Pahalgam terror attack One year: Has Jammu and Kashmir tourism improved?ಪಹಲ್ಗಾಮ ಭಯೋತ್ಪಾದಕ ದಾಳಿ

ಕಳೆದ ವರ್ಷ 2025ರ ಏಪ್ರಿಲ್‌ 22 ರಂದು ಕಾಶ್ಮೀರದ ಪಹಲ್ಗಾಮನಲ್ಲಿ ನಡೆದ ಭಯೋತ್ಪಾದಕ ದಾಳಿ ಭಾರತವನ್ನು ಬೆಚ್ಚಿಬೀಳಿಸಿತ್ತು. ಲಷ್ಕರ್-ಎ-ತೈಬಾ ಬೆಂಬಲಿತ ದಿ ರೆಸಿಸ್ಟನ್ಸ್ ಫ್ರಂಟ್ ನಡೆಸಿದ ಈ ದಾಳಿಯಲ್ಲಿ, ಪಹಲ್ಗಾಮ್‌ನ ಬೈಸರಣ್ ಮೇವುನಾಡಿನಲ್ಲಿ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದರು. ಈ ದಾಳಿಗೆ ಪ್ರತಿಕಾರವಾಗಿ ಭಾರತ ಮೇ ತಿಂಗಳಲ್ಲಿ “ಆಪರೇಷನ್ ಸಿಂಧೂರ್” ಕಾರ್ಯಾಚರಣೆ ನಡೆಸಿ, ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತು.

ಚೇತರಿಕೆ ಕಂಡ ಪ್ರವಾಸೋದ್ಯಮ

ಈ ದಾಳಿಯ ನಂತರ ಕಾಶ್ಮೀರದಲ್ಲಿ ಪ್ರವಾಸೋದ್ಯಮದಲ್ಲಿ ಭಾರೀ ಕುಸಿತಗೊಂಡಿತ್ತು. ಸುಮಾರು 50 ಪ್ರವಾಸಿ ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಭದ್ರತಾ ಪರಿಶೀಲನೆಗಳ ನಂತರ ಅವುಗಳನ್ನು ಹಂತ ಹಂತವಾಗಿ ಪುನಃ ತೆರೆಯಲಾಯಿತು.

ಈಗ ಪರಿಸ್ಥಿತಿ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಕಾಶ್ಮೀರದ ಪ್ರಸಿದ್ಧ ಇಂದಿರಾ ಗಾಂಧಿ ಸ್ಮಾರಕ ಟ್ಯುಲಿಪ್ ಗಾರ್ಡನ್ (ಮಾರ್ಚ್‌ನಿಂದ ಏಪ್ರಿಲ್ ಮಧ್ಯದವರೆಗೆ ತೆರೆಯಲಾಗಿತ್ತು.) ಈ ವರ್ಷ ಕನಿಷ್ಠ ಮೂರು ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಹೊಸ QR ಕೋಡ್ ವ್ಯವಸ್ಥೆ

ಜಮ್ಮು ಮತ್ತು ಕಾಶ್ಮೀರ ಆಡಳಿತವು ಹೊಸ QR ಕೋಡ್ ಆಧಾರಿತ ಗುರುತು ವ್ಯವಸ್ಥೆಯನ್ನು ಪರಿಚಯಿಸಿದೆ. ಈ ವ್ಯವಸ್ಥೆ ಪೋನಿವಾಲಾಗಳು, ತಳ್ಳುಗಾಡಿ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳು ಹಾಗೂ ಹೊರಗಿನಿಂದ ಬರುವ ಸೇವಾ ಪೂರೈಕೆದಾರರು ಈ QR ಕೋಡ್‌ ಸ್ಕ್ಯಾನ್‌ ಮಾಡಿ ತಮ್ಮ ಸಂಪೂರ್ಣ ಮಾಹಿತಿ ನೀಡಬೇಕು.

ಈ QR ಕೋಡ್‌ಗಳ ಮೂಲಕ ಪ್ರವಾಸಿಗರು ಸೇವಾ ಪೂರೈಕೆದಾರರ ವಿವರಗಳನ್ನು ಸುಲಭವಾಗಿ ಪರಿಶೀಲಿಸಬಹುದು, ಇದರಿಂದ ಪ್ರವಾಸಿಗರ ವಿಶ್ವಾಸವನ್ನು ಹೆಚ್ಚಿಸುವುದು ಉದ್ದೇಶವಾಗಿದೆ.

ಪ್ರತಿ ವ್ಯಕ್ತಿಯ ಮಾಹಿತಿಯನ್ನು ಪೊಲೀಸ್ ಪರಿಶೀಲನೆಗೆ ಒಳಪಡಿಸಿ, ಅಧಿಕೃತವಾಗಿ ನೋಂದಣಿ ಮಾಡಿ, ಅವರಿಗೆ ವಿಶೇಷ QR ಕೋಡ್ ನೀಡಲಾಗಿದೆ. ಈ ಕೋಡ್‌ನಲ್ಲಿ ಅವರ ಆಧಾರ್ ಮತ್ತು ಡ್ರೈವಿಂಗ್ ಲೈಸೆನ್ಸ್ ವಿವರಗಳೂ ಸೇರಿರುತ್ತವೆ. ಪ್ರವಾಸಿಗರು ಅಥವಾ ಭದ್ರತಾ ಸಿಬ್ಬಂದಿ ತಮ್ಮ ಮೊಬೈಲ್ ಮೂಲಕ ಈ ಕೋಡ್ ಅನ್ನು ಸ್ಕ್ಯಾನ್ ಮಾಡಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು ಖಾಸಗಿ ಸುದ್ದಿ ಸಂಸ್ಥೆ ಫಸ್ಟ್‌ಫೋಸ್ಟ್‌ ವರದಿ ಮಾಡಿದೆ.

ಪ್ರವಾಸಿಗರಲ್ಲಿ ಉತ್ಸಾಹ

ಪ್ರವಾಸಿಗರು ಈಗ ಹೆಚ್ಚಿನ ಆತ್ಮವಿಶ್ವಾಸದಿಂದ ಭೇಟಿ ನೀಡುತ್ತಿದ್ದಾರೆ. “ಇಲ್ಲಿ ಬರುವುದು ತುಂಬಾ ಸಂತೋಷದ ಸಂಗತಿ. ಭದ್ರತಾ ವ್ಯವಸ್ಥೆಗಳು ಅತ್ಯುತ್ತಮವಾಗಿವೆ” ಎಂದು ಓರ್ವ ಪ್ರವಾಸಿಗ ಹೇಳಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಫಸ್ಟ್‌ಫೋಸ್ಟ್‌ ವರದಿ ಮಾಡಿದೆ.

“ಈ ಸ್ಥಳ ತುಂಬಾ ಸುರಕ್ಷಿತವಾಗಿದೆ. ಒಂದು ಘಟನೆಯ ಆಧಾರದ ಮೇಲೆ ಸಂಪೂರ್ಣ ಸ್ಥಳವನ್ನು ನಿರ್ಧರಿಸಲು ಆಗುವುದಿಲ್ಲ” ಎಂದು ಮತ್ತೊಬ್ಬ ಪ್ರವಾಸಿಗ ಹೇಳಿದ್ದಾರೆ.

ಮತ್ತೊಬ್ಬ ಪ್ರವಾಸಿಗರು “ಇಲ್ಲಿ ಈಗ ಯಾವುದೇ ಭಯ ಇಲ್ಲ” ಎಂದು ಹೇಳಿ ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರ ಮೇಲೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು.

ವ್ಯಾಪಾರ ಇನ್ನೂ ಚೇತರಿಸಿಕೊಂಡಿಲ್ಲ

ಆದರೆ ಅಂಗಡಿಗಳು, ಹೋಟೆಲ್‌ಗಳು, ಬೀದಿಬದಿ ಅಂಗಡಿಗಳಲ್ಲಿ ವ್ಯಾಪಾರ ಹಾಗೂ ಕಾಶ್ಮೀರಿ ಕೈಗಾರಿಕಾ ವಸ್ತುಗಳ ವ್ಯಾಪಾರ ಇನ್ನೂ ಸಂಪೂರ್ಣವಾಗಿ ಚೇತರಿಕೆಗೊಂಡಿಲ್ಲ.

ಓರ್ವ ವ್ಯಾಪಾರಿ ಹೇಳುವಂತೆ, “ಕಳೆದ ವರ್ಷ ಇದೇ ಸಮಯದಲ್ಲಿ ನಮ್ಮ ಅಂಗಡಿಗಳಲ್ಲಿ ಪ್ರವಾಸಿಗರ ಸಾಲು ಇತ್ತು. ಪ್ರತಿಯೊಬ್ಬರೂ ಸ್ಮರಣಿಕೆಗಳನ್ನು ಖರೀದಿಸುತ್ತಿದ್ದರು. ಆದರೆ ದಾಳಿಯ ನಂತರ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ನಮ್ಮ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ” ಎಂದರು.

ಪ್ರವಾಸಿಗರು ಪಹಲ್ಗಾಮ್‌ಗೆ ಬಂದಾಗ ಮೊದಲೇ ಬೈಸರಣ್ ಬಗ್ಗೆ ಕೇಳುತ್ತಾರೆ. ಆದರೆ ಅದು ಮುಚ್ಚಿರುವುದರಿಂದ ಅವರಿಗೆ ನಿರಾಸೆಯಾಗುತ್ತದೆ.

“ಬೈಸರಣ್ ಪುನಃ ತೆರೆದರೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ ಮತ್ತು ಎಲ್ಲರಿಗೂ, ವಿಶೇಷವಾಗಿ ಪೋನಿವಾಲಾಗಳಿಗೆ ಲಾಭವಾಗುತ್ತದೆ,” ಎಂದು ಸ್ಥಳೀಯರು ಹೇಳಿದ್ದಾರೆ. ಪ್ರಸ್ತುತ, ಓರ್ವ ಪೋನಿವಾಲಾ ದಿನಕ್ಕೆ ಕೇವಲ 500 ರಿಂದ 600 ರೂ. ಮಾತ್ರ ಸಂಪಾದಿಸುತ್ತಿದ್ದಾನೆ ಎಂದು ಖಾಸಗಿ ಸುದ್ದಿ ಸಂಸ್ಥೆ ಎನ್‌ಡಿಟಿವಿ ವರದಿ ಮಾಡಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *