ನವದೆಹಲಿ, ಜೂನ್ 05: ‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ’ಯು ಕೇವಲ 2 ವರ್ಷಗಳಲ್ಲಿ ಈಗಾಗಲೇ 40 ಲಕ್ಷ ಫಲಾನುಭವಿ ಕುಟುಂಬಗಳ ಮೈಲಿಗಲ್ಲನ್ನು ದಾಟಿದೆ. 2026 ರ ಡಿಸೆಂಬರ್ ಅಂತ್ಯದ ವೇಳೆಗೆ ನಾವು 75 ಲಕ್ಷ ಕುಟುಂಬಗಳ ಸಂಖ್ಯೆಯನ್ನು ದಾಟುವ ಭರವಸೆ ಇದೆ ಎಂದು ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ‘ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯ ಎರಡು ವರ್ಷಗಳು: 1 ಕೋಟಿ ಮನೆಗಳ ಮೇಲ್ಛಾವಣಿಗೆ ಸೌರಶಕ್ತಿ ವಿಸ್ತರಣೆʼ ಕಾರ್ಯಕ್ರಮದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಜನೆಯ ಅನುಷ್ಠಾನವನ್ನು ವೇಗಗೊಳಿಸಲು, ವಿಶೇಷವಾಗಿ ಸೌಲಭ್ಯ ವಂಚಿತ ಮನೆಗಳಿಗೆ ತಲುಪಿಸಲು ‘ಯುಟಿಲಿಟಿ-ಲಿಂಕ್ಡ್ ಅಗ್ರಿಗೇಷನ್’ (ಯು ಎಲ್ ಎ) ಮಾದರಿಯನ್ನು ರೂಪಿಸಲಾಗಿದೆ ಎಂದು ಜೋಶಿ ತಿಳಿಸಿದರು. ಈ ಮಾದರಿಯಡಿಯಲ್ಲಿ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಸುಮಾರು 30 ಲಕ್ಷ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಗಳನ್ನು ಯೋಜಿಸಲಾಗಿದ್ದು, ಇವುಗಳ ವೇಗದ ಅಳವಡಿಕೆ ಮತ್ತು ಅನುಷ್ಠಾನಕ್ಕೆ ವಿದ್ಯುತ್ ಕಂಪನಿಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು. ಈ ಉಪಕ್ರಮವು ವಿಶೇಷವಾಗಿ 1 ಕಿಲೋವ್ಯಾಟ್ ನಿಂದ 3 ಕಿಲೋವ್ಯಾಟ್ ವರೆಗೆ ವಿದ್ಯುತ್ ಬಳಸುವ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದ್ದು, ಎಲ್ಲರಿಗೂ ಕೈಗೆಟುಕುವ ದರದಲ್ಲಿ ಸ್ವಚ್ಛ ಇಂಧನ ಸಿಗುವಂತೆ ಮಾಡುತ್ತದೆ ಎಂದು ಅವರು ಹೇಳಿದರು. ಈಗಾಗಲೇ 65 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ದೇಶಾದ್ಯಂತ ಸಾರ್ವಜನಿಕರಿಂದ ಅಭೂತಪೂರ್ವ ಭಾಗವಹಿಸುವಿಕೆ ಮತ್ತು ಉತ್ಸಾಹ ಕಂಡುಬರುತ್ತಿದೆ ಎಂದು ಸಚಿವರು ಹೇಳಿದರು. ಭಾರತದ ಸೌರಶಕ್ತಿ ಬೆಳವಣಿಗೆಯು ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಮೊದಲ 50 ಗಿಗಾವ್ಯಾಟ್ ಸಾಮರ್ಥ್ಯ ಸಾಧಿಸಲು 96 ತಿಂಗಳುಗಳು ಬೇಕಾಗಿದ್ದವು ಎಂಬುದನ್ನು ಅವರು ಎತ್ತಿ ತೋರಿಸಿದರು. ಆದರೆ, ಮುಂದಿನ 50 ಗಿಗಾವ್ಯಾಟ್ ಸಾಧಿಸಲು 36 ತಿಂಗಳುಗಳು ಬೇಕಾದವು ಮತ್ತು 100 ಗಿಗಾವ್ಯಾಟ್ ನಿಂದ 150 ಗಿಗಾವ್ಯಾಟ್ ಗೆ ತಲುಪಲು ಕೇವಲ 14 ತಿಂಗಳುಗಳು ಹಿಡಿದವು ಎಂದು ಹೇಳಿದರು. ‘ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ’ ಪ್ರಾರಂಭವಾದಾಗಿನಿಂದ ಮೇ 2026 ಅತ್ಯಂತ ಯಶಸ್ವಿ ತಿಂಗಳಾಗಿದ್ದು, ಒಂದೇ ತಿಂಗಳಲ್ಲಿ ದಾಖಲೆಯ 3.16 ಲಕ್ಷ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಗಳನ್ನು ಮಾಡಲಾಗಿದೆ ಮತ್ತು ಕೇವಲ ಒಂದೇ ದಿನದಲ್ಲಿ 15,000 ಮನೆಗಳು ಸೇರ್ಪಡೆಯಾಗಿವೆ ಎಂದು ಹೇಳಿದರು. ಒಂದು ಲಕ್ಷ ಮನೆಗಳನ್ನು ಯೋಜನೆಗೆ ಸೇರಿಸಲು ಮೊದಲು ತಗಲುತ್ತಿದ್ದ 118 ದಿನಗಳ ಸಮಯವು, ಇಂದು ಕೇವಲ ಎಂಟು ದಿನಗಳಿಗಿಂತಲೂ ಕಡಿಮೆಯಾಗಿದೆ ಮತ್ತು ಈ ವೇಗವು ತಾನಾಗಿಯೇ ಹೆಚ್ಚಾಗಿದೆ ಎಂದು ಸಚಿವರು ಪುನರುಚ್ಚರಿಸಿದರು. ಕೇವಲ ಮೇ 2026 ರಲ್ಲೇ 2,743 ಕೋಟಿ ರೂ. ಸೇರಿದಂತೆ, ಇದುವರೆಗೆ ಒಟ್ಟು 22,750 ಕೋಟಿ ರೂಪಾಯಿಗೂ ಹೆಚ್ಚು ಸಬ್ಸಿಡಿಯನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು. “ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯು ಭಾರತದ ಸ್ವಚ್ಛ ಇಂಧನ ಪರಿವರ್ತನೆ ಮತ್ತು ಇಂಧನ ಸ್ವಾವಲಂಬನೆಯನ್ನು ಉತ್ತೇಜಿಸುವ ಜೊತೆಗೆ, ವಿಶ್ವದ ಅತಿ ದೊಡ್ಡ ವಸತಿ ಸೌರ ಮಾರುಕಟ್ಟೆಗಳಲ್ಲಿ ಒಂದನ್ನು ಸೃಷ್ಟಿಸುತ್ತಿದೆ” ಎಂದು ಹೇಳಿದರು. PM Surya Ghar Muft Bijli Yojana is transforming India's energy landscape at an unprecedented pace.In two years, @PMSuryaGhar Muft Bijli Yojana has crossed the milestone of 40 lakh solar-powered households. With over 65 lakh applications already in the pipeline and a target of… pic.twitter.com/cXk6yWheko— Pralhad Joshi (@JoshiPralhad) June 4, 2026 ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಇಡೀ ವಿಶ್ವವೇ ಇಂಧನ ಅನಿಶ್ಚಿತತೆಯನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಂತಹ ಉಪಕ್ರಮಗಳು ಭಾರತದ ಇಂಧನ ಭದ್ರತೆ ಮತ್ತು ಕಾರ್ಯತಂತ್ರದ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತಿವೆ ಎಂದು ಶ್ರೀ ಜೋಶಿ ಹೇಳಿದರು. ಈ ಯೋಜನೆಗೂ ಮುನ್ನ ತಿಂಗಳಿಗೆ ಸುಮಾರು 7,000 ಇದ್ದ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಗಳ ಸಂಖ್ಯೆ ಇಂದು ತಿಂಗಳಿಗೆ ಮೂರು ಲಕ್ಷಕ್ಕೂ ಅಧಿಕವಾಗಿದೆ. 17 ಲಕ್ಷಕ್ಕೂ ಹೆಚ್ಚು ಕುಟುಂಬಗಳು ‘ಶೂನ್ಯ ವಿದ್ಯುತ್ ಬಿಲ್’ ಸಾಧಿಸಿದ್ದು, ಇದು ಕುಟುಂಬಗಳ ನೇರ ಉಳಿತಾಯವನ್ನು ತೋರಿಸುತ್ತದೆ ಎಂದು ಹೇಳಿದರು. 2047 ರ ವೇಳೆಗೆ ಪ್ರತಿಯೊಂದು ಮನೆಯೂ ಮೇಲ್ಛಾವಣಿ ಸೌರಶಕ್ತಿಯನ್ನು ಹೊಂದಿರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಸಚಿವರು, “ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯು ಒಂದು ಜನಾಂದೋಲನವಾಗಲಿದೆ” ಎಂದರು. ಅಲ್ಲದೆ, ಮುಂದಿನ ದಿನಗಳಲ್ಲಿ ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆಗಳ ವೆಚ್ಚ ಕಡಿಮೆಯಾದಂತೆ ಅವುಗಳನ್ನು ಸಹ ಇದರೊಂದಿಗೆ ಸಂಯೋಜಿಸಲಾಗುವುದು ಮತ್ತು ‘ಮಾದರಿ ಸೌರ ಗ್ರಾಮ’ ಉಪಕ್ರಮದ ಮೂಲಕ ಇದರ ಅಳವಡಿಕೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಜೋಶಿ ಪ್ರಧಾನಮಂತ್ರಿ ಸೂರ್ಯ ಘರ್ ಲೋಗೋ ಮತ್ತು ವಾಟ್ಸಾಪ್ ಬಾಟ್ ಅನ್ನು ಬಿಡುಗಡೆ ಮಾಡಿದರು. ಅವರು ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಡಿಸ್ಕಾಮ್ ಗಳು, ಬ್ಯಾಂಕುಗಳು, ಮಾರಾಟಗಾರರು ಮತ್ತು ಮೇ 2026 ರಲ್ಲಿ ನಡೆದ “ಸೌರ ಮಾಸ” ಅಭಿಯಾನದ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಾಧಕರು ಸೇರಿದಂತೆ ಇತರ ಪಾಲುದಾರರಿಗೆ ‘ಪ್ರಧಾನಮಂತ್ರಿ ಸೂರ್ಯ ಘರ್ ಪ್ರಶಸ್ತಿ’ಗಳನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation PM Awas Yojana: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ ವಿಶ್ವ ಪರಿಸರ ದಿನ: CRPFನಿಂದ ದೇಶಾದ್ಯಂತ ಸಸಿ ನೆಡುವ ಅಭಿಯಾನ