PM Jan Dhan Yojana: Accident insurance of Rs 2 lakh along with loan facility of up to Rs 10 thousand loanPM ಜನಧನ್ ಯೋಜನೆ

ದೇಶದ ಪ್ರತಿಯೊಬ್ಬ ನಾಗರಿಕನಿಗೂ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನಧನ್ ಯೋಜನೆ (PMJDY) ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾಗಿದ್ದ ಕೋಟ್ಯಂತರ ಜನರನ್ನು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸುವ ಮೂಲಕ ಆರ್ಥಿಕ ಸಬಲೀಕರಣಕ್ಕೆ ಈ ಯೋಜನೆ ಮಹತ್ವದ ಕೊಡುಗೆ ನೀಡಿದೆ.

“ಬ್ಯಾಂಕಿಂಗ್ ಸೌಲಭ್ಯವಿಲ್ಲದವರಿಗೆ ಬ್ಯಾಂಕಿಂಗ್, ಅಸುರಕ್ಷಿತರಿಗೆ ಭದ್ರತೆ ಮತ್ತು ಹಣಕಾಸಿನ ಸೇವೆಗಳಿಂದ ವಂಚಿತರಾದವರಿಗೆ ನೆರವು” ಎಂಬ ಉದ್ದೇಶದೊಂದಿಗೆ ಆರಂಭವಾದ ಈ ಯೋಜನೆ, ದೇಶದ ಪ್ರತಿಯೊಂದು ಕುಟುಂಬಕ್ಕೂ ಮೂಲಭೂತ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಜನಧನ್ ಯೋಜನೆಯ ಪ್ರಮುಖ ಪ್ರಯೋಜನಗಳೇನು..?

ಜನಧನ್ ಯೋಜನೆಯಡಿ ತೆರೆಯುವ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯವಿಲ್ಲ. ಖಾತೆದಾರರಿಗೆ ಉಚಿತ RuPay ಡೆಬಿಟ್ ಕಾರ್ಡ್, ಅಪಘಾತ ವಿಮೆ, ಓವರ್‌ಡ್ರಾಫ್ಟ್ ಸೌಲಭ್ಯ ಸೇರಿದಂತೆ ಹಲವು ಆರ್ಥಿಕ ಸೌಲಭ್ಯಗಳು ದೊರೆಯುತ್ತವೆ. ಜೊತೆಗೆ ವಿವಿಧ ಕೇಂದ್ರ ಸರ್ಕಾರದ ಯೋಜನೆಗಳ ಲಾಭವನ್ನು ನೇರವಾಗಿ ಖಾತೆಗೆ ಪಡೆಯುವ ಅವಕಾಶವೂ ಲಭ್ಯವಿದೆ.

ಸಾಮಾನ್ಯ ಉಳಿತಾಯ ಖಾತೆ ಸೌಲಭ್ಯ

ಭಾರತದ ಯಾವುದೇ ನಾಗರಿಕರು ಜನಧನ್ ಯೋಜನೆಯಡಿ ಮೂಲ ಉಳಿತಾಯ ಬ್ಯಾಂಕ್ ಖಾತೆ ತೆರೆಯಬಹುದು. ಈ ಖಾತೆಗೆ ಕನಿಷ್ಠ ಹಣವನ್ನು ಕಾಯ್ದುಕೊಳ್ಳುವ ಅಗತ್ಯವಿಲ್ಲ. ಬ್ಯಾಂಕ್ ಶಾಖೆ, ಎಟಿಎಂ ಹಾಗೂ ಬ್ಯಾಂಕಿಂಗ್ ಪ್ರತಿನಿಧಿಗಳ ಮೂಲಕ ಹಣ ಜಮಾ ಮತ್ತು ಹಣ ಹಿಂಪಡೆಯುವ ಸೌಲಭ್ಯವನ್ನು ಬಳಸಬಹುದು.

ದಾಖಲೆಗಳಿಲ್ಲದವರಿಗೂ ‘ಸಣ್ಣ ಖಾತೆ

ಅಗತ್ಯ ದಾಖಲೆಗಳ ಕೊರತೆಯಿರುವವರು ‘ಸಣ್ಣ ಖಾತೆ’ ಅಥವಾ ‘ಚೋಟಾ ಖಾತಾ’ ತೆರೆಯುವ ಅವಕಾಶವನ್ನು ಪಡೆಯಬಹುದು. ಈ ಖಾತೆಗಳು ಆರಂಭದಲ್ಲಿ 12 ತಿಂಗಳ ಅವಧಿಗೆ ಮಾನ್ಯವಾಗಿದ್ದು, ನಂತರ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಅವಧಿಯನ್ನು ವಿಸ್ತರಿಸಬಹುದು.

2 ಲಕ್ಷ ರೂ. ಅಪಘಾತ ವಿಮೆ

ಜನಧನ್ ಖಾತೆದಾರರಿಗೆ ಉಚಿತವಾಗಿ RuPay ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್‌ನೊಂದಿಗೆ 2 ಲಕ್ಷ ರೂ.ವರೆಗೆ ಅಪಘಾತ ವಿಮೆ ಸೌಲಭ್ಯ ದೊರೆಯುತ್ತದೆ. 2018ರ ಆಗಸ್ಟ್ 28ರ ಮೊದಲು ತೆರೆಯಲಾದ ಖಾತೆಗಳಿಗೆ 1 ಲಕ್ಷ ರೂ. ವಿಮೆ ಅನ್ವಯವಾಗುತ್ತದೆ.

10 ಸಾವಿರ ರೂ.ವರೆಗೆ ಓವರ್‌ಡ್ರಾಫ್ಟ್

ಖಾತೆದಾರರು ಅಗತ್ಯ ಸಂದರ್ಭದಲ್ಲಿ 10,000 ರೂ.ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯ ಪಡೆಯಬಹುದು. ತುರ್ತು ಆರ್ಥಿಕ ಅಗತ್ಯಗಳನ್ನು ಪೂರೈಸಲು ಈ ವ್ಯವಸ್ಥೆ ನೆರವಾಗುತ್ತದೆ. ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಲು ‘ಬ್ಯಾಂಕ್ ಮಿತ್ರ’ ಅಥವಾ ಬಿಸಿನೆಸ್ ಕರೆಸ್ಪಾಂಡೆಂಟ್‌ಗಳನ್ನು ನೇಮಿಸಲಾಗಿದೆ. ಇವರು ಹಣ ಜಮಾ, ಹಣ ಹಿಂಪಡೆದು ಕೊಡುವುದು, ಖಾತೆ ವಿವರ ನೀಡುವುದು ಸೇರಿದಂತೆ ಹಲವು ಬ್ಯಾಂಕಿಂಗ್ ಸೇವೆಗಳನ್ನು ಜನರಿಗೆ ಒದಗಿಸುತ್ತಾರೆ.

ಇತರ ಸರ್ಕಾರಿ ಯೋಜನೆಗಳ ಲಾಭ

ಜನಧನ್ ಖಾತೆ ಹೊಂದಿರುವವರು ನೇರ ಲಾಭ ವರ್ಗಾವಣೆ (DBT), ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY), ಅಟಲ್ ಪಿಂಚಣಿ ಯೋಜನೆ (APY) ಹಾಗೂ ಮುದ್ರಾ ಯೋಜನೆ ಸೇರಿದಂತೆ ಹಲವು ಯೋಜನೆಗಳ ಪ್ರಯೋಜನ ಪಡೆಯಲು ಅರ್ಹರಾಗುತ್ತಾರೆ.

ಜನಧನ್ ಖಾತೆ ತೆರೆಯುವುದು ಹೇಗೆ?

ಜನಧನ್ ಖಾತೆ ತೆರೆಯಲು ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. 10 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ನಾಗರಿಕರು ಈ ಖಾತೆ ತೆರೆಯಲು ಅರ್ಹರಾಗಿದ್ದಾರೆ.

ಆಧಾರ್ ಕಾರ್ಡ್ ಹೊಂದಿರುವವರು ಅದನ್ನೇ ಗುರುತು, ವಯಸ್ಸು ಹಾಗೂ ವಿಳಾಸ ಪುರಾವೆಯಾಗಿ ಸಲ್ಲಿಸಿ ಖಾತೆ ತೆರೆಯಬಹುದು. ವಿಳಾಸ ಬದಲಾಗಿದ್ದರೆ ಹೊಸ ವಿಳಾಸದ ಸ್ವಯಂ ದೃಢೀಕೃತ ಪ್ರತಿಯನ್ನು ನೀಡಿದರೆ ಸಾಕಾಗುತ್ತದೆ.

ಅರ್ಹರು ಯಾರು..?

  1. ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು.
  2. ಕನಿಷ್ಠ 10 ವರ್ಷ ವಯಸ್ಸು ಪೂರ್ಣಗೊಂಡಿರಬೇಕು.
  3. ಈ ಮೊದಲು ಯಾವುದೇ ಸಾಮಾನ್ಯ ಬ್ಯಾಂಕ್ ಖಾತೆ ಹೊಂದಿರಬಾರದು.

ಅಗತ್ಯ ದಾಖಲೆಗಳು

  1. ಆಧಾರ್ ಕಾರ್ಡ್
  2. ಮತದಾರರ ಗುರುತಿನ ಚೀಟಿ / ಪ್ಯಾನ್ ಕಾರ್ಡ್ / ಪಡಿತರ ಚೀಟಿ
  3. ವಿಳಾಸ ಪುರಾವೆ (ಪಾಸ್ಪೋರ್ಟ್, ಚಾಲನಾ ಪರವಾನಗಿ, ವಿದ್ಯುತ್ ಅಥವಾ ನೀರಿನ ಬಿಲ್)
  4. ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ

ಭರ್ತಿ ಮಾಡಿದ ಜನಧನ್ ಖಾತೆ ಅರ್ಜಿ ನಮೂನೆ

ದೇಶದ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸಿ ಆರ್ಥಿಕ ಭದ್ರತೆ ಒದಗಿಸುವಲ್ಲಿ ಪ್ರಧಾನ ಮಂತ್ರಿ ಜನಧನ್ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ. ಶೂನ್ಯ ಬ್ಯಾಲೆನ್ಸ್ ಖಾತೆ, ವಿಮೆ ಹಾಗೂ ಸರ್ಕಾರಿ ಸೌಲಭ್ಯಗಳ ನೇರ ವರ್ಗಾವಣೆಯಿಂದ ಈ ಯೋಜನೆ ಕೋಟ್ಯಂತರ ಜನರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *