Indian Sage Jabali Maharshi story in Kannadaಸಾಂದರ್ಭಿಕ ಚಿತ್ರ

ಜಾಬಾಲಿ ಮಹರ್ಷಿ ದಶರಥನ 8 ಜನ ಪ್ರಮುಖ ಪುರೋಹಿತರಲ್ಲಿ ಒಬ್ಬರಾಗಿದ್ದರು. ತಪಸ್ವಿಗಳಾಗಿದ್ದ ಅವರು ದಶರಥನು ನಡೆಸಿದ ಪುತ್ರಕಾಮೇಷ್ಠಿ ಯಾಗದಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಭರತನು ರಾಮನನ್ನು ಕರೆತರಲು ಕಾಡಿಗೆ ಬಂದನು. ಭರತನು ಎಷ್ಟು ವಿಧವಾಗಿ ಪ್ರಾರ್ಥಿಸಿದರೂ ರಾಮನು ಕಾಡಿನಿಂದ ಅಯೋಧ್ಯೆಗೆ ಬರಲು ಒಪ್ಪದಿದ್ದಾಗ ಜಾಬಾಲಿ ಮಹರ್ಷಿಗಳು ಅವನನ್ನು ಒಪ್ಪಿಸಿ ಊರಿಗೆ ಕರೆತರಬೇಕೆಂಬ ಉತ್ಸಾಹದಲ್ಲಿ ಅಥವಾ ರಾಮನ ಸತ್ಯದ ನಿಷ್ಠೆಯನ್ನು ಪರೀಕ್ಷಿಸುವ ಸಲುವಾಗಿ ಕೆಲವು ಮಾತುಗಳನ್ನು ಹೇಳಿದರೆಂದು ರಾಮಾಯಣದ ಅಯೋಧ್ಯಾಕಾಂಡದಲ್ಲಿ ಉಕ್ತವಾಗಿದೆ.

“ಲೋಕದಲ್ಲಿ ಯಾರಿಗೆ ಯಾರು ನೆಂಟರು ಮನುಷ್ಯನು ಬರುವಾಗಲೂ ಹೋಗುವಾಗಲೂ ಒಂಟಿಯಾಗಿಯೇ ಇರುತ್ತಾನೆ. ಯಾರಿಗೆ ಯಾರೂ ನೆಂಟರಲ್ಲ. ಮನುಷ್ಯರಿಗೆ ತಂದೆ, ತಾಯಿ, ಮನೆ, ಹಣ ಎಲ್ಲವೂ ದಾರಿಯಲ್ಲಿ ಸಿಕ್ಕುವ ನೆಲೆಗಳು. ಪಿತ್ರಾರ್ಜಿತವಾದ ರಾಜ್ಯವನ್ನು ಬಿಡುವುದು ತಪ್ಪು ಧರ್ಮದ ಹೆಸರಿನಲ್ಲಿ ಕಷ್ಟಪಡುವವರು ಬರಿಯ ಕಷ್ಟವನ್ನೇ ಅನುಭವಿಸುತ್ತಾರೆ. ಮಹಾಮೇಧಾವಿಯಾದ ನೀನು ಎದುರಿಗೆ ಕಾಣುವುದನ್ನು ಬಿಟ್ಟು ಕಾಣದ ಧರ್ಮಮಾರ್ಗದಲ್ಲಿ ಏಕೆ ಕಷ್ಟಪಡುತ್ತೀಯೇ?” ಎಂದು ರಾಮನಿಗೆ ಹೇಳಿದರು. ಅಂದಿನ ಕಾಲದಲ್ಲಿ ಪ್ರಚಲಿತವಿದ್ದ ಚಾರ್ವಾಕಮತದ ಛಾಯೆಯನ್ನು ಈ ಮಾತುಗಳಲ್ಲಿ ಕಾಣಬಹುದು.

ಜಾಬಾಲಿ ಮುನಿಗಳ ಮಾತಿನಿಂದ ಶ್ರೀರಾಮನ ನಿರ್ಧಾರದಲ್ಲಿ ಸ್ವಲ್ಪವೂ ಸಡಿಲವಾಗಲಿಲ್ಲ. ಅವನಿಗೆ ಜಾಬಾಲಿಗಳು ಅಂತಹವರಲ್ಲವೆಂದೂ ಗೊತ್ತಿತ್ತು. ತನಗೆ ಪ್ರಿಯವನ್ನುಂಟುಮಾಡಲು ಮುನಿಗಳು ಹಾಗೆ ಹೇಳುತ್ತಿದ್ದಾರೆಂಬುದನ್ನು ಅವನು ಬಲ್ಲನು. ಮುಂದೆ ತನ್ನ ಮಾತುಗಳಲ್ಲಿ ಸತ್ಯಸಂಧನಿಗೆ ಇರುವ ಗೌರವವನ್ನು ಅವನು ಸ್ಪಷ್ಟಪಡಿಸುತ್ತಾನೆ. ಚಾರ್ವಾಕಮತದ ಆಚರಣೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಿಕೊಡಲೆಂದೇ ಜಾಬಾಲಿಗಳು ಈ ರೀತಿ ಮಾತನಾಡಿ, ರಾಮನಿಂದ ಅದರ ನಿರಾಕರಣೆಯನ್ನು ನಿರೂಪಿಸಿರುತ್ತಾರೆ. ಸತ್ಯದ ಮಹಿಮೆಯನ್ನು ಜಗತ್ತಿಗೆ ಸಾರಿರುತ್ತಾರೆ. ರಾಮನ ಸತ್ಯಸಂಧತೆಯನ್ನು ತೋರಿಸಿಕೊಟ್ಟಿದ್ದಾರೆ.

ರಾಮನು ಜಾಬಾಲಿಗಳ ಉಪದೇಶವನ್ನು ತಿರಸ್ಕರಿಸಿ, ಧಾರ್ಮಿಕ ಆಚರಣೆಯನ್ನು ಎತ್ತಿಹಿಡಿಯುವ ಮಾತುಗಳನ್ನು ಆಡಿದುದರಿಂದ ಜಾಬಾಲಿಗಳಿಗೆ ಬಹಳ ಸಂತೋಷವೇ ಆಯಿತು. ಆಸ್ತಿಕ ಮತಾವಲಂಬಿಗಳಾದ ಅವರು, “ರಾಮ, ನಾನು ನಾಸ್ತಿಕನಲ್ಲ. ನಾಸ್ತಿಕವಾದವನ್ನು ಸ್ಥಾಪಿಸುತ್ತಲೂ ಇಲ್ಲ. ನಾಸ್ತಿಕರನ್ನು ಅನೇಕಕಡೆಗಳಲ್ಲಿ ವಿರೋಧಿಸಿ ನಾನೇ ಅವರನ್ನು ವಾದದಲ್ಲಿ ಸೋಲಿಸಿದ್ದೇನೆ.

ಕೋಸಲರಾಜ್ಯವು ಅನಾಯಕವಾಗಬಾರದು. ಅದಕ್ಕಾಗಿ, ಪ್ರಜೆಗಳ ಹಿತದೃಷ್ಟಿಯಿಂದ ನಿನ್ನನ್ನು ಹಿಂದಿರುಗಿ ಬರುವಂತೆ ಹೇಳಿದೆ” ಎಂದು ವಿವರಿಸಿದರು. ಇದರಿಂದ ಜಾಬಾಲಿಗಳು ಅಂದಿನ ಕಾಲದಲ್ಲಿ ಧರ್ಮಸಂಸ್ಥಾಪನೆಗಾಗಿಯೂ ಶ್ರಮಿಸಿದ್ದರೆಂಬುದು ಸ್ಪಷ್ಟವಾಗುತ್ತದೆ. ಶ್ರೀರಾಮನನ್ನು ಸಂತೈಸುತ್ತ ವಸಿಷ್ಠರು, “ರಾಮ! ಈ ಲೋಕದ ಉತ್ಪತ್ತಿ ವಿನಾಶಗಳೂ ಜೀವಿಗಳ ಜನನ ಮರಣ ಸ್ವರೂಪವೂ ಜಾಬಾಲಿ ಮುನಿಗಳಿಗೆ ಗೊತ್ತಿದೆ. ಅವರು ನಾಸ್ತಿಕರಲ್ಲ” ಎಂದು ಜಾಬಾಲಿಗಳ ಮನೋಗತವನ್ನು ಅರಿತು ತಿಳಿಸುತ್ತಾರೆ. ವಸಿಷ್ಠರ ವಾಕ್ಯ ಸತ್ಯಪೂರ್ಣವೆಂಬುದರಲ್ಲಿ ಅನುಮಾನವೇ ಇಲ್ಲ.

ಬಾಣಭಟ್ಟನ ‘ಕಾದಂಬರಿ’ಯೆಂಬ ಮಹಾಕೃತಿಯಲ್ಲಿ ಜಾಬಾಲಿ ಮುನಿಗಳನ್ನು ಕುರಿತ ವಿಶೇಷ ವರ್ಣನೆಯನ್ನು ಕಾಣುತ್ತೇವೆ. ಅದರಲ್ಲಿ ವೈಶಂಪಾಯನನೆಂಬ ಗಿಳಿ, ತನ್ನ ಕಥೆಯನ್ನು ಶೂದ್ರಕ ಮಹಾರಾಜನಿಗೆ ವರ್ಣಿಸುತ್ತದೆ. ತಾಯಿಯಿಲ್ಲದ ಆ ಗಿಳಿಮರಿಯನ್ನು ವೃದ್ಧ ತಂದೆ ಬಹಳ ಪ್ರೀತಿಯಿಂದ ಪೋಷಿಸುತ್ತಿತ್ತು. ಒಂದು ಸಲ ಬೇಡನೊಬ್ಬನು ಬಂದು ಮರದಲ್ಲಿದ್ದ ಗಿಳಿಯೇ ಮುಂತಾದ ಪಕ್ಷಿಗಳನ್ನೆಲ್ಲ ಕೊಂದು ತೆಗೆದುಕೊಂಡು ಹೋದನು. ಈ ಮರಿ ಹೇಗೋ ಬದುಕಿಕೊಂಡು ತೆವಳುತ್ತ ಬರುತ್ತಿತ್ತು.

ಹತ್ತಿರದಲ್ಲಿಯೇ ಜಾಬಾಲಿಗಳ ತಪೋವನವಿತ್ತು. ಜಾಬಾಲಿಗಳ ಪುತ್ರರಾದ ಹಾರೀತರು ಉಳಿದ ಮುನಿಕುಮಾರರ ಜೊತೆ ಸ್ನಾನಾರ್ಥವಾಗಿ ನದಿಗೆ ಬರುತ್ತಿದ್ದರು. ಈ ಮರಿಯ ಅವಸ್ಥೆಯನ್ನು ನೋಡಿ ಕನಿಕರಗೊಂಡ ಅವರು ಇನ್ನೂ ರೆಕ್ಕೆಯೂ ಬಲಿಯದ ಆ ಗಿಳಿಯ ಮರಿಯನ್ನು ನದಿಯ ಬಳಿಗೆ ಎತ್ತಿಕೊಂಡು ಹೋಗಿ, ಬೆರಳುಗಳಿಂದ ಹನಿಹನಿಯಾಗಿ ಬಾಯಿಗೆ ನೀರು ಹಾಕಿದರು. ಸ್ವಲ್ಪ ಚೇತರಿಸಿಕೊಂಡ ಮರಿಯನ್ನು ಮರದ ಕೆಳಗೆ ಎಲೆಗಳ ಹಾಸಿಗೆಯನ್ನು ಮಾಡಿ, ಅದರಲ್ಲಿ ಇಟ್ಟು, ತಮ್ಮ ಸ್ನಾನಾಕ್ಷೀಕಾದಿಗಳನ್ನು ಮುಗಿಸಿಕೊಂಡು, ಮರಿಯನ್ನು ಎತ್ತಿಕೊಂಡು ಆಶ್ರಮಕ್ಕೆ ತಂದರು. ಇಲ್ಲಿ ಮರಿಯು ತಾನು ನೋಡುತ್ತಿರುವ ತಪೋವನ ಮತ್ತು ಜಾಬಾಲಿ ಮಹರ್ಷಿಗಳನ್ನು ವರ್ಣಿಸುತ್ತದೆ:

“ಆಶ್ರಮದಲ್ಲಿ ತಾಲ, ತಮಾಲ, ತೆಂಗು ಮುಂತಾದ ಮರಗಳು-ಲತೆಗಳು ಸದಾ ಫಲಪುಷ್ಪಗಳಿಂದ ಕಂಗೊಳಿಸುತ್ತಿದ್ದವು. ನೂರಾರು ಜಿಂಕೆಗಳು ಮರಿಗಳೊಂದಿಗೆ ನಿರ್ಭಯವಾಗಿ ಓಡಾಡುತ್ತಿದ್ದವು. ಋಷಿಕುಮಾರರು ಅಧ್ಯಯನ ಮಾಡುತ್ತಿರುವ ವೇದಧ್ವನಿಗಳು ಎಲ್ಲ ಕಡೆಗಳಲ್ಲೂ ಕೇಳಿಸುತ್ತಿದ್ದವು.

ಮತ್ತೊಂದು ಕಡೆ ನಿರಂತರವಾಗಿ ನಡೆಯುವ ಹೋಮಾದಿಗಳಿಂದ ಧೂಮವು ಮೇಲೇಳುತ್ತಿತ್ತು. ಅದು ಭೂಮಿಗೂ ಸ್ವರ್ಗಕ್ಕೂ ಸೋಪಾನವನ್ನು ನಿರ್ಮಿಸುತ್ತಿರುವಂತೆಯೇ ಕಾಣುತ್ತಿತ್ತು. ಮುನಿಕನೈಯರು ಪಶುಪಕ್ಷಿಗಳಿಗೆಲ್ಲ ಆಹಾರ, ಕಾಳುಗಳನ್ನು ಹಾಕುತ್ತಿದ್ದರು. ಮರಗಳ ಮೇಲೆ ಒದ್ದೆಯಾದ ವಲ್ಕಲಗಳು ಒಣಗಲೆಂದು ಹರಡಲ್ಪಟ್ಟಿದ್ದವು. ಅತಿಥಿಗಳನ್ನು ಸ್ವಾಗತಿಸಿ ಆತಿಥ್ಯ ನೀಡಲೆಂದೇ ಕೆಲವರು ನಿಯಮಿಸಲ್ಪಟ್ಟಿದ್ದರು. ಅಲ್ಲಿ ಎಲ್ಲರೂ ಸಂತುಷ್ಪರು. ಯಾವುದಕ್ಕೂ ಕೊರತೆಯಿಲ್ಲ.

“ಇಂತಹ ಆಶ್ರಮದಲ್ಲಿ ಋಷಿಮುನಿಗಳೊಡನೆ ಧಾರ್ಮಿಕಚರ್ಚೆಯನ್ನು ನಡೆಸುತ್ತ ಜಾಬಾಲಿ ಮಹರ್ಷಿಗಳು ಉಪವಿಷ್ಟರಾಗಿದ್ದರು. ಅವರು ಉಗ್ರತಪೋನಿಷ್ಠರು, ಶಾಪಾನುಗ್ರಹಸಮರ್ಥರು. ಅವರ ಜಟೆಯು ಧರ್ಮಪತಾಕೆಯಂತೆ ಶೋಭೆಯನ್ನು ಪಡೆದಿದ್ದಿತು. ಹಣೆಯ ಮೇಲೆ ಭಸ್ಮ ತ್ರಿಪುಂಡ್ರವು ತ್ರಿಪಥಗೆಯಾದ ಗಂಗೆಗೆ ಸಮಾನವಾಗಿತ್ತು.

ಮೂರ್ತಿಮಂತ ಅಗ್ನಿಯಂತೆ ಅವರು ಶೋಭಿತರಾಗಿದ್ದರು. ಅಂತಹವರ ದರ್ಶನವೇ ಪಾಪನಾಶಕವು. ಅಂತಹ ಮಹರ್ಷಿಗಳಿಂದಲೇ ಧರಿತ್ರಿಯು ಧನ್ಯಳು.” ಹೀಗೆ ಗಿಳಿಯ ಮೂಲಕ ಕವಿಯು ವಿಸ್ತಾರವಾಗಿ ಮುನಿಗಳನ್ನು ವರ್ಣಿಸಿರು ತ್ತಾನೆ.

ಹಾರೀತರು ಶುಕಶಾವಕವನ್ನು ಸಮೀಪದಲ್ಲಿರಿಸಿ, ತಂದೆಗೆ ನಮಸ್ಕರಿಸಿ, ಗಿಳಿಯ ಮರಿಯು ಸಿಕ್ಕಿದ ವೃತ್ತಾಂತವನ್ನು ಅರುಹಿದರು. ಮಹರ್ಷಿಗಳು ಮರಿಯನ್ನು ನೋಡಿದ ಕೂಡಲೇ ಅದರ ಪೂರ್ವಜನ್ಮದ ವೃತ್ತಾಂತವನ್ನೆಲ್ಲ ತಿಳಿದು, ತನ್ನದೇ ಅವಿನಯದ ಫಲವನ್ನು ಅದು ಅನುಭವಿಸುತ್ತಿದೆಯೆಂದು ವಿವರಿಸಿದರು. ಉಳಿದ ಋಷಿಗಳೆಲ್ಲ ಕುತೂಹಲದಿಂದ ಗಿಳಿಮರಿಯ ಪೂರ್ವೇತಿಹಾಸವನ್ನು ತಿಳಿಯಲು ಆಸೆಪಟ್ಟರು. ಆಗ ಮಹರ್ಷಿಗಳು ಗಿಳಿಮರಿಯ ಪೂರ್ವಜನ್ಮದ ವೃತ್ತಾಂತವನ್ನೆಲ್ಲ ತಿಳಿಸಿದರು. ಹೀಗೆ ಕಥೆ ಮುಂದುವರಿಯುತ್ತದೆ.

ಜಾಬಾಲಿಮಹರ್ಷಿಗಳು ಸ್ವತಃ ತಪೋನಿಷ್ಠರಾಗಿದ್ದುಕೊಂಡು, ತಮ್ಮದೇ ಆಶ್ರಮದಲ್ಲಿ ವಿದ್ಯಾರ್ಥಿಗಳಿಗೆ ವೇದಾಭ್ಯಾಸ ಮಾಡಿಸಲು ಗುರುಕುಲವನ್ನು ನಡೆಸುತ್ತ, ಧರ್ಮಮಾರ್ಗವನ್ನು ಅನುಸರಿಸುತ್ತ ಮತ್ತು ಬೋಧಿಸುತ್ತ ಜನರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದ ಮಹಾಮಹಿಮರು.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *