ನವದೆಹಲಿ, ಮೇ 13: ಮಧ್ಯಪ್ರಾಚ್ಯ ಯುದ್ಧ ಪರಿಸ್ಥಿತಿ ಹಾಗೂ ಅಂತರರಾಷ್ಟ್ರೀಯ ಅನಿಶ್ಚಿತತೆಗಳ ನಡುವೆ ಚಿನ್ನ ಖರೀದಿ ಕಡಿಮೆ ಮಾಡಬೇಕು ಮತ್ತು ಇಂಧನವನ್ನು ಮಿತವಾಗಿ ಬಳಸಬೇಕು ಎಂದು ದೇಶದ ಜನತೆಗೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಖುದ್ದು ಅದೇ ದಿಕ್ಕಿನಲ್ಲಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಪ್ರಧಾನಿ ಕಚೇರಿ (ಪಿಎಂಒ) ಇದೀಗ ಪ್ರಧಾನಿ ಭದ್ರತೆಗೆ ನಿಯೋಜನೆಯಾಗಿರುವ ಎಸ್ಪಿಜಿ ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸುವಂತೆ ಸೂಚನೆ ನೀಡಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಲಾಗಿದೆ. ಭಾರತವು ಕಚ್ಚಾ ತೈಲ, ಚಿನ್ನ ಮತ್ತು ಅಡುಗೆ ಎಣ್ಣೆ ಸೇರಿದಂತೆ ಹಲವು ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆ, ಅವುಗಳ ಖರೀದಿಯಿಂದ ದೇಶದ ಆರ್ಥಿಕತೆಯ ಮೇಲೆ ಬೀರುವ ಒತ್ತಡದ ಕುರಿತು ಪ್ರಧಾನಿ ಮೋದಿ ಇತ್ತೀಚೆಗೆ ಮಾತನಾಡಿದ್ದರು. ವಿದೇಶಿ ವಿನಿಮಯ ಉಳಿಸುವ ಉದ್ದೇಶದಿಂದ ಈ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಕರೆ ನೀಡಿದ್ದರು. ಈಗ ತಮ್ಮದೇ ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮುಂದಾಗಿರುವ ಪ್ರಧಾನಿ ಮೋದಿ, ಎಸ್ಪಿಜಿ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಶೇ.50ರಷ್ಟು ಕಡಿತಗೊಳಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದು ಮಿತವ್ಯಯದ ಕ್ರಮಗಳ ಭಾಗವಾಗಿದ್ದು, ಸರ್ಕಾರಿ ವೆಚ್ಚ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಇಂಧನ ಉಳಿತಾಯದ ಜೊತೆಗೆ ಪರಿಸರ ಮಾಲಿನ್ಯ ತಡೆಗಟ್ಟುವಲ್ಲೂ ನೆರವಾಗಲಿದೆ. ಬೆಂಗಾವಲು ಪಡೆಯ ಗಾತ್ರ ಕಡಿಮೆಯಾಗುವುದರಿಂದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಉಂಟಾಗುವ ತೊಂದರೆ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಕ್ರಮಗಳು ಪ್ರಧಾನಿ ಕಚೇರಿಗೆ ಮಾತ್ರ ಸೀಮಿತವಾಗಿಲ್ಲ. ಕೇಂದ್ರ ಸಚಿವರು ಹಾಗೂ ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಇದೇ ರೀತಿಯ ಸಲಹೆ ನೀಡಿರುವ ಪ್ರಧಾನಿ ಮೋದಿ, ಇಂಧನ ಚಾಲಿತ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಮತ್ತು ಬೆಂಗಾವಲು ಪಡೆಯನ್ನು ಆದಷ್ಟು ಕಡಿಮೆ ಮಾಡುವಂತೆ ಕರೆ ನೀಡಿದ್ದಾರೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಭಾರತದ ಮೊದಲ ಹೈಡ್ರೋಜನ್ ರೈಲು: ಪರಿಸರ ಸ್ನೇಹಿ ಸಾರಿಗೆಯತ್ತ ಕ್ರಾಂತಿಕಾರಿ ಹೆಜ್ಜೆ NEET ಎಕ್ಸಾಂನಲ್ಲಿ ಭಾರಿ ಬದಲಾವಣೆ: ಇನ್ಮುಂದೆ ಕಂಪ್ಯೂಟರ್ ಆಧಾರಿತ ಪರೀಕ್ಷೆ