ಬೆಂಗಳೂರು, ಜೂನ್ 06: ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಕರ್ನಾಟಕ ಮತ್ತು ಕೇರಳ ವಲಯದ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ವತಿಯಿಂದ ಸಿಆರ್‌ಪಿಎಫ್ ವಲಯದ ಅಡಿಯಲ್ಲಿ ಬರುವ ಎಲ್ಲಾ ಘಟಕಗಳಲ್ಲಿ ಸಸಿ ನೆಡುವ ಅಭಿಯಾನವನ್ನು ಆಯೋಜಿಸಲಾಗಿತ್ತು. ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಅಭಿಯಾನದಲ್ಲಿ ಬೆಂಗಳೂರಿನ ರೇಂಜ್, ಗ್ರೂಪ್ ಸೆಂಟರ್, 240 (ಎಂ) ಬೆಟಾಲಿಯನ್, 247 ಬೆಟಾಲಿಯನ್, ಡಿ/97 ಬೆಟಾಲಿಯನ್, ಸಿಐಟಿ (CIT) ಬೆಂಗಳೂರು ಮತ್ತು ಸಿಆರ್‌ಪಿಎಫ್ (CRPF) ಕ್ಯಾಂಪಸ್‌ನಲ್ಲಿರುವ ಇತರ ಎಲ್ಲಾ ಸಂಸ್ಥೆಗಳಲ್ಲಿ ಏಕಕಾಲದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಎರಡು ಎನ್‌ಜಿಒ ಸಂಸ್ಥೆಗಳು ಭಾಗವಹಿಸಿದ್ದವು: 1. ಹಸಿರೇ ಉಸಿರು ಸಂಸ್ಥೆಯು ಕರ್ನಾಟಕ ಮೂಲದ ಪರಿಸರ ಸಂಘಟನೆಯಾಗಿದ್ದು, ಸಸಿ ನೆಡುವುದು, ಹಸಿರೀಕರಣ ಹೆಚ್ಚಿಸುವುದು, ಜೀವವೈವಿಧ್ಯ ಸಂರಕ್ಷಣೆ ಮತ್ತು ಪರಿಸರ ಜಾಗೃತಿಯನ್ನು ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. 2. ಜೀವನಮುಕ್ತಿ ಫೌಂಡೇಶನ್ ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ ರಕ್ಷಣೆ, ಬಡತನ ನಿರ್ಮೂಲನೆ ಮತ್ತು ಸಮುದಾಯ ಕಲ್ಯಾಣದ ಮೇಲೆ ಕೇಂದ್ರೀಕರಿಸುವ ಲಾಭರಹಿತ ಸಂಸ್ಥೆಯಾಗಿದ್ದು, ಸುಸ್ಥಿರ ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಇದು ಪರಿಸರ ಸಂರಕ್ಷಣೆ ಮತ್ತು ಹಸಿರು ಭವಿಷ್ಯದ ಕಡೆಗೆ ಪಡೆಯ ಬದ್ಧತೆಯನ್ನು ಒತ್ತಿಹೇಳಿದೆ. ಗೃಹ ಸಚಿವಾಲಯದ ಮಾರ್ಗದರ್ಶನದಲ್ಲಿ ಸಿಆರ್‌ಪಿಎಫ್ ದೇಶಾದ್ಯಂತ ಕೈಗೊಂಡಿರುವ ಈ ಅಭಿಯಾನದ ಭಾಗವಾಗಿ ಸಾವಿರಾರು ಸಸಿಗಳನ್ನು ನೆಡಲಾಯಿತು. ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಮತ್ತು ಕೇರಳ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ವಿಪುಲ್ ಕುಮಾರ್, ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದ್ದು, ಮುಂದಿನ ಪೀಳಿಗೆಗಾಗಿ ಪ್ರಕೃತಿ ಉಳಿಸಲು ಪ್ರತಿಯೊಬ್ಬ ಸಿಬ್ಬಂದಿಯೂ ಸಕ್ರಿಯವಾಗಿ ಸಸಿ ನೆಡಬೇಕೆಂದು ಕರೆ ನೀಡಿದರು. ಹಸಿರೀಕರಣವನ್ನು ಹೆಚ್ಚಿಸುವ ಮತ್ತು ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಹೇಳಿದರು. ಕರ್ನಾಟಕ ಮತ್ತು ಕೇರಳ ಸೆಕ್ಟರ್ ಸಿಆರ್‌ಪಿಎಫ್ ಪರಿಸರ ಸುಸ್ಥಿರತೆಗೆ ಬದ್ಧವಾಗಿದ್ದು, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಪರಿಸರ ಸಮತೋಲನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂತಹ ಉಪಕ್ರಮಗಳನ್ನು ಮುಂದುವರಿಸಲಿದೆ ಎಂದರು. ಅಭಿಯಾನದಲ್ಲಿ ಎಲ್ಲಾ ಅಧಿಕಾರಿಗಳು, ಅಧೀನ ಅಧಿಕಾರಿಗಳು, ಇತರ ಶ್ರೇಣಿಯ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರೊಂದಿಗೆ ಪಾಲ್ಗೊಂಡಿದ್ದರು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಡಿಸೆಂಬರ್ 2026ರ ವೇಳೆಗೆ 75 ಲಕ್ಷ ಮನೆಗಳಿಗೆ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆ ಗುರಿ: ಜೋಶಿ ಎಲುಬು ಕೊರೆಯುವ ಚಳಿಯಲ್ಲಿ 2 ಗುಂಡು ತಿಂದು, ಸಾವಿಗೆ ಸವಾಲು ಹಾಕಿ ಉಗ್ರನ ಎದೆ ಸೀಳಿದ ವೀರ ಸುಂದರಂ