Indian Sage Matanga Maharshi story in Kannadaಸಾಂದರ್ಭಿಕ ಚಿತ್ರ

ಶ್ರೀರಾಮನು ಸೀತಾಪಹರಣದ ನಂತರ, ಅವಳನ್ನು ಅರಸುತ್ತ ಕಾಡಿನಲ್ಲಿ ಅಲೆಯುತ್ತಿರುವಾಗ ಕಬಂಧನೆಂಬ ರಾಕ್ಷಸನು ರಾಮಲಕ್ಷ್ಮಣರನ್ನು ಹಿಡಿದನು. ಆತನ ಬಾಹುಗಳು ಯೋಜನದಷ್ಟು ಉದ್ದವಾಗಿದ್ದವು. ರಾಮಲಕ್ಷ್ಮಣರು ಆ ರಾಕ್ಷಸನ ಬಾಹುಗಳನ್ನು ಕಡಿದು, ಅವನನ್ನು ನಿಗ್ರಹಿಸಿದರು.

ಆಗ ಕಬಂಧನು ದಿವ್ಯರೂಪವನ್ನು ಪಡೆದನು. ಅವನು ರಾಮನಿಗೆ ಸೀತೆಯನ್ನು ಪಡೆಯುವ ಉಪಾಯವನ್ನು ತಿಳಿಸುತ್ತ ಋಷ್ಯಮೂಕ ಪರ್ವತಕ್ಕೆ ಹೋಗುವ ಮಾರ್ಗವನ್ನು ತೋರಿಸಿಕೊಟ್ಟನು. ಅಲ್ಲಿದ್ದ ಪಂಪಾಸರೋವರದ ಬಳಿಯಲ್ಲಿಯೇ ಮತಂಗಮುನಿಗಳ ಆಶ್ರಮವಿದ್ದಿತು. ಅಲ್ಲಿಯೇ ಶ್ರಮಣಿಯಾದ ಶಬರಿಯು ವಾಸವಾಗಿದ್ದಳು. ಮತಂಗರು ಆಗ ಅಲ್ಲಿರಲಿಲ್ಲ. ಆದರೂ ಅವರ ತಪಃಪ್ರಭಾವದಿಂದ ಆ ಪ್ರದೇಶದಲ್ಲಿ ಕಾಡುಪ್ರಾಣಿಗಳು ತೊಂದರೆ ಕೊಡುತ್ತಿರಲಿಲ್ಲ. ನಾನಾ ವಿಧವಾದ ಪಕ್ಷಿಸಂಕುಲದಿಂದ ಅದು ಮನೋಹರ ವಾಗಿದ್ದಿತು.

ಕಬಂಧನು ತೋರಿದ ದಾರಿಯಲ್ಲಿ ನಡೆಯುತ್ತ ರಾಮಲಕ್ಷ್ಮಣರು ಶಬರಿಯ ಆಶ್ರಮವನ್ನು ತಲಪಿದರು. ರಾಮನು ಚಿತ್ರಕೂಟದಲ್ಲಿದ್ದಾಗ ಮತಂಗರು ದಿವ್ಯಪ್ರಕಾಶದ ವಿಮಾನವನ್ನೇರಿ ಸ್ವರ್ಗಕ್ಕೆ ಹೊರಟುಹೋದರೆಂದು ಶಬರಿ ಹೇಳುತ್ತಾಳೆ. ಧರ್ಮಜ್ಞರೂ ಮಹಾತ್ಮರೂ ಆದ ಮಹರ್ಷಿಗಳು ಶ್ರೀರಾಮನು ಆಶ್ರಮಕ್ಕೆ ಬರುವನೆಂದೂ, ಅವನಿಗೆ ಆತಿಥ್ಯ ನೀಡಬೇಕೆಂದೂ ಹೇಳಿ ಹೋಗಿದ್ದರು. ಅದನ್ನು ಕೇಳಿದ ರಾಮನು ಮತಂಗಮುನಿಗಳ ಪ್ರಭಾವವನ್ನು ಕಣ್ಣಾರೆ ಕಾಣಲು ಅಪೇಕ್ಷಿಸಿದನು.

ಆಗ ಶಬರಿಯು ಮಹತ್ತರವಾದ ವನವನ್ನೆಲ್ಲ ರಾಮಲಕ್ಷ್ಮಣರಿಗೆ ತೋರಿಸಿದಳು. ಈ ವನವು ‘ಮತಂಗವನ’ವೆಂದೇ ಪ್ರಸಿದ್ಧವಾಗಿದೆಯೆಂದು ಹೇಳಿದಳು. ಶಬರಿಯು ತನ್ನ ಗುರುಗಳು ಪೂಜೆ ಮಾಡುತ್ತಿದ್ದ ವೇದಿಕೆಯನ್ನು ತೋರಿಸಿದಳು. ಆ ವೇದಿಕೆ ದಿಗ್‌ದಿಗಂತಗಳನ್ನೆಲ್ಲ ಬೆಳಗುತ್ತಿತ್ತು. ಮತಂಗಮುನಿಗಳಿಗೆ ಸಮುದ್ರಸ್ನಾನಕ್ಕಾಗಿ ಅಷ್ಟು ದೂರ ಹೋಗಲು ಶಕ್ತಿಯಿರಲಿಲ್ಲ. ಅವರ ಧ್ಯಾನಮಾತ್ರದಿಂದ ಸಪ್ತಸಮುದ್ರಗಳೂ ಬಂದು ಸೇರುತ್ತಿದ್ದವು. ಅವರು ಸ್ನಾನ ಮಾಡಿ ಹರಡಿದ್ದ ನಾರುಮಡಿಗಳು ಇನ್ನೂ ಒದ್ದೆಯಾಗಿಯೇ ಇದ್ದವು. ಅವರು ದೇವತಾರ್ಚನೆ ಮಾಡಿದ್ದ ಹೂಗಳು ಈಗಲೂ ಬಾಡಿರಲಿಲ್ಲ. ಇದನ್ನೆಲ್ಲ ತೋರಿಸಿದ ಶಬರಿಯು ರಾಮನ ಅನುಜ್ಞೆಯಿಂದ ಗುರುಗಳನ್ನು ಸೇರಿಕೊಳ್ಳಲು ಬಯಸಿದಳು.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *