಧ್ಯತೆ ಹೊಂದಿವೆ. ವಿಟಮಿನ್ C ಮತ್ತು ಫ್ಲೇವನಾಯ್ಡ್ಸ್ ಈ ಫ್ರೀ ರಾಡಿಕಲ್‌ಗಳನ್ನು ನಿಷ್ಕ್ರಿಯಗೊಳಿಸಿ ಕೋಶ ಹಾನಿಯನ್ನು ಕಡಿಮೆ ಮಾಡುತ್ತವೆ. ಇದರಿಂದ ರೋಗನಿರೋಧಕ ವ್ಯವಸ್ಥೆ ಬಲವಾಗುತ್ತದೆ ಮತ್ತು ಸೋಂಕುಗಳ ವಿರುದ್ಧ ದೇಹದ ಪ್ರತಿರೋಧ ಶಕ್ತಿ ಹೆಚ್ಚುತ್ತದೆ. ಜೊತೆಗೆ, ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ಜೀರ್ಣರಸಗಳ ಸ್ರವಣೆಯನ್ನು ಉತ್ತೇಜಿಸಿ ಆಹಾರದ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಪೆಕ್ಟಿನ್ ಎಂಬ ದ್ರವ್ಯ ಫೈಬರ್ ಆಂತ್ರದ ಆರೋಗ್ಯವನ್ನು ಸುಧಾರಿಸಿ ಮಲಚಲನವಲನವನ್ನು ಸರಾಗಗೊಳಿಸಲು ಸಹಕಾರಿಯಾಗಿದೆ.

ಬೇಸಿಗೆಯಲ್ಲಿ ದೇಹದಿಂದ ಬೆವರು ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಮತ್ತು ಎಲೆಕ್ಟ್ರೋಲೈಟ್‌ಗಳು ಹೊರಹೋಗುತ್ತವೆ. ಇದರಿಂದ ದೇಹದಲ್ಲಿ ದೌರ್ಬಲ್ಯ, ತಲೆಸುತ್ತು ಮತ್ತು ಡಿಹೈಡ್ರೇಶನ್ ಉಂಟಾಗಬಹುದು. ನಿಂಬೆ ನೀರು ಅಥವಾ ನಿಂಬೆ ಸರಬತ್ತು ದೇಹದ ಜಲ ಸಮತೋಲನವನ್ನು ಕಾಪಾಡುವಲ್ಲಿ ಪರಿಣಾಮಕಾರಿ ಪಾನೀಯವಾಗಿದೆ. ನಿಂಬೆಹಣ್ಣಿನಲ್ಲಿರುವ ಪೊಟ್ಯಾಸಿಯಂ ಮತ್ತು ಉಪ್ಪಿನ ಸಂಯೋಜನೆ ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಇದರಿಂದ ಉಷ್ಣಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ ಮತ್ತು ದೇಹಕ್ಕೆ ತ್ವರಿತ ಶಕ್ತಿ ದೊರೆಯುತ್ತದೆ. ಜೊತೆಗೆ, ನಿಂಬೆಹಣ್ಣಿನ ಅಮ್ಲೀಯ ಸ್ವಭಾವ ಕೆಲವು ಹಾನಿಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುವ ಮೂಲಕ ಆಹಾರ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

ಬೇಸಿಗೆಯಲ್ಲಿ ನಿಂಬೆಹಣ್ಣಿನ ಬೇಡಿಕೆ ಹೆಚ್ಚುವುದರಿಂದ ಅದರ ಬೆಲೆ ಸಹ ಏರಿಕೆಯಾಗುತ್ತದೆ. ಆದ್ದರಿಂದ ಸರಿಯಾದ ಸಂರಕ್ಷಣಾ ವಿಧಾನಗಳನ್ನು ಅನುಸರಿಸುವುದು ಅಗತ್ಯವಾಗಿದೆ. ನಿಂಬೆಹಣ್ಣುಗಳನ್ನು ಫ್ರಿಜ್‌ನಲ್ಲಿ 4–8°C ತಾಪಮಾನದಲ್ಲಿ ಇಡುವುದರಿಂದ ಅವುಗಳ ತಾಜಾತನ ಹೆಚ್ಚು ದಿನಗಳವರೆಗೆ ಉಳಿಯುತ್ತದೆ. ನೀರಿನಲ್ಲಿ ಸಂಗ್ರಹಿಸುವುದು ಅಥವಾ ನಿಂಬೆ ರಸವನ್ನು ಐಸ್ ಟ್ರೇಗಳಲ್ಲಿ ಫ್ರೀಜ್ ಮಾಡುವುದೂ ಪರಿಣಾಮಕಾರಿ ವಿಧಾನಗಳಾಗಿವೆ.

ನೇರ ಸೂರ್ಯಪ್ರಕಾಶದಿಂದ ದೂರ ಇಡುವುದರಿಂದ ವಿಟಮಿನ್ ಅ ನ ಪೌಷ್ಟಿಕ ಮೌಲ್ಯವನ್ನು ಕಾಪಾಡಬಹುದು. ಒಟ್ಟಾರೆ, ನಿಂಬೆಹಣ್ಣು ಬೇಸಿಗೆಯಲ್ಲಿ ಆರೋಗ್ಯ, ತಾಜಾತನ ಮತ್ತು ಉಳಿತಾಯದ ಸಹಜ ಮೂಲವಾಗಿದೆ. ಸರಿಯಾದ ಬಳಕೆ ಮತ್ತು ಸಂರಕ್ಷಣೆಯ ಮೂಲಕ ಈ ಸಣ್ಣ ಹಣ್ಣಿನಿಂದ ಹೆಚ್ಚಿನ ಆರೋಗ್ಯ ಲಾಭಗಳನ್ನು ಪಡೆಯಬಹುದು.

ಲೇಖಕರು: ಪ್ರೊ. ವೀಣಾ ಆರ್. ತಿರ್ಲಾಪೂರ,

ಉಪನ್ಯಾಸಕರು, ಗೃಹ ವಿಜ್ಞಾನ ವಿಭಾಗ, ಕೆ.ಎಲ್.ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಗದಗ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *