Hiranyakashipu's father, Brahma's grandson, Kashyapa Sageಕಶ್ಯಪ ಮಹರ್ಷಿ

ಕಶ್ಯಪ ಮಹರ್ಷಿ ಬ್ರಹ್ಮನ ಮೊಮ್ಮಗ. ಅವರು ಮರೀಚಿಮಹರ್ಷಿಗಳ ಪುತ್ರರು ಬ್ರಹ್ಮನಿಂದಲೇ ಇವರು ಸೃಷ್ಟಿಕಾರ್ಯಕ್ಕಾಗಿ ಪ್ರಜಾಪತಿಸ್ಥಾನದಲ್ಲಿ ನಿಯುಕ್ತರಾದವ ಇನ್ನೊಬ್ಬ ಪ್ರಜಾಪತಿಯಾದ ದಕ್ಷಬ್ರಹ್ಮನಿಗೆ ಐವತ್ತು ಮಂದಿ ಪುತ್ರಿಯರಿದ್ದರು. ಅವರಲ್ಲಿ ಅದಿತಿ, ದಿತಿ, ದನು, ಕಾಲಾ, ದನಾಯು, ಸಿಂಹಿಕಾ, ಕ್ರೋಧಾ, ಪ್ರಾಧಾ, ವಿಶ್ವಾ, ವಿನತೆ, ಕಪಿಲಾ, ಮುನಿ ಮತ್ತು ಕದು ಎಂಬ ಹೆಸರಿನ ಹದಿಮೂರು ಮಂದಿ ಹೆಣ್ಣುಮಕ್ಕಳನ್ನು ಕಶ್ಯಪರಿಗೆ ವಿವಾಹಮಾಡಿಕೊಟ್ಟನು. ಇವರಿಂದಲೇ ಎಲ್ಲ ಬಗೆಯ ಸೃಷ್ಟಿಯೂ ಮುಂದುವರಿಯಿತು.

ಅದಿತಿಯಲ್ಲಿ ಎಲ್ಲ ದೇವತೆಗಳೂ ಜನಿಸಿದರು. ಸಾಕ್ಷಾತ್ ಶ್ರೀಮನ್ನಾರಾಯಣನೇ ವಾಮನಾವತಾರದಿಂದ ಅವಳ ಗರ್ಭದಲ್ಲಿ ಜನಿಸಿ, ಇಂದನಿಗೆ ತಮ್ಮನಾದನು. ಎರಡನೆಯವಳಾದ ದಿತಿಗೆ ಹಿರಣ್ಯಕಶಿಪುವೆಂಬ ಪುತ್ರನು ಜನಿಸಿದನು. ಇವನ ವಂಶದವರೇ ದೈತ್ಯರು, ದನುವೆಂಬ ಮೂರನೆಯ ಭಾರ್ಯೆಗೆ ವಿಪ್ರಚಿತ್ತಿಯೇ ಮೊದಲಾದ ಮೂವತ್ನಾಲ್ಕು ಮಕ್ಕಳು ಜನಿಸಿ, ದಾನವರೆಂದು ಪ್ರಸಿದ್ಧರಾದರು.

ಕಲಾ ಎಂಬ ನಾಲ್ಕನೆಯ ಭಾರ್ಯೆಯಲ್ಲಿ ಕಾಲಕೇಯರೆಂಬ ರಾಕ್ಷಸರು ಜನಿಸಿದರು. ದನಾಯು ಐದು ಅಸುರರನ್ನು ಮಕ್ಕಳನ್ನಾಗಿ ಪಡೆದಳು. ಸಿಂಹಿಕೆಯು ರಾಹುವೇ ಮುಂತಾದ ಮಕ್ಕಳನ್ನು ಪಡೆದಳು. ಕ್ರೋಧೆಯ ಮಕ್ಕಳು ರಾಕ್ಷಸಗಣದವರು. ಪ್ರಾಧಾ ಎಂಬುವವಳಿಗೆ ಗಂಧರ್ವರು ಪುತ್ರ-ಪುತ್ರಿಯರಾದರು. ವಿಶ್ವಾ ಎಂಬುವವಳ ವಂಶವು ಅಪ್ಸರೆಯರದಾಗಿದೆ.

ಅರುಣ ಮತ್ತು ಗರುಡರು ವಿನತೆಯ ಪುತ್ರರು, ಕಪಿಲಾ ಎಂಬವಳು ಬ್ರಾಹ್ಮಣರು ಮತ್ತು ಹಸುಗಳ ಉಗಮಕ್ಕೆ ಕಾರಣಳಾದಳು. ಮುನಿಯ ಮಕ್ಕಳೇ ಮೌನೇಯರು; ಇವರಲ್ಲಿ ನಾರದರು ಪ್ರಮುಖರು, ಕಡೆಯವಳಾದ ಕದ್ರುವು ಸರ್ಪಗಳ ಮಾತೆ. ಹೀಗೆ ಅನೇಕ ವಿಧವಾದ ಸೃಷ್ಟಿಯು ಕಶ್ಯಪರಿಂದ ಆರಂಭಗೊಂಡಿತು ಎಂದು ಮಹಾಭಾರತದಲ್ಲಿ ಬರುವ ಕಶ್ಯಪರ ವಂಶವರ್ಣನೆಯಿಂದ ತಿಳಿದುಬರುತ್ತದೆ.

ಮಾರ್ಕಂಡೇಯ ಪುರಾಣದಲ್ಲಿ ಕೆಲವು ಹೆಸರು, ವಿವರಣೆಗಳಲ್ಲಿ ವ್ಯತ್ಯಾಸವಿದೆ. ಖಸಾ ಎನ್ನುವವಳು ಯಕ್ಷರನ್ನು ಹಡೆದವಳೆಂದೂ ಇರಾ ಎನ್ನುವವಳು ಐರಾವತವೇ ಮುಂತಾದ ಗಜಜಾತಿಗಳಿಗೆ ಕಾರಣಳೆಂದೂ ತಾಮ್ರಾ ಎನ್ನುವವಳಿಗೆ ಶ್ವೇನಜಾತಿಯ ಗಿಡುಗ, ಭಾಸ, ಗಿಳಿ ಮುಂತಾದ ಪಕ್ಷಿಗಳು ಜನಿಸಿದವೆಂದೂ ಪ್ರಧಾಳಿಂದ ಜಲಜಂತುಗಳು ಉತ್ಪತ್ತಿಯಾದುವೆಂದೂ ಅಲ್ಲಿ ಹೇಳಿದೆ.

ವಿವರಗಳು ಏನೇ ಇರಲಿ, ಈ ಸ್ತ್ರೀಯರು ಆಯಾ ಪಾಣಿ ಅಥವಾ ಪಕ್ಷಿವರ್ಗವನ್ನೂ ವ್ಯಕ್ಷಾದಿಗಳನ್ನೂ ಅಕ್ಕರೆಯಿಂದ ಪೋಷಣೆ ಮಾಡಿ, ಅವು ಉಳಿದು ಬೆಳೆಯುವಂತೆ ಮಾಡಿದರೆಂದು ನಾವು ಊಹಿಸಬಹುದು, ಪ್ರಪಂಚದಲ್ಲಿರುವ ಸಮಸ್ತ ಜೀವರಾಶಿಗಳ ಪಾಲನೆ-ಪೋಷಣೆಗಳು ಕಶ್ಯಪರ ಮತ್ತು ಅವರ ಕುಟುಂಬದ ಜವಾಬ್ದಾರಿಯಾಗಿತ್ತು.

ಒಳ್ಳೆಯ ಮತ್ತು ಕೆಟ್ಟ ಜೀವಿಗಳೆಲ್ಲರಿಗೂ ಅವರು ಸಮಾನವಾದ ಪ್ರೀತಿ, ಸ್ಥಾನಗಳನ್ನು ನೀಡಿ ಬೆಳೆಸಿದ ಮಹಾಮಹಿಮರು, ಆದ್ದರಿಂದಲೇ ಪರಮಾತ್ಮನು ತನ್ನ ಮುಂದಿನ ಅವತಾರಗಳಿಗೂ ಆದಿತಿ-ಕಶ್ಯಪರೇ ತಾಯಿತಂದೆಯರಾಗಬೇಕೆಂದು ಬಯಸಿದನು. ಅವರೇ ಮುಂದೆ ಕೌಸಲೈ-ದಶರಥ ರಾಗಿ ಜನಿಸಿ, ಶ್ರೀರಾಮನಾಗಿ ಪರಮಾತ್ಮನ ಅವತಾರಕ್ಕೆ ಕಾರಣರಾದರು: ದೇವಕಿ-ವಸುದೇವರಾಗಿ ಕೃಷ್ಣನಿಗೆ ಮಾತಾ-ಪಿತೃಗಳಾದರು.

ಕಶ್ಯಪರ ತಪಃಶಕ್ತಿಯನ್ನು ಸಾರುವ ಅನೇಕ ಕಥೆಗಳಿವೆ. ಪರಶುರಾಮರು ಭೂಮಿಯನ್ನೆಲ್ಲ ಇಪ್ಪತ್ತೊಂದು ಬಾರಿ ಪ್ರದಕ್ಷಿಣೆ ಮಾಡಿ, ಕ್ಷತ್ರಿಯರೆಲ್ಲರನ್ನೂ ನಿರ್ನಾಮ ಮಾಡಿದ ನಂತರ ತಾವು ಜಯಿಸಿದ್ದ ಭೂಭಾಗವನ್ನೆಲ್ಲ ಕಶ್ಯಪರಿಗೆ ದಾನಮಾಡಿದರಂತೆ. ಆದ್ದರಿಂದಲೇ ಭೂಮಿಗೆ ‘ಕಾಶ್ಯಪೀ’ ಎಂಬ ಹೆಸರು ಬಂದಿತು. ಈ ವಿಷಯ ರಾಮಾಯಣದ ಬಾಲಕಾಂಡದಲ್ಲಿ ಬರುತ್ತದೆ.

ಗರುಡನು ತನ್ನ ತಾಯಿಯಾದ ವಿನತೆಯ ದಾಸ್ಯವನ್ನು ದೂರಮಾಡಲು ತನ್ನ ದೊಡ್ಡಮ್ಮ ಕದ್ರು ಮತ್ತು ಅವಳ ಮಕ್ಕಳಾದ ಸರ್ಪಗಳಿಗೆ ಅಮೃತವನ್ನು ತಂದುಕೊಡಲು ಒಪ್ಪಿ ಸ್ವರ್ಗಲೋಕಕ್ಕೆ ಪ್ರಯಾಣ ಮಾಡುತ್ತಿರುತ್ತಾನೆ. ಅವನು ದಾರಿಯಲ್ಲಿ ತಂದೆಯಾದ ಕಶ್ಯಪರನ್ನು ಭೇಟಿಮಾಡಿ ಅಮೃತವನ್ನು ತರಲು ಬೇಕಾದಷ್ಟು ಶಕ್ತಿಯನ್ನು ಕೊಡುವ ಆಹಾರಕ್ಕಾಗಿ ತಂದೆಯನ್ನು ಬೇಡುತ್ತಾನೆ. ಆಗ ಕಶ್ಯಪರು ಜನ್ಮಾಂತರದಿಂದ ವೈರಿಗಳಾಗಿದ್ದ ಆಮೆ, ಆನೆಗಳನ್ನು ತೋರಿಸಿ ಅವುಗಳನ್ನು ಭಕ್ಷಿಸುವಂತೆ ಹೇಳಿದರು. ಆವೆರಡೂ ಪೂರ್ವಜನ್ಮದಲ್ಲಿ ವಿಭಾವಸು-ಸುಪ್ರತೀಕರೆಂಬ ಸಹೋದರರಾಗಿದ್ದರು. ಅವರಿಬ್ಬರೂ ತಪಸ್ವಿಗಳಾಗಿದ್ದರೂ ಪರಸ್ಪರ ದ್ವೇಷಿಸುತ್ತಿದ್ದರು. ಆ ಕಾರಣದಿಂದ ಈಗ ತಾಮಸಜನ್ಮವನ್ನು ಪಡೆದು, ಈಗಲೂ ಹಿಂದಿನ ವೈರದಿಂದ ಪರಸ್ಪರ ಹೋರಾಡುತ್ತ, ಅವುಗಳಿದ್ದ ಸರೋವರಪ್ರದೇಶವನ್ನು ದೂಷಿತಗೊಳಿಸುತ್ತಿದ್ದವು. ಗರುಡನು ಅವುಗಳನ್ನು ಭಕ್ಷಿಸಿ ಆ ಪ್ರದೇಶವನ್ನು ಸುಖಮಯವನ್ನಾಗಿ ಮಾಡಿದನು.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-೧

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *