ಭಾರತದ ಸಂಸ್ಕೃತಿ, ಭಕ್ತಿ ಮತ್ತು ಪುರಾಣಗಳಲ್ಲಿ ಅತ್ಯಂತ ಪವಿತ್ರ ಸ್ಥಾನ ಪಡೆದಿರುವ ನದಿ ಎಂದರೆ ಗಂಗಾ. ಹಿಂದೂ ಧರ್ಮದಲ್ಲಿ ಗಂಗೆಯನ್ನು ಕೇವಲ ನದಿಯಾಗಿ ನೋಡಲಾಗುವುದಿಲ್ಲ; ಅವಳು ದೇವಿಯ ರೂಪದಲ್ಲಿ ಪೂಜಿಸಲ್ಪಡುವ ದೈವಿಕ ಶಕ್ತಿ. ಗಂಗಾಜಲವು ಪಾಪಗಳನ್ನು ತೊಳೆದು ಆತ್ಮಶುದ್ಧಿಯನ್ನು ನೀಡುತ್ತದೆ ಎಂಬ ನಂಬಿಕೆ ಸಾವಿರಾರು ವರ್ಷಗಳಿಂದ ಜೀವಂತವಾಗಿದೆ. ಆದರೆ ಗಂಗೆಯು ಭೂಮಿಗೆ ಹೇಗೆ ಬಂದಳು? ಏಕೆ ಬಂದಳು? ಎಂಬ ಪ್ರಶ್ನೆಗೆ ಪುರಾಣಗಳಲ್ಲಿ ಅದ್ಭುತ ಕಥೆಯೊಂದು ದೊರೆಯುತ್ತದೆ. ಭಗೀರಥನ ಸಂಕಲ್ಪ ಪುರಾಣಗಳ ಪ್ರಕಾರ, ಇಕ್ಷ್ವಾಕು ವಂಶದ ರಾಜನಾದ ಸಗರನು ಮಹಾಯಜ್ಞವೊಂದನ್ನು ನಡೆಸುತ್ತಿದ್ದನು. ಆ ಯಜ್ಞದ ಅಶ್ವವನ್ನು ದೇವೇಂದ್ರನು ಕದಿದು ಮಹರ್ಷಿ ಕಪಿಲರ ಆಶ್ರಮದ ಬಳಿ ಬಿಟ್ಟನು. ಅದನ್ನು ಹುಡುಕುತ್ತ ಬಂದ ಸಗರನ ಅರವತ್ತು ಸಾವಿರ ಮಂದಿ ಪುತ್ರರು ಕಪಿಲ ಮಹರ್ಷಿಯನ್ನು ತಪ್ಪಾಗಿ ಆರೋಪಿಸಿದರು. ಅವರ ಧ್ಯಾನಕ್ಕೆ ಭಂಗ ಉಂಟಾದ ಕಾರಣ, ಮಹರ್ಷಿಯ ಕೋಪಾಗ್ನಿಯಿಂದ ಅವರು ಭಸ್ಮರಾದರು. ಅವರ ಆತ್ಮಗಳಿಗೆ ಮೋಕ್ಷ ದೊರೆಯಲಿಲ್ಲ. ಅನೇಕ ಪೀಳಿಗೆಗಳ ನಂತರ ಸಗರನ ವಂಶಸ್ಥನಾದ ರಾಜ ಭಗೀರಥನು ತನ್ನ ಪೂರ್ವಜರಿಗೆ ಮುಕ್ತಿ ದೊರಕಿಸಬೇಕು ಎಂದು ಸಂಕಲ್ಪ ಮಾಡಿದರು. ಅದಕ್ಕಾಗಿ ಭೂಮಿಗೆ ಸ್ವರ್ಗದಲ್ಲಿದ್ದ ಗಂಗೆಯನ್ನು ತರಬೇಕೆಂದು ನಿರ್ಧರಿಸಿದನು. ಭಗೀರಥನ ತಪಸ್ಸು ಭಗೀರಥನು ಸಾವಿರಾರು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದನು. ಅವನ ಭಕ್ತಿ ಮತ್ತು ತಪಸ್ಸಿಗೆ ಮೆಚ್ಚಿದ ಬ್ರಹ್ಮ ದೇವರು ಗಂಗೆಯನ್ನು ಭೂಮಿಗೆ ಕಳುಹಿಸಲು ಒಪ್ಪಿದರು. ಆದರೆ ಒಂದು ದೊಡ್ಡ ಸಮಸ್ಯೆ ಎದುರಾಯಿತು. ಗಂಗೆಯ ಪ್ರವಾಹವು ಅಪಾರ ಶಕ್ತಿಯುತವಾಗಿತ್ತು. ಅವಳು ನೇರವಾಗಿ ಭೂಮಿಗೆ ಇಳಿದರೆ ಭೂಮಿ ಸಂಪೂರ್ಣ ನಾಶವಾಗುತ್ತಿತ್ತು. ಆಗ ಬ್ರಹ್ಮನು ಭಗೀರಥನಿಗೆ ಮಹಾದೇವ ಶಿವನನ್ನು ಪ್ರಾರ್ಥಿಸಬೇಕೆಂದು ಹೇಳಿದರು. ಶಿವನ ಜಟೆಯಲ್ಲಿ ಗಂಗೆಯ ಅವತರಣ ಭಗೀರಥನು ಶಿವನನ್ನು ಆರಾಧಿಸಿದನು. ಶಿವನು ಭಗೀರಥನ ಭಕ್ತಿಗೆ ಮೆಚ್ಚಿ ಗಂಗೆಯ ವೇಗವನ್ನು ತನ್ನ ಜಟೆಯಲ್ಲಿ ಹಿಡಿಯಲು ಒಪ್ಪಿದನು. ಸ್ವರ್ಗದಿಂದ ಬೆಳ್ಳಿಯ ಹರಿವಿನಂತೆ ಧುಮುಕಿದ ಗಂಗೆಯು ಭಾರೀ ಗರ್ಜನೆಯೊಂದಿಗೆ ಭೂಮಿಯತ್ತ ಬಂದಳು. ಆದರೆ ಶಿವನು ಅವಳನ್ನು ತನ್ನ ಜಟಾಮಂಡಲದಲ್ಲಿ ಬಂಧಿಸಿ ಅವಳ ಅತೀವ ಶಕ್ತಿಯನ್ನು ನಿಯಂತ್ರಿಸಿದನು. ನಂತರ ನಿಧಾನವಾಗಿ ಅವಳನ್ನು ಭೂಮಿಗೆ ಹರಿಯಲು ಬಿಡಲಾಯಿತು. ಈ ಘಟನೆಯನ್ನು “ಗಂಗಾ ಅವತರಣ” ಎಂದು ಕರೆಯಲಾಗುತ್ತದೆ. ಜಹ್ನು ಮಹರ್ಷಿ ಮತ್ತು ಗಂಗೆಯ ಕಥೆ ಭಗೀರಥನು ಗಂಗೆಯನ್ನು ಭೂಮಿಗೆ ಕರೆತಂದು ತನ್ನ ಪೂರ್ವಜರ ಆತ್ಮಗಳಿಗೆ ಮೋಕ್ಷ ದೊರಕಿಸುವ ಉದ್ದೇಶದಿಂದ ಸಾಗುತ್ತಿದ್ದಾಗ, ಗಂಗೆಯ ಪ್ರವಾಹವು ಅತ್ಯಂತ ವೇಗವಾಗಿ ಹರಿಯುತ್ತಿತ್ತು. ಆ ಹರಿವಿನಲ್ಲಿ ಜಹ್ನು ಮಹರ್ಷಿಯ ಆಶ್ರಮವೂ ಮುಳುಗುವ ಪರಿಸ್ಥಿತಿ ಉಂಟಾಯಿತು. ತಮ್ಮ ಯಜ್ಞ ಮತ್ತು ತಪಸ್ಸಿಗೆ ಅಡ್ಡಿಯಾದ ಕಾರಣ ಜಹ್ನು ಮಹರ್ಷಿಗಳು ಕೋಪಗೊಂಡರು. ತಮ್ಮ ಯೋಗಶಕ್ತಿಯಿಂದ ಅವರು ಸಂಪೂರ್ಣ ಗಂಗಾ ನದಿಯನ್ನೇ ಕುಡಿದುಬಿಟ್ಟರು ಎಂದು ಪುರಾಣಗಳು ಹೇಳುತ್ತವೆ. ಗಂಗೆಯು ಕಾಣೆಯಾಗಿದ್ದರಿಂದ ದೇವತೆಗಳು ಮತ್ತು ಭಗೀರಥನು ಆತಂಕಗೊಂಡರು. ಅವರು ಜಹ್ನು ಮಹರ್ಷಿಯನ್ನು ಪ್ರಾರ್ಥಿಸಿ ಗಂಗೆಯನ್ನು ಮತ್ತೆ ಬಿಡುಗಡೆ ಮಾಡುವಂತೆ ಬೇಡಿಕೊಂಡರು. ಮಹರ್ಷಿಗಳು ಕರುಣೆಯಿಂದ ತಮ್ಮ ಕಿವಿಯಿಂದ ಗಂಗೆಯನ್ನು ಹೊರಬಿಟ್ಟರು. ಆ ದಿನದಿಂದ ಗಂಗೆಗೆ “ಜಾಹ್ನವಿ ಎಂಬ ಹೆಸರೂ ಬಂದಿತು. “ಜಾಹ್ನವಿ” ಎಂದರೆ “ಜಹ್ನು ಮಹರ್ಷಿಯ ಪುತ್ರಿ” ಎಂಬ ಅರ್ಥ. ಪೂರ್ವಜರ ಮುಕ್ತಿ ಭಗೀರಥನು ಗಂಗೆಯನ್ನು ತನ್ನ ಪೂರ್ವಜರು ಭಸ್ಮವಾಗಿದ್ದ ಸ್ಥಳಕ್ಕೆ ಕರೆದುಕೊಂಡು ಹೋದನು. ಗಂಗೆಯ ಪವಿತ್ರ ಜಲ ಸ್ಪರ್ಶಿಸಿದ ಕ್ಷಣವೇ ಸಾಗರ ಪುತ್ರರ ಆತ್ಮಗಳಿಗೆ ಮೋಕ್ಷ ದೊರೆಯಿತು. ಈ ಕಾರಣದಿಂದಲೇ ಗಂಗೆಯನ್ನು “ಭಗೀರಥಿ” ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಗಂಗೆಯ ಕಥೆಯಲ್ಲಿರುವ ಸಂದೇಶಗಳು ಗAಗೆಯ ಅವತರಣದ ಕಥೆ ಅನೇಕ ಜೀವನ ಮೌಲ್ಯಗಳನ್ನು ಸಾರುತ್ತದೆ. ಭಗೀರಥನ ಅಚಲ ಸಂಕಲ್ಪ, ತಪಸ್ಸು ಮತ್ತು ಭಕ್ತಿ ನಮಗೆ ಧೈರ್ಯ, ಸಹನೆ ಹಾಗೂ ನಿಷ್ಠೆಯ ಮಹತ್ವವನ್ನು ತಿಳಿಸುತ್ತದೆ. ಎಷ್ಟೇ ಕಷ್ಟಗಳು ಬಂದರೂ ದೃಢ ಸಂಕಲ್ಪ ಮತ್ತು ಪರಿಶ್ರಮದಿಂದ ಅಸಾಧ್ಯವನ್ನೂ ಸಾಧಿಸಬಹುದು ಎಂಬುದನ್ನು ಈ ಕಥೆ ಬೋಧಿಸುತ್ತದೆ. ಮತ್ತೊಂದೆಡೆ, ಗಂಗೆಯ ಅಪಾರ ಶಕ್ತಿಯನ್ನು ಶಿವನು ತನ್ನ ಜಟೆಯಲ್ಲಿ ನಿಯಂತ್ರಿಸಿದ ಘಟನೆ, ಯಾವುದೇ ಶಕ್ತಿಗೂ ಜ್ಞಾನ ಮತ್ತು ನಿಯಂತ್ರಣ ಅಗತ್ಯವೆಂಬ ಮಹತ್ವದ ಸಂದೇಶವನ್ನು ನೀಡುತ್ತದೆ. ನಿಯಂತ್ರಣವಿಲ್ಲದ ಶಕ್ತಿ ವಿನಾಶಕಾರಿಯಾಗಬಹುದು ಎಂಬ ಸತ್ಯವನ್ನು ಇದು ಸೂಚಿಸುತ್ತದೆ. ಗಂಗೆಯು ಕೇವಲ ದೇಹವನ್ನು ಶುದ್ಧಿಗೊಳಿಸುವ ನದಿಯಲ್ಲ; ಅವಳು ಆತ್ಮಶುದ್ಧಿ, ಪವಿತ್ರತೆ ಮತ್ತು ಮೋಕ್ಷದ ಸಂಕೇತವಾಗಿದ್ದಾಳೆ. ಗಂಗಾಜಲವು ಮಾನವನ ಮನಸ್ಸಿನ ಅಶುದ್ಧತೆಗಳನ್ನು ದೂರ ಮಾಡಿ ಆತ್ಮಿಕ ಶಾಂತಿಯನ್ನು ನೀಡುತ್ತದೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ನೆಲೆಸಿದೆ. ಇದೇ ವೇಳೆ ಋಷಿ ಕಣ್ವರ ಉಪದೇಶಗಳು ಪ್ರಕೃತಿಯನ್ನು ದೈವಸ್ವರೂಪವಾಗಿ ಕಾಣುವ ಸಂದೇಶವನ್ನು ಸಾರುತ್ತವೆ. ನದಿಗಳನ್ನು ಕೇವಲ ಜಲಮೂಲಗಳಾಗಿ ಅಲ್ಲ, ಜೀವದಾಯಕ ಶಕ್ತಿಗಳಾಗಿ ಗೌರವಿಸಿ ರಕ್ಷಿಸಬೇಕು ಎಂಬ ಪಾಠವನ್ನು ಈ ಕಥೆ ನಮಗೆ ನೀಡುತ್ತದೆ. ಸಾಂಸ್ಕೃತಿಕ ಮಹತ್ವ ಗಂಗೆಯ ತೀರಗಳಲ್ಲಿ ಹರಿದ್ವಾರ, ವಾರಾಣಸಿ, ಗಂಗೋತ್ರಿ ಮುಂತಾದ ಅನೇಕ ಪವಿತ್ರ ಕ್ಷೇತ್ರಗಳು ನಿರ್ಮಾಣಗೊಂಡಿವೆ. ಗಂಗಾ ದಶಹರಾ ಹಬ್ಬವು ಅವಳ ಭೂಮಿಗಾಗಮನವನ್ನು ಸ್ಮರಿಸುತ್ತದೆ. ಭಾರತೀಯ ಸಾಹಿತ್ಯ, ಕಲೆ, ಶಿಲ್ಪ ಮತ್ತು ಸಂಗೀತದಲ್ಲಿಯೂ ಗಂಗೆಯ ಕಥೆ ಅಮರವಾಗಿದೆ. ಗಂಗೆಯ ಭೂಮಿಗೆ ಆಗಮನದ ಕಥೆ ಕೇವಲ ಪುರಾಣಗಾಥೆಯಲ್ಲ, ಅದು ಭಕ್ತಿ, ತ್ಯಾಗ, ಸಂಕಲ್ಪ ಮತ್ತು ದೈವಿಕ ಕೃಪೆಯ ಮಹಾನ್ ಸಂದೇಶವಾಗಿದೆ. ಭಗೀರಥನ ಅಚಲ ತಪಸ್ಸು, ಶಿವನ ಕರುಣೆ, ಜಹ್ನು ಮಹರ್ಷಿಯ ತಪೋಬಲ ಮತ್ತು ಋಷಿ ಕಣ್ವರ ಜ್ಞಾನೋಪದೇಶ ಮಾನವ ಪ್ರಯತ್ನ ಮತ್ತು ದೈವಿಕ ಅನುಗ್ರಹ ಒಂದಾದಾಗ ಅಸಾಧ್ಯವೂ ಸಾಧ್ಯವಾಗುತ್ತದೆ ಎಂಬುದನ್ನು ಸಾರುತ್ತವೆ. ಗಂಗೆಯು ಕೇವಲ ನದಿಯಲ್ಲ, ಅವಳು ಪವಿತ್ರತೆ, ಆತ್ಮಶುದ್ಧಿ ಮತ್ತು ಜೀವದಾಯಕ ಶಕ್ತಿಯ ಪ್ರತೀಕವಾಗಿದೆ. ಪ್ರಕೃತಿಯನ್ನು ದೇವತಾಸ್ವರೂಪವಾಗಿ ಕಾಣುವ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಈ ಕಥೆ ನಮಗೆ ಮನದಟ್ಟು ಮಾಡುತ್ತದೆ. ಆದ್ದರಿಂದ ಗಂಗೆಯನ್ನು ಗೌರವಿಸುವುದು ಎಂದರೆ ಕೇವಲ ಒಂದು ನದಿಯನ್ನು ಪೂಜಿಸುವುದಲ್ಲ, ಜೀವನವನ್ನು ಪವಿತ್ರವಾಗಿ ಮತ್ತು ಸಮತೋಲನದಿಂದ ನಡೆಸುವ ಮೌಲ್ಯಗಳನ್ನು ಗೌರವಿಸುವುದಾಗಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಭಾರತದ ಬಟ್ಟೆಗೆ ರೋಮ್ ಸಾಮ್ರಾಜ್ಯವೇ ಫಿದಾ ಆಗಿತ್ತು! ನಿಮಗೆ ಗೊತ್ತಾ? ಸಂಪೂರ್ಣ ಮಹಾಭಾರತ ಕಂಡ ಕೆಲವರಲ್ಲಿ ಒಬ್ಬ, ಯುದ್ಧ ಒಂದೇ ನಿಮಿಷದಲ್ಲಿ ಮುಗಿಸಬಲ್ಲವನಾಗಿದ್ದ ಬರ್ಬರೀಕ