Severe water shortage in Belagavi: Water sources drying upಸಾಂದರ್ಭಿಕ ಚಿತ್ರ

ಬೆಳಗಾವಿ, ಜೂನ್‌.1: ಬೆಳಗಾವಿ (Belagavi) ಜಿಲ್ಲೆಯಾದ್ಯಂತ ಜಲಮೂಲಗಳು ಬತ್ತಿಹೋಗುತ್ತಿದ್ದು ಕುಡಿಯುವ ನೀರಿಗೆ ಪರದಾಡುವ ಆತಂಕ ಎದುರಾಗಿದೆ. ಮುಂಗಾರು ಮಳೆ (Monsoon rain) ವಿಳಂಬವಾಗಿರುವುದರಿಂದ ಗ್ರಾಮೀಣ ಪ್ರದೇಶಗಳು ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಬೆಳಗಾವಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಪೂರೈಸುವ ಪ್ರಮುಖ ಜಲಮೂಲಗಳ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

 ಬೆಳಗಾವಿ ನಗರದ ಪ್ರಮುಖ ಕುಡಿಯುವ ನೀರಿನ ಮೂಲವಾಗಿರುವ, 0.5 ಟಿಎಂಸಿ ಅಡಿ (tmc ft) ಸಾಮರ್ಥ್ಯದ ರಾಕಸಕೊಪ್ಪ ಜಲಾಶಯದಲ್ಲಿ ಕೇವಲ 10 ರಿಂದ 15 ದಿನಗಳಿಗೆ ಸಾಕಾಗುವಷ್ಟು ಮಾತ್ರ ನೀರು ಬಾಕಿ ಉಳಿದಿದೆ.

ಸುಮಾರು ಏಳು ಲಕ್ಷ ಜನಸಂಖ್ಯೆ ಹೊಂದಿರುವ ಬೆಳಗಾವಿ ನಗರಕ್ಕೆ ಪ್ರತಿದಿನ ಸುಮಾರು 130-135 ಮಿಲಿಯನ್ ಲೀಟರ್ (MLD) ನೀರು ಬೇಕಾಗುತ್ತದೆ. ಈ ನೀರನ್ನು ಮುಖ್ಯವಾಗಿ ಎರಡು ಜಲಾಶಯಗಳಿಂದ ಪಡೆಯಲಾಗುತ್ತದೆ.

ತೀವ್ರವಾದ ಬಿಸಿಲಿನ ಬೇಗೆಯಿಂದಾಗಿ ಆವಿಯಾಗುವಿಕೆ ಹೆಚ್ಚಾಗಿದ್ದು ಇದರಿಂದ ರಾಕಸಕೊಪ್ಪ ಮತ್ತು ಹಿಡಕಲ್ ಜಲಾಶಯಗಳಲ್ಲಿ ನೀರು ವೇಗವಾಗಿ ಖಾಲಿಯಾಗುತ್ತಿದೆ. ಇದು ನೀರು ಪೂರೈಕೆಯ ಸುಸ್ಥಿರತೆಯ ಬಗ್ಗೆ ಆತಂಕ ಮೂಡಿಸಿದೆ.

0.5 ಟಿಎಂಸಿ ಅಡಿ ಸಾಮರ್ಥ್ಯದ ರಾಕಸಕೊಪ್ಪ ಜಲಾಶಯದಲ್ಲಿ ಸದ್ಯ 0.05 ಟಿಎಂಸಿ ಅಡಿಗಿಂತಲೂ ಕಡಿಮೆ ನೀರಿದೆ. ಹಿಡಕಲ್ ಜಲಾಶಯದಲ್ಲಿ ಸದ್ಯ 6.8 ಟಿಎಂಸಿ ಅಡಿ ನೀರಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 10 ಟಿಎಂಸಿ ಅಡಿ ನೀರು ಲಭ್ಯವಿತ್ತು.

ಸವದತ್ತಿಯ ಮಲಪ್ರಭಾ ಜಲಾಶಯದ ನೀರಿನ ಮಟ್ಟವೂ ವೇಗವಾಗಿ ಕುಸಿಯುತ್ತಿದೆ. ಇಲ್ಲಿ ಬಳಸಬಹುದಾದ ನೀರಿನ ಸಂಗ್ರಹ ಸುಮಾರು 5.9 ಟಿಎಂಸಿ ಅಡಿಯಷ್ಟಿದೆ. ಮಲಪ್ರಭಾ ನದಿಯ ನೀರು ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲದೆ ಸವದತ್ತಿ ಮತ್ತು ರಾಮದುರ್ಗ ತಾಲೂಕುಗಳ 40 ಕ್ಕೂ ಹೆಚ್ಚು ಗ್ರಾಮಗಳ ದಾಹ ನೀಗಿಸುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಟ್ಯಾಂಕರ್ ನೀರು

ಜಲಮೂಲಗಳು ಒಣಗುತ್ತಿರುವುದರಿಂದ, ಗ್ರಾಮೀಣ ಬೆಳಗಾವಿಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದೇ ಜೀವನಾಡಿಯಾಗಿದೆ. ಹಲವಾರು ಹಳ್ಳಿಗಳಲ್ಲಿ, ವಿಶೇಷವಾಗಿ ಅಥಣಿ ಮತ್ತು ರಾಮದುರ್ಗ ತಾಲೂಕುಗಳಲ್ಲಿ ನಿವಾಸಿಗಳು ದೈನಂದಿನ ಟ್ಯಾಂಕರ್ ಸರಬರಾಜನ್ನು ಅವಲಂಬಿಸಿದ್ದಾರೆ.

ಜಿಲ್ಲೆಯ 60ಕ್ಕೂ ಹೆಚ್ಚು ಗ್ರಾಮಗಳು ನೀರಿನ ಅಭಾವ ಎದುರಿಸುತ್ತಿದ್ದು, ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪೂರೈಸಲಾಗುತ್ತಿದೆ. ಬೈಲಹೊಂಗಲ, ಸವದತ್ತಿ, ರಾಮದುರ್ಗ ಮತ್ತು ಖಾನಾಪುರ ತಾಲೂಕುಗಳ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಅಥಣಿ ಮತ್ತು ರಾಯಬಾಗ ತಾಲೂಕುಗಳ 20 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಿಗೆ ಟ್ಯಾಂಕರ್‌ಗಳು ಮತ್ತು ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಅಧಿಕಾರಿಗಳ ಮುಂದಿರುವ ಸವಾಲು

ಮಲಪ್ರಭಾ ಜಲಾಶಯದಲ್ಲಿ ಉಳಿದಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದು ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ನೀರಿನ ಹಂಚಿಕೆ ಮತ್ತು ಕುಡಿಯುವ ನೀರಿನ ನಿರ್ವಹಣೆ ಕುರಿತು ನಿರ್ಧಾರ ಕೈಗೊಳ್ಳಲು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದು ನೀರಾವರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿ ತಾಲೂಕಿನಲ್ಲಿ ಹೆಲ್ಪ್‌ಲೈನ್‌ಗಳನ್ನು ಸ್ಥಾಪಿಸಲಾಗುವುದು ಮತ್ತು ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ನೀರು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂದೆ ಟೈಮ್ಸ್‌ ಆಫ್‌ ಇಂಡಿಯಾಗದೆ ತಿಳಿಸಿದ್ದಾರೆ.

ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಒ ಕಿರಣ್ ಮಾತನಾಡಿ, ಪೀಡಿತ ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಜಲಾಶಯಗಳ ಮಟ್ಟದ ಕೋಷ್ಟಕ

ಜಲಾಶಯಒಟ್ಟು ಸಾಮರ್ಥ್ಯಪ್ರಸ್ತುತ ಮಟ್ಟ (ಮೇ 31 ರಂತೆ)
ರಾಕಸಕೊಪ್ಪ0.5 ಟಿಎಂಸಿ ಅಡಿ0.05 ಟಿಎಂಸಿ ಅಡಿಗಿಂತ ಕಡಿಮೆ
ಹಿಡಕಲ್51 ಟಿಎಂಸಿ ಅಡಿ6.8 ಟಿಎಂಸಿ ಅಡಿ
ಮಲಪ್ರಭಾ37.73 ಟಿಎಂಸಿ ಅಡಿ5.9 ಟಿಎಂಸಿ ಅಡಿ

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *